ಬೆಂಗಳೂರು, ನವೆಂಬರ್ 12: ದೀಪಾವಳಿ ಹಬ್ಬದ (Diwali festival) ಸಂಭ್ರಮದಲ್ಲಿರುವ ಜನರು ಖರೀದಿ ಭರಾಟೆಗೆ ಮುಂದಾಗಿದ್ದಾರೆ. ಇಂದು ನರಕ ಚತುರ್ದಶಿ ಮತ್ತು ಧನಲಕ್ಷ್ಮೀ ಪೂಜೆ ಹಿನ್ನೆಲೆ ಬೆಂಗಳೂರಿನ ಕೆ.ಆರ್.ಮಾರ್ಕೆಟ್ನಲ್ಲಿ ಜನರು ದಾಂಗುಡಿಯಿಟ್ಟಿದ್ದಾರೆ. ಹೂವು, ಹಣ್ಣುಗಳನ್ನು ಗ್ರಾಹಕರು ಖರೀದಿಸುತ್ತಿದ್ದಾರೆ. ಇನ್ನು ಕೆ.ಆರ್.ಮಾರ್ಕೆಟ್ ಫ್ಲೈಓವರ್ ಮೇಲೆ ಅನಧಿಕೃತವಾಗಿ ಗ್ರಾಹಕರು ವಾಹನಗಳ ಪಾರ್ಕಿಂಗ್ ಮಾಡಿದ್ದಾರೆ. ಹಾಗಾಗಿ ಕಿರಿದಾದ ಮೇಲ್ಸೆತುವೆ ಮೇಲೆ ವಾಹನ ಚಲಾಯಿಸಲು ಸವಾರರು ಹರಸಾಹಸ ಪಟ್ಟಿದ್ದಾರೆ.
ದೀಪಾವಳಿ ಹಬ್ಬದ ಪ್ರಯುಕ್ತ ಕೆ.ಆರ್ ಮಾರುಕಟ್ಟೆಯಲ್ಲಿ ಖರೀದಿ ಬಲು ಜೋರಾಗಿದ್ದು, ಹಣ್ಣು, ಹೂವುಗಳ ದರ ಏರಿಕೆ ಆಗಿದೆ. ಮಾರು ಹೂವಿನ ಬೆಲೆ 50 ರೂ ಏರಿಕೆ ಆಗಿದ್ದು, ಹೂ, ಹಣ್ಣುಗಳ ಖರೀದಿಗೆ ಗ್ರಾಹಕರು ಆಗಮಿಸುತ್ತಿದ್ದಾರೆ. ನಾಳೆ ದೀಪಾವಳಿ ಅಮವಾಸ್ಯೆ, ಬಲಿಂದ್ರನ ಪೂಜೆ, ಮಂಗಳವಾರ ಬಲಿಪಾಡ್ಯಮಿ ದೀಪಾವಳಿ ಹಬ್ಬದ ಚಂದ್ರದರ್ಶನ ಇದೆ.
ದೀಪಾವಳಿ ಹಬ್ಬದ ರಜೆ ಹಿನ್ನೆಲೆ ಜನರು ತಮ್ಮ ಊರುಗಳಿಗೆ ಹೊರಟಿದ್ದಾರೆ. ಒಂದೆಡೆ ಪಟಾಕಿ ಖರೀದಿ ಮಾಡುತ್ತಿದ್ದಾರೆ ಹಾಗಾಗಿ ಬೆಂಗಳೂರು-ಹೊಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ಜಾಮ್ ಉಂಟಾಗಿತ್ತು.
ಇದನ್ನೂ ಓದಿ: ಆನೇಕಲ್: ಪಟಾಕಿ ಮಳಿಗೆ ಮಾರಾಟಗಾರರಿಗೆ ಗುಡ್ ನ್ಯೂಸ್: ನ. 17ರವರೆಗೆ ಪಟಾಕಿ ಮಾರಾಟಕ್ಕೆ ಹೈಕೋರ್ಟ್ ಅನುಮತಿ
ಹೆಬ್ಬಗೋಡಿಯಿಂದ 10 ಕಿಲೋ ಮೀಟರ್ವರೆಗೆ ರಾಷ್ಟ್ರೀಯ ಹೆದ್ದಾರಿ ಟ್ರಾಫಿಕ್ ಜಾಮ್ ಆಗಿದ್ದು, ವಾಹನ ಸವಾರರು ಪರದಾಡಿದ್ದರು. ಕಳೆದ 2 ಗಂಟೆಯಿಂದ ರಸ್ತೆಯಲ್ಲಿ ವಾಹನಗಳು ಸಾಲುಗಟ್ಟಿ ನಿಂತ್ತಿದ್ದವು. ಅತ್ತಿಬೆಲೆ ಸುತ್ತಮುತ್ತ ಪಟಾಕಿ ಖರೀದಿಗೆ ಗ್ರಾಹಕರು ಆಗಮಿಸುತ್ತಿದ್ದು, ಪಟಾಕಿ ಖರೀದಿ ಭರಾಟೆಯಿಂದ ಹೆದ್ದಾರಿಯಲ್ಲಿ ಟ್ರಾಫಿಕ್ಜಾಮ್ ಸಂಭವಿಸಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:57 am, Sun, 12 November 23