ಖಾಸಗಿ ವಾಹಿನಿಯಲ್ಲಿ ಹೂಡಿಕೆ ವಿಚಾರ, ನನ್ನ ವಿರುದ್ಧ ಷಡ್ಯಂತ್ರ ಮಾಡಲಾಗುತ್ತಿದೆ: ಡಿಸಿಎಂ ಡಿಕೆ ಶಿವಕುಮಾರ್

| Updated By: ಗಂಗಾಧರ​ ಬ. ಸಾಬೋಜಿ

Updated on: Jan 01, 2024 | 4:28 PM

ಡಿಸಿಎಂ ಡಿಕೆ ಶಿವಕುಮಾರ್​ ಅವರ ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾನೆಲ್​ನಲ್ಲಿ ಮಾಡಿರುವ ಹೂಡಿಕೆಯ ವಿವರಗಳನ್ನು ಕೋರಿ ಜೈ ಹಿಂದ್ ಮಾಧ್ಯಮಕ್ಕೆ ಸಿಬಿಐ ನೋಟಿಸ್​ ಜಾರಿ ಮಾಡಲಾಗಿದೆ. ಈ ಕುರಿತಾಗಿ ಪ್ರತಿಕ್ರಿಯೆ ನೀಡಿರುವ ಡಿಸಿಎಂ ಡಿಕೆ ಶಿವಕುಮಾರ್​, ಯಾವ ಆಧಾರದ ಮೇಲೆ ನೋಟಿಸ್​ ಕೊಟ್ಟಿದ್ದಾರೋ ಗೊತ್ತಿಲ್ಲ. ನನಗೆ ಕಿರುಕುಳ ಕೊಡಲು ಎಲ್ಲ ಪ್ರಯತ್ನ ಮಾಡುತ್ತಿದ್ದಾರೆ ಎಂದಿದ್ದಾರೆ.

ಖಾಸಗಿ ವಾಹಿನಿಯಲ್ಲಿ ಹೂಡಿಕೆ ವಿಚಾರ, ನನ್ನ ವಿರುದ್ಧ ಷಡ್ಯಂತ್ರ ಮಾಡಲಾಗುತ್ತಿದೆ: ಡಿಸಿಎಂ ಡಿಕೆ ಶಿವಕುಮಾರ್
ಡಿಸಿಎಂ ಡಿಕೆ ಶಿವಕುಮಾರ್
Follow us on

ಬೆಂಗಳೂರು, ಜನವರಿ 01: ಡಿಸಿಎಂ ಡಿಕೆ ಶಿವಕುಮಾರ್ (DK Shivakumar)​ ಅವರ ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾನೆಲ್​ನಲ್ಲಿ ಮಾಡಿರುವ ಹೂಡಿಕೆಯ ವಿವರಗಳನ್ನು ಕೋರಿ ಜೈ ಹಿಂದ್ ಮಾಧ್ಯಮಕ್ಕೆ ಸಿಬಿಐ ನೋಟಿಸ್​ ಜಾರಿ ಮಾಡಲಾಗಿದೆ. ಈ ವಿಚಾರವಾಗಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಸಿಬಿಐ ನನಗೆ ನೋಟಿಸ್​ ಕೊಟ್ಟಿಲ್ಲ. ಯಾವ ಆಧಾರದ ಮೇಲೆ ನೋಟಿಸ್​ ಕೊಟ್ಟಿದ್ದಾರೋ ಗೊತ್ತಿಲ್ಲ. ನನಗೆ ಕಿರುಕುಳ ಕೊಡಲು ಎಲ್ಲ ಪ್ರಯತ್ನ ಮಾಡುತ್ತಿದ್ದಾರೆ. ಕೆಲ ಬಿಜೆಪಿ ನಾಯಕರಿಂದ ನನ್ನ ವಿರುದ್ಧ ಷಡ್ಯಂತ್ರ ಮಾಡಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ.

ನಾನು ಯಾವುದೇ ತಪ್ಪು ಮಾಡಿಲ್ಲ. ಅವರು ಏನಾದರೂ ಮಾಡಲಿ, ನಾನು ಹೆದರಲ್ಲ. ನನ್ನ ಜೈಲಿಗೆ ಹಾಕುವ ಉದ್ದೇಶ ಇದ್ದರೆ ಹಾಕಲಿ. ಅವರು ಏನು ಮಾಡುತ್ತಾರೋ ಮಾಡಿಕೊಳ್ಳಲಿ. ನನಗೆ ನ್ಯಾಯ ಸಿಗುವ ವಿಶ್ವಾಸ ಇದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ನಾವು ಅಯೋಧ್ಯೆ ರಾಮ ಮಂದಿರದ ಪರ: ಸಿಎಂ ಸಿದ್ದರಾಮಯ್ಯ ಹೀಗೆನ್ನಲು ಕಾರಣವಿದೆ!

ಜೈ ಹಿಂದ್ ಅಷ್ಟೇ ಅಲ್ಲದೆ, ಹಾಪ್ ಕಾಮ್ಸ್, ಸಬ್ ರಿಜಿಸ್ಟಾರ್​ಗಳಿಗೂ ಕೊಟ್ಟಿದ್ದಾರೆ. ಸರ್ಕಾರ ಸಿಬಿಐಗೆ ಕೊಟ್ಟ ಅನುಮತಿ ಹಿಂಪಡೆದಿದೆ. ಆದರೂ ಕೂಡ ಯಾವ ಲೆಕ್ಕಾಚಾರದಲ್ಲಿ ನೋಟಿಸ್ ಕೊಟ್ಟಿದ್ದಾರೆ ಗೊತ್ತಿಲ್ಲ. ಎಲ್ಲಾ ದಾಖಲೆಗಳು ಅವರ ಬಳಿ ಇವೆ. ಈ ಕೇಸ್​ನಲ್ಲಿ ಸರ್ಕಾರ ಅನುಮತಿ ಹಿಂಪಡೆದಿದೆ. ನಾನೇನು ಲಾಯರ್ ಅಲ್ಲ, ನನಗಿರುವ ಕಾನೂನಿನ ಅರಿವಿನಲ್ಲಿ ದಾಖಲೆಗಳನ್ನ ಲೋಕಾಯುಕ್ತಕ್ಕೆ ಕೊಡಬೇಕು ಎಂದಿದ್ದಾರೆ.

ಕಿರುಕುಳ ನೀಡುವುದಕ್ಕೆ ದೊಡ್ಡ ದೊಡ್ಡ ಜನರಿದ್ದಾರೆ

ಈಗ ಕಿರುಕುಳ ನೀಡುವುದಕ್ಕೆ ಅಲ್ಲಿ ದೊಡ್ಡ ದೊಡ್ಡ ಜನ ಇದ್ದಾರೆ. ಅದೆಲ್ಲಾ ನನಗೆ ಗೊತ್ತಿದೆ ಅವರು ಏನೂ ಬೇಕಾದರೂ ಮಾಡಲಿ, ನನ್ನ ರಾಜಕೀಯವಾಗಿ ಮುಗಿಸಬೇಕು ತೊಂದರೆ ಮಾಡಬೇಕು ಎನ್ನುವ ಷಡ್ಯಂತ್ರ ನಡೆಯುತ್ತಿದೆ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: ನಿಗಮ ಮಂಡಳಿ: ಶಾಸಕರ ಸಂಖ್ಯೆಯಷ್ಟೇ ಕಾರ್ಯಕರ್ತರಿಗೂ ಸ್ಥಾನಮಾನ; ಸಂಕ್ರಾಂತಿಯೊಳಗೆ ನೇಮಕ- ಡಿಕೆ ಶಿವಕುಮಾರ್​

ಕೆಲ ಬಿಜೆಪಿ ನಾಯಕರು ಹಿಂದೆನೇ ಹೇಳಿದ್ದರು. ನನ್ನ ಜೈಲಿಗೆ ಕಳುಸುತ್ತೇವೆ ಅಂತ ಭವಿಷ್ಯ ನುಡಿದಿದ್ದರು. ನಾನು ಅವರನ್ನ ಕರೆದಿದ್ದೆ ಚರ್ಚೆ ಮಾಡೋಣ ಬನ್ನಿ ಅಂತ. ದೊಡ್ಡ ಯೋಜನೆ ನಡೀತಾ ಇದೆ. ನಾನೇನು ತಪ್ಪು ಮಾಡಿಲ್ಲ. ಅವರು ಏನು ಬೇಕಾದರೂ ತನಿಖೆ ಮಾಡಲಿ. ಎಲ್ಲಿ ನನಗೆ ನ್ಯಾಯ ಸಿಗಬೇಕು ಅಲ್ಲಿ ಸಿಗುತ್ತದೆ ಎಂದು ಹೇಳಿದ್ದಾರೆ.

ಕೆಲ ಸಚಿವರು ಸ್ಪರ್ಧಿಸುವ ಸಂದರ್ಭ ಬರಬಹುದು ನೋಡೋಣ

ಮುಂದಿನ ಲೋಕಸಭೆ ಚುನಾವಣೆಗೆ ಸಚಿವರು ಸ್ಪರ್ಧಿಸುವ ವಿಚಾರವಾಗಿ ಮಾತನಾಡಿದ ಅವರು, ಕೆಲ ಸಚಿವರು ಸ್ಪರ್ಧಿಸುವ ಸಂದರ್ಭ ಬರಬಹುದು ನೋಡೋಣ. ಜನವರಿ 4ರಂದು ದೆಹಲಿಯಲ್ಲಿ ಮೀಟಿಂಗ್ ಇದೆ. ಲೋಕಸಭೆಗೆ ಸಚಿವರನ್ನ ಸ್ಪರ್ಧೆ ಮಾಡುವಂತೆ ನಾವು ಹೇಳೇ ಇಲ್ಲ. ರಾಜ್ಯದ ಎಲ್ಲ ಜಿಲ್ಲೆಗಳ ಉಸ್ತುವಾರಿ ಸಚಿವರು ವರದಿ ಕೊಟ್ಟಿದ್ದಾರೆ. ಸಿಎಂ ಮತ್ತು ನನ್ನನ್ನು ಹೈಕಮಾಂಡ್​​ ಕರೆದಿದೆ, ಹೋಗುತ್ತಿದ್ದೇವೆ.
ಅಲ್ಲಿ ಗೈಡ್​ಲೈನ್ಸ್ ಮಾಡುವುದನ್ನ ನಾವು ಫಾಲೋ ಮಾಡಿದ್ದೇವೆ ಎಂದರು.

ನಾವು ಸಚಿವರ ಬಳಿ ಮಾತಾಡಿಲ್ಲ, ಪಕ್ಷ ಹೇಳಿದ್ರೆ ಎಲ್ಲರೂ ಕೇಳ್ತಾರೆ. ಜ.10ರಂದು ಶಾಸಕರು, ಪಕ್ಷದ ಪದಾಧಿಕಾರಿಗಳ ಜೊತೆ ಸಭೆ ಇದೆ. ಆ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಭಾಗಿ ಆಗ್ತಾರೆ. ಸಚಿವರುಗಳಿಗೆ ಜವಾಬ್ದಾರಿ ಕೊಟ್ಟಿದ್ದೇವೆ, ಅವರು ವರದಿ ಕೊಡ್ತಾರೆ. ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು. ಕೆಲ ಸಚಿವರು ಸ್ಪರ್ಧೆ ಮಾಡುವ ಸಂದರ್ಭ ಬರಬಹುದು ನೋಡೋಣ. ಪಕ್ಷ ಏನು ತೀರ್ಮಾನ ಮಾಡುತ್ತೆ ನೋಡೋಣ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.