ನಮ್ಮ ಮೆಟ್ರೋ ಹಳದಿ ಮಾರ್ಗ: ಬೊಮ್ಮಸಂದ್ರ ನಿಲ್ದಾಣಕ್ಕೆ ತೈವಾನ್‌ ಕಂಪನಿಯ ಹೆಸರು! ಕಾರಣ ಇಲ್ಲಿದೆ

|

Updated on: Dec 10, 2024 | 12:57 PM

ಬೆಂಗಳೂರು ಮೆಟ್ರೋದ ಹಳದಿ ಮಾರ್ಗದ ಬೊಮ್ಮಸಂದ್ರ ನಿಲ್ದಾಣದ ನಿರ್ಮಾಣ ಹಾಗೂ ನಾಮಕರಣ ಹಕ್ಕುಗಳನ್ನು ಡೆಲ್ಟಾ ಎಲೆಕ್ಟ್ರಾನಿಕ್ಸ್ 65 ಕೋಟಿ ರೂಪಾಯಿಗೆ ಗಳಿಸಿದೆ. ಇದು ಬಿಎಂಆರ್​​ಸಿಎಲ್‌ನ ಇನೋವೇಟಿವ್ ಫೈನಾನ್ಸಿಂಗ್ ಮೆಕ್ಯಾನಿಸಂ ಯೋಜನೆಯ ಭಾಗವಾಗಿದೆ. ಈ ಒಪ್ಪಂದದಿಂದ ಮೆಟ್ರೋ ನಿರ್ಮಾಣಕ್ಕೆ ಹಣಕಾಸಿನ ನೆರವು ದೊರೆಯಲಿದೆ.

ನಮ್ಮ ಮೆಟ್ರೋ ಹಳದಿ ಮಾರ್ಗ: ಬೊಮ್ಮಸಂದ್ರ ನಿಲ್ದಾಣಕ್ಕೆ ತೈವಾನ್‌ ಕಂಪನಿಯ ಹೆಸರು! ಕಾರಣ ಇಲ್ಲಿದೆ
ನಮ್ಮ ಮೆಟ್ರೋ
Follow us on

ಬೆಂಗಳೂರು, ಡಿಸೆಂಬರ್ 10: ನಮ್ಮ ಮೆಟ್ರೋ ಹಳದಿ ಮಾರ್ಗದ ಬೊಮ್ಮಸಂದ್ರ ನಿಲ್ದಾಣ ನಿರ್ಮಾಣ ಸಹಭಾಗಿತ್ವ ಹಾಗೂ ನಾಮಕರಣದ ವಿಚಾರವಾಗಿ ಬೆಂಗಳೂರು ಮೆಟ್ರೊ ರೈಲು ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್​​ಸಿಎಲ್) ಮತ್ತು ತೈವಾನ್‌ನ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಕಂಪನಿ ಡೆಲ್ಟಾ ಎಲೆಕ್ಟ್ರಾನಿಕ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸೋಮವಾರ ಒಪ್ಪಂದಕ್ಕೆ ಸಹಿ ಹಾಕಿವೆ. ಇದರಂತೆ, ಹಳದಿ ಮಾರ್ಗದಲ್ಲಿರುವ ಬೊಮ್ಮಸಂದ್ರ ನಿಲ್ದಾಣದ ನಿರ್ಮಾಣದಲ್ಲಿ ಸಹಭಾಗಿತ್ವ ಹಾಗೂ ನಾಮಕರಣದ ಹಕ್ಕುಗಳನ್ನು ಡೆಲ್ಟಾ ಎಲೆಕ್ಟ್ರಾನಿಕ್ಸ್​​ಗೆ ನೀಡಲಾಗುತ್ತದೆ. ಹೀಗಾಗಿ ಬೊಮ್ಮಸಂದ್ರ ನಿಲ್ದಾಣದ ಹೆಸರು ಡೆಲ್ಟಾ ಎಲೆಕ್ಟ್ರಾನಿಕ್ಸ್ ಬೊಮ್ಮಸಂದ್ರ ನಿಲ್ದಾಣ ಎಂದಾಗಲಿದೆ.

65 ಕೋಟಿ ರೂ. ಒಪ್ಪಂದ

30 ವರ್ಷಗಳ ಅವಧಿಗೆ ನಾಮಕರಣದ ಹಕ್ಕುಗಳನ್ನು ಹೊಂದಲು ಕಂಪನಿಯು ಬಿಎಂಆರ್‌ಸಿಎಲ್‌ಗೆ 65 ಕೋಟಿ ರೂಪಾಯಿಗಳನ್ನು ಪಾವತಿಸಲಿದೆ ಎಂದು ಬಿಎಂಆರ್​ಸಿಎಲ್ ಅಧಿಕೃತ ಪ್ರಕಟಣೆ ತಿಳಿಸಿದೆ. ಹಳದಿ ಮಾರ್ಗದ ನಿಲ್ದಾಣಗಳ ನಿರ್ಮಾಣ ಹಾಗೂ ನಾಮಕರಣ ಸಂಬಂಧ ಮಾಡಿಕೊಂಡ ಮೂರನೇ ಒಪ್ಪಂದ ಇದಾಗಿದೆ.

ಇನ್ಫೋಸಿಸ್, ಬಯೋಕಾನ್​ನಿಂದಲೂ ಒಪ್ಪಂದ

ಕೋನಪ್ಪನ ಅಗ್ರಹಾರ ಮೆಟ್ರೋ ನಿಲ್ದಾಣ ನಾಮಕರಣದ ಹಕ್ಕಿಗೆ ಇನ್ಫೋಸಿಸ್ ಫೌಂಡೇಶನ್ ಸಹಿ ಹಾಕಿದ್ದರೆ, ಹೆಬ್ಬಗೋಡಿ ನಿಲ್ದಾಣಕ್ಕೆ ಬಿಎಂಆರ್​​ಸಿಎಲ್ ಜತೆ ಬಯೋಕಾನ್ ಫೌಂಡೇಶನ್ ಒಪ್ಪಂದ ಮಾಡಿಕೊಂಡಿದೆ.

ಬಿಎಂಆರ್​ಸಿಎಲ್ ಹೇಳಿದ್ದೇನು?

ಇನೋವೇಟಿವ್ ಫೈನಾನ್ಸಿಂಗ್ ಮೆಕ್ಯಾನಿಸಂ ಯೋಜನೆಯಡಿ ಈ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದಕ್ಕೆ ರಾಜ್ಯ ಸರ್ಕಾರದ ಅನುಮೋದನೆ ಪಡೆಯಲಾಗುವುದು ಎಂದು ಬಿಎಂಆರ್​​ಸಿಎಲ್ ಪ್ರಕಟಣೆ ತಿಳಿಸಿದೆ.

10 ಕೋಟಿ ರೂ. ಮೊತ್ತವನ್ನು ಈ ಹಿಂದೆಯೇ ಪಾವತಿಸಲಾಗಿದ್ದು, ಉಳಿದ ಮೊತ್ತ 55 ಕೋಟಿ ರೂ.ವನ್ನು ಈಗ ಪಾವತಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ. ಡೆಲ್ಟಾ ಎಲೆಕ್ಟ್ರಾನಿಕ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸುಸ್ಥಿರ ನಗರಾಭಿವೃದ್ಧಿ ಮತ್ತು ನಗರ ಸಾರಿಗೆಗೆ ಬೆಂಬಲ ನೀಡಲು ಮುಂದೆ ಬಂದಿರುವುದು ನಮಗೆ ಸಂತಸ ಉಂಟುಮಾಡಿದ ಎಂದು ಬಿಎಂಆರ್​ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಎಂ ಮಹೇಶ್ವರ್ ರಾವ್ ತಿಳಿಸಿದ್ದಾರೆ.

ಇದನ್ನೂ ಓದಿ: ತಿಂಗಳಿಗೆ 80,000 ರೂ. ಗಳಿಸುವ ಬೆಂಗಳೂರಿನ ಉಬರ್ ಬೈಕ್ ಚಾಲಕ; ವಿಡಿಯೋ ವೈರಲ್​​

ಹೊಸೂರು ರಸ್ತೆಯಲ್ಲಿ ಬೊಮ್ಮಸಂದ್ರ ಮೆಟ್ರೋ ನಿಲ್ದಾಣದ ನಿರ್ಮಾಣಕ್ಕಾಗಿ ನಾವು ಬಿಎಂಆರ್​ಸಿಎಲ್​​ನೊಂದಿಗೆ ಪಾಲುದಾರಿಕೆ ಹೊಂದಲು ಸಂತಸವಾಗುತ್ತಿದೆ. ಈ ಯೋಜನೆಯು ಸಾರ್ವಜನಿಕ ಸಾರಿಗೆಯ ಹೆಚ್ಚಿನ ಬಳಕೆಯನ್ನು ಸಕ್ರಿಯಗೊಳಿಸುವ ಮೂಲಕ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಡೆಲ್ಟಾ ಎಲೆಕ್ಟ್ರಾನಿಕ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಅಧ್ಯಕ್ಷ ಬೆಂಜಮಿನ್ ಲಿನ್ ಮತ್ತು ವ್ಯವಸ್ಥಾಪಕ ನಿರ್ದೇಶಕ ನಿರಂಜನ್ ನಾಯಕ್ ಹೇಳಿದ್ದಾರೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 12:56 pm, Tue, 10 December 24