ಸಾಂದರ್ಭಿಕ ಚಿತ್ರ
Image Credit source: PTI
ಬೆಂಗಳೂರು, ಅಕ್ಟೋಬರ್ 29: ದೀಪಾವಳಿ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಬೆಂಗಳೂರು ನಗರದಾದ್ಯಂತ ಪಟಾಕಿ ಖರೀದಿಯೂ ಜೋರಾಗಿದೆ. ಇದೇ ಸಂದರ್ಭದಲ್ಲಿ ಪಟಾಕಿ ವಿಚಾರವಾಗಿ ಸಾರ್ವಜನಿಕರಿಗೆ ಪೊಲೀಸ್ ಆಯುಕ್ತರು ಕೆಲವು ಸಲಹೆ-ಸೂಚನೆಗಳನ್ನು ನೀಡಿದ್ದಾರೆ. ಪಟಾಕಿ ವಿಚಾರದಲ್ಲಿ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಹಸಿರು ಪಟಾಕಿಗೆ ಮಾತ್ರವೇ ಅವಕಾಶ ಎಂದು ಸಿಎಂ ಸಿದ್ದರಾಮಯ್ಯ ಕೂಡ ಈಗಾಗಲೇ ಸ್ಪಷ್ಟಪಡಿಸಿದ್ದಾರೆ.
ಪೊಲೀಸ್ ಆಯುಕ್ತರು ನೀಡಿರುವ ಸಲಹೆ ಸೂಚನೆಗಳನ್ನು ಇಲ್ಲಿ ನೀಡಲಾಗಿದೆ;
- ಹಸಿರು ಪಟಾಕಿಗಳನ್ನು ಖರೀದಿಸಿ, ಪರಿಸರ ಸ್ನೇಹಿ ದೀಪಾವಳಿಯನ್ನು ಆಚರಿಸಿ.
- ಹಸಿರು ಪಟಾಕಿಗಳನ್ನು ಖರೀದಿಸುವಾಗ ಅದರ ಮೇಲಿರುವ ಕ್ಯುಆರ್ ಕೋಡ್ ಸ್ಕ್ಯಾನ್ ಮಾಡಿ ಖಚಿತಪಡಿಸಿಕೊಂಡು ಖರೀದಿ ಮಾಡುವುದು.
- ಉತ್ತಮ ಗುಣಮಟ್ಟದ ಪಟಾಕಿಗಳನ್ನು ಅಧಿಕೃತವಾಗಿ ಪರವಾನಿಗೆ ಪಡೆದ ಅಂಗಡಿ/ಮಳಿಗೆಗಳಿಂದ ಖರೀದಿಸಿ ಹಾಗೂ ಲೈಸೆನ್ಸ್‌ಗಳನ್ನು ಅಂಗಡಿಗಳಲ್ಲಿ ಪ್ರದರ್ಶಿಸಿರುವುದನ್ನು ಖಚಿತ ಪಡಿಸಿಕೊಂಡು ಪಟಾಕಿಗಳನ್ನು ಖರೀದಿಸುವುದು.
- ದೀಪಾವಳಿ ಸಮಯದಲ್ಲಿ ಅನಧಿಕೃತವಾಗಿ ಕೆಲವೊಂದು ಅಂಗಡಿಗಳು ಪಟಾಕಿಗಳನ್ನು ಮಾರುತ್ತಿರುತ್ತವೆ. ಇಂತಹ ಅಂಗಡಿಗಳಿಂದ ಪಟಾಕಿಗಳನ್ನು ಖರೀದಿಸಬೇಡಿ
- ಅತಿ ಹೆಚ್ಚು ಶಬ್ದ ಹಾಗೂ ವಾಯುಮಾಲಿನ್ಯ ಉಂಟುಮಾಡುವ ಪಟಾಕಿಗಳನ್ನು ಖರೀದಿ ಮಾಡಬೇಡಿ.
- ಹಳೆಯ ಹಾಗೂ ಹಾಳಾದ ಪಟಾಕಿಗಳನ್ನು ಕೊಂಡುಕೊಳ್ಳಬಾರದು ಮತ್ತು ಅವುಗಳನ್ನು ಬಳಸದಂತೆ ಅಂಗಡಿಗಳೂ ಸಹ ಸೂಕ್ತ ತಿಳುವಳಿಕೆ ನೀಡಬೇಕು.
- ಪಟಾಕಿಗಳನ್ನು ಚಿಕ್ಕ ಮಕ್ಕಳು ಹಚ್ಚಲು ಅವಕಾಶ ಮಾಡಿಕೊಡಬೇಡಿ. ಚಿಕ್ಕ ಮಕ್ಕಳೊಂದಿಗೆ ಅವರ ಪೋಷಕರೂ ಸಹ ಜೊತೆಯಲ್ಲಿದ್ದು, ಸುರಕ್ಷಿತವಾಗಿ ಪಟಾಕಿ ಹಚ್ಚುವಂತೆ ಗಮನ ಹರಿಸಬೇಕು.
- ಚಿಕ್ಕ ಮಕ್ಕಳು ಹೆಚ್ಚು ಅಪಾಯಕಾರಿಯಾದ ಪಟಾಕಿಗಳನ್ನು ಹಚ್ಚಿದಂತೆ ನೋಡಿಕೊಳ್ಳುವುದು. ಪಟಾಕಿಗಳನ್ನು ಹಚ್ಚುವಾಗ ದೂರದಲ್ಲಿ ನಿಂತು ನೋಡುವಂತೆ ವ್ಯವಸ್ಥೆ ಮಾಡುವುದು. ಚಿಕ್ಕ ಮಕ್ಕಳು ಪಟಾಕಿ ಹಚ್ಚುವಾಗ ಉದ್ದನೆಯ ಊದುಬತ್ತಿಗಳನ್ನು ಬಳಸುವಂತೆ ಮಕ್ಕಳಿಗೆ ಸೂಚನೆಗಳನ್ನು ನೀಡುವುದು ಮತ್ತು ಮಕ್ಕಳ ಮೇಲೆ ನಿಗಾ ವಹಿಸುವುದು.
- ಜನನಿಬಿಡ ಪದೇಶ/ ಪ್ರದೇಶಗಳಲ್ಲಿ, ಮುಖ್ಯ ರಸ್ತೆಗಳಲ್ಲಿ ಹಾಗೂ ವಾಹನಗಳನ್ನು ಪಾರ್ಕಿಂಗ್ ಮಾಡಿರುವ ಸ್ಥಳಗಳಲ್ಲಿ ಪಟಾಕಿಗಳನ್ನು ಸಿಡಿಸಬಾರದು.
- ಪಟಾಕಿಗಳನ್ನು ತೆರೆದ ಮೈದಾನಗಳಲ್ಲಿ, ಜನಜಂಗುಳಿ ಕಡಿಮೆ ಇರುವ ಪ್ರದೇಶಗಳಲ್ಲಿ ಸುರಕ್ಷಿತ ಕ್ರಮಗಳನ್ನು ಅನುಸರಿಸಿಕೊಂಡು ಪಟಾಕಿಗಳನ್ನು ಹಚ್ಚುವುದು ಒಳ್ಳೆಯ ಬೆಳವಣಿಗೆಯಾಗಿರುತ್ತದೆ.
- ಸೂಕ್ಷ್ಮ ಪ್ರದೇಶಗಳಾದ ಆಸ್ಪತ್ರೆ, ಪೆಟ್ರೋಲ್ ಬಂಕ್, ಅನಿಲ ಕೇಂದ್ರಗಳು, ಧಾರ್ಮಿಕ ಸ್ಥಳಗಳು, ವೃದ್ಧಾಶ್ರಮ, ಶಿಶುಪಾಲನಾ ಕೇಂದ್ರಗಳ ಸುತ್ತ-ಮುತ್ತ ಪಟಾಕಿಗಳನ್ನು ಸಿಡಿಸದಂತೆ ನೋಡಿಕೊಳ್ಳುವುದು.
- ಪಟಾಕಿಗಳನ್ನು ಸುಡುವಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು.
- ಪಟಾಕಿಗಳನ್ನು ಸಿಡಿಸುವಾಗ ಮೂಕ ಪ್ರಾಣಿಗಳಿಗೆ ತೊಂದರೆಯಾಗದಂತೆ ಮುಂಜಾಗ್ರತಾ ಕ್ರಮಗಳನ್ನು ವಹಿಸುವುದು.
- ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ನಿಗದಿತ ಸಮಯದಲ್ಲಿ, ಅಂದರೆ ರಾತ್ರಿ 8 ರಿಂದ 10 ಗಂಟೆಯ ವರೆಗೆ ಮಾತ್ರ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ಪಟಾಕಿಗಳನ್ನು ಸಿಡಿಸುವುದು.
- ಪಟಾಕಿ ಸಿಡಿಸುವ ಸಂದರ್ಭದಲ್ಲಿ ಕೈಗಳಿಗೆ ಗೌಸ್ ಧರಿಸುವುದು, ಕಣ್ಣುಗಳಿಗೆ ಸುರಕ್ಷತಾ ಕನ್ನಡಕಗಳನ್ನು ಧರಿಸುವುದು ಹಾಗೂ ಅಗ್ನಿ ನಂದಿಸುವ ನೀರು, ಮರಳು, ಬೆಂಕಿನಂದಿಸುವ ಸಿಲಿಂಡರ್‌ಗಳನ್ನು ಹತ್ತಿರದಲ್ಲಿ ಇಟ್ಟುಕೊಳ್ಳುವುದು.
- ಪಟಾಕಿಗಳನ್ನು ಸಿಡಿಸುವಾಗ ಹೆಚ್ಚು ಜಾಗರೂಕರಾಗಿರಬೇಕು. ಪಟಾಕಿಗಳನ್ನು ನಂದಿಸುವ ಕೆಲಸವನ್ನು ಹೆಚ್ಚು ಎಚ್ಚರಿಕೆಯಿಂದ ಮಾಡಬೇಕು. ಬಳಸಿದ ಪಟಾಕಿಗಳನ್ನು ಬಕೇಟ್‌ನಲ್ಲಿಟ್ಟು ಅದಕ್ಕೆ ಮರಳು ಅಥವಾ ನೀರನ್ನು ಹಾಕಿ ನಂದಿಸಬೇಕು.
- ಮೊದಲ ಪ್ರಯತ್ನದಲ್ಲಿ ಸಿಡಿಯದ ಪಟಾಕಿಗಳನ್ನು ಹತ್ತಿರಕ್ಕೆ ಹೋಗಿ ಮತ್ತೊಮ್ಮೆ ಪರೀಕ್ಷಿಸಬೇಡಿ.
- ಪಟಾಕಿ ಹಚ್ಚುವ ವೇಳೆಯಲ್ಲಿ ಬಟ್ಟೆಗಳ ಮೇಲೆ ಹೆಚ್ಚು ಜಾಗರೂಕತೆಯಿಂದಿರಬೇಕು. ಈ ಸಮಯದಲ್ಲಿ ಹತ್ತಿಯ ಬಟ್ಟೆಯನ್ನು ಧರಿಸುವುದು ಉತ್ತಮ. ಆದಷ್ಟು ಸಿಂಥಟೆಕ್, ನೈಲಾನ್, ಪಾಲಿಸ್ಟರ್ ಬಟ್ಟೆಗಳನ್ನು ಧರಿಸಬೇಡಿ.
- ಕೈಯಲ್ಲಿ ಪಟಾಕಿಗಳನ್ನು ಹಿಡಿದು ಹಚ್ಚುವುದು ಅಪಾಯಕಾರಿ. ದೇಹದ ಸೂಕ್ಷ್ಮ ಅಂಗಾಂಗಗಳಾದ ಕಿವಿ, ಕಣ್ಣು, ಬಾಯಿ, ಅಂಗಗಳ ಮೇಲೆ ಹೆಚ್ಚು ಗಮನವಿರಲಿ. ಪಟಾಕಿ ಸಿಡಿಸುವ ಸಂದರ್ಭದಲ್ಲಿ ಪ್ರಥಮ ಚಿಕಿತ್ಸಾ ಪೆಟ್ಟಿಗೆಯನ್ನು ಹತ್ತಿರದಲ್ಲಿ ಇಟ್ಟುಕೊಳ್ಳುವುದು.
- ಪಟಾಕಿ ಸಿಡಿಸುವ ಸಂದರ್ಭದಲ್ಲಿ ಯಾವುದಾದರೂ ಅವಘಡಗಳು ಸಂಭವಿಸಿದಲ್ಲಿ ತಕ್ಷಣವೇ 112 ಹಾಗೂ 108 ಕ್ಕೆ ಸಂಪರ್ಕಿಸುವುದು ಹಾಗೂ ವೈದ್ಯರ ಸಲಹೆಯನ್ನು ಪಡೆದುಕೊಳ್ಳುವುದು.
- ಸಿಡಿಯದ, ರುಸ್ ಆಗಿರುವ ಪಟಾಕಿಗಳನ್ನು ಗುಡ್ಡೆ ಹಾಕಿ ಬೆಂಕಿ ಹಚ್ಚುವುದು ಹೆಚ್ಚು ಅಪಾಯಕಾರಿ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ