ಸಿಎಂ ಸಿದ್ದರಾಮಯ್ಯ ಧರ್ಮ ಒಡೆಯುವ ಬ್ರ್ಯಾಂಡ್ ಅಂಬಾಸಿಡರ್: ಆರ್.ಅಶೋಕ್ ವಾಗ್ದಾಳಿ
31 ವರ್ಷದ ಬಳಿಕ ರಾಮಜನ್ಮಭೂಮಿ ಹೋರಾಟದ ಪ್ರಕರಣಕ್ಕೆ ಮರುಜೀವ ನೀಡಲು ಕರ್ನಾಟಕ ಕಾಂಗ್ರೆಸ್ ಸರ್ಕಾರ ಮುಂದಾಗಿದ್ದು, ರಾಮಜನ್ಮಭೂಮಿ ಹೋರಾಟಗಾರರಿಗೆ ಬಂಧನದ ಭೀತಿ ಶುರುವಾಗಿದೆ. ಹುಬ್ಬಳ್ಳಿಯಲ್ಲಿ ಒಬ್ಬ ಕಾರ್ಯಕರ್ತನನ್ನು ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದು, ರಾಮಭಕ್ತರ ಬಂಧನ ಸರ್ಕಾರದ ಟಿಪ್ಪು ಸಂಸ್ಕೃತಿಯನ್ನು ತೋರಿಸುತ್ತದೆ. ಸಿಎಂ ಸಿದ್ದರಾಮಯ್ಯ ಧರ್ಮ ಒಡೆಯುವ ಬ್ರ್ಯಾಂಡ್ ಅಂಬಾಸಿಡರ್ ಎಂದು ಹೇಳಿದ್ದಾರೆ.
ಬೆಂಗಳೂರು, ಜ.1: ಮೂರು ದಶಕಗಳ ಬಳಿಕ ಕರ್ನಾಟಕ ಸರ್ಕಾರ ರಾಮಜನ್ಮಭೂಮಿ ಹೋರಾಟದ ಪ್ರಕರಣಕ್ಕೆ ಮರುಜೀವ ನೀಡಲು ಮುಂದಾಗಿದೆ. 31 ವರ್ಷಗಳ ನಂತರ ಹುಬ್ಬಳ್ಳಿಯಲ್ಲಿ ಒಬ್ಬ ಕಾರ್ಯಕರ್ತನನ್ನು ಪೊಲೀಸರು ಬಂಧಿಸಿದ್ದು, ರಾಮಭಕ್ತರ ಬಂಧನ ಸರ್ಕಾರದ ಟಿಪ್ಪು ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ (R Ashok) ವಾಗ್ದಾಳಿ ನಡೆಸಿದ್ದಾರೆ. ಅಲ್ಲದೆ, ಸಿದ್ದರಾಮಯ್ಯ (Siddaramaiah) ಧರ್ಮ ಒಡೆಯುವ ಬ್ರ್ಯಾಂಡ್ ಅಂಬಾಸಿಡರ್ ಎಂದಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ಈ ಹಿಂದೆ ಸಿದ್ದರಾಮಯ್ಯ ಸರ್ಕಾರದಲ್ಲಿ ಹಿಂದೂಗಳ ಕಗ್ಗೊಲೆ ಆಗಿದ್ದವು. ರಾಮಮಂದಿರ ನಿರ್ಮಾಣ ಚರಿತ್ರೆಯಲ್ಲಿ ದಾಖಲಾಗುವ ಐತಿಹಾಸಿಕ ಕ್ಷಣ. ನಾವು ಕರಸೇವೆ ಮಾಡಿದ್ದೇವೆ, ಹಲವರು ಪ್ರಾಣತ್ಯಾಗ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರ ಕರಸೇವಕರನ್ನು ಭಯಭೀತಗೊಳಿಸಲು ಹೊರಟಿದೆ. 30 ವರ್ಷಗಳ ಬಳಿಕ ಹುಬ್ಬಳ್ಳಿಯಲ್ಲಿ ಕಾರ್ಯಕರ್ತರನ್ನು ಜೈಲಿಗಟ್ಟಿದ್ದಾರೆ. ಹುಬ್ಬಳ್ಳಿಯಲ್ಲಿ ರಾಮಭಕ್ತರ ಮೇಲೆ ಕಾಂಗ್ರೆಸ್ ಸರ್ಕಾರ ಕೇಸ್ ಹಾಕಿದೆ ಎಂದರು.
ದ್ವೇಷದ ರಾಜಕಾರಣಕ್ಕೆ ಸರ್ಕಾರ ಮುಂದೆ ಪ್ರತಿಫಲ ಅನುಭವಿಸುತ್ತದೆ. ರಾಮಜನ್ಮಭೂಮಿ ಹೋರಾಟದಲ್ಲಿ ಭಾಗವಹಿಸಿದ್ದೆ, ನನ್ನನ್ನು ಬಂಧಿಸುತ್ತೀರಾ? ಯಡಿಯೂರಪ್ಪ ಕೂಡ ರಾಮಜನ್ಮಭೂಮಿ ಹೋರಾಟಕ್ಕೆ ಹೋಗಿದ್ದರು. ರಾಮಭಕ್ತರ ಬಂಧನ ಸರ್ಕಾರದ ಟಿಪ್ಪು ಸಂಸ್ಕೃತಿಯನ್ನು ತೋರಿಸುತ್ತದೆ. 30 ವರ್ಷಗಳ ಹಿಂದಿನ ಪ್ರಕರಣವನ್ನು ಈಗ ಮತ್ತೆ ಓಪನ್ ಮಾಡಿದ್ದಾರೆ. ಆ ಕೇಸ್ಗೆ ಮರುಜೀವ ನೀಡಿ ಎಂದು ಸರ್ಕಾರ ಸೂಚನೆ ನೀಡಿದೆಯಂತೆ. ಟಿಪ್ಪು ಸಂಸ್ಕೃತಿಯ ಆಡಳಿತ ಮರು ಸ್ಥಾಪನೆಗೆ ಸರ್ಕಾರ ಹೊರಟಿದೆ ಎಂದರು.
ಸಿದ್ದರಾಮಯ್ಯ ಧರ್ಮ ಒಡೆಯುವ ಬ್ರ್ಯಾಂಡ್ ಅಂಬಾಸಿಡರ್
ಸಿದ್ದರಾಮಯ್ಯ ಅವರು ಧರ್ಮ ಒಡೆಯುವ ಬ್ರ್ಯಾಂಡ್ ಅಂಬಾಸಿಡರ್ ಎಂದು ಅಶೋಕ್ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಸರ್ಕಾರ ಮತ್ತೆ ದ್ವೇಷದ ರಾಜಕಾರಣ ಶುರು ಮಾಡಿದೆ. ಕಾಂಗ್ರೆಸ್ನವರು ಮುಂದೆ ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ. ರಾಮನ ಆರಾಧನೆ ಮಾಡುವುದಾದರೆ ರಾಮನ ಪೂಜೆ ಮಾಡಬೇಕಿತ್ತು. ರಾಮನ ಹೆಸರು ಹೇಳಿದರೆ ಕಾಂಗ್ರೆಸ್ನವರಿಗೆ ಭಯವಾಗುತ್ತದೆ. ರಾಜ್ಯದಲ್ಲಿ ರೈತರ ಕೊರಳಿಗೆ ಸಿದ್ದರಾಮಯ್ಯ ಸರ್ಕಾರ ಕುಣಿಕೆ ಹಾಕುತ್ತಿದೆ. ಅಲ್ಪಸಂಖ್ಯಾತರನ್ನು ಓಲೈಸಲು ಕಾಣಿಕೆ ಮೇಲೆ ಕಾಣಿಕೆ ಕೊಡುತ್ತಿದ್ದಾರೆ. ಮತಕ್ಕಾಗಿ ರಾಜಕೀಯ ಮಾಡೋದು ಸಿಎಂ ರಕ್ತದ ಕಣದಲ್ಲಿ ಬಂದಿದೆ ಎಂದರು.
ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ರಾಮಜನ್ಮಭೂಮಿ ಹೋರಾಟ ಕೇಸ್ಗೆ ಮರುಜೀವ: 31 ವರ್ಷದ ಬಳಿಕ ಆರೋಪಿಯ ಬಂಧನ
ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಬರುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿಕೆ ನೀಡಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅಶೋಕ್, ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ವಿಜಯೇಂದ್ರಗೆ ಮಾಹಿತಿ ಇರಬಹುದು. ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕೂಡ ಹೇಳಿದ್ದಾರೆ. ಯಾರೋ ಜ್ಯೋತಿಷಿ ಈ ಸರ್ಕಾರ ಉಳಿಯುವುದಿಲ್ಲ ಅಂತಾ ಹೇಳಿದ್ದಾರೆ. ನನಗೂ ಮಾಹಿತಿ ಇದೆ, ಎಲ್ಲಿ ಯಾವಾಗ ಹೇಳಬೇಕೋ ಆಗ ಹೇಳುತ್ತೇನೆ ಎಂದರು.
ಕಾಂಗ್ರೆಸ್ ಶಾಸಕರನ್ನು ಸಲಹೆಗಾರರಾಗಿ ನೇಮಕ ಮಾಡಿದ ವಿಚಾರವಾಗಿ ಮಾತನಾಡಿದ ಅಶೋಕ್, ಸಿಎಂಗೆ ಕೊಡುವ ಅಧಿಕಾರ ಇದೆ. ವಿಧಾನಸಭೆ ಒಳಗೆ ಹೊರಗೆ ಜೋರಾಗಿ ಮಾತಾಡಿದವರಿಗೆ ತಕ್ಷಣ ಹುದ್ದೆ ಸಿಗುತ್ತದೆ. ಕಾಂಗ್ರೆಸ್ನಲ್ಲಿ ಚಾಳಿ ಇದೆ, ಜೋರು ಮಾತಾಡಿದವರಿಗೆ ಅವಕಾಶ ಸಿಗುತ್ತದೆ ಎಂದರು.
ಮಾಜಿ ಸಚಿವ ಸೋಮಣ್ಣ ಮುನಿಸು ವಿಚಾರವಾಗಿ ಮಾತನಾಡಿದ ಅಶೋಕ್, ಸೋಮಣ್ಣ ಯಾವುದೇ ಕಾರಣಕ್ಕೂ ಪಾರ್ಟಿ ಬಿಟ್ಟು ಹೋಗಲ್ಲ. ಇದಕ್ಕೆ ನಾನು ಗ್ಯಾರಂಟಿ ಕೊಡುತ್ತೇನೆ. ನಾನು ನಿನ್ನೆ ದೂರವಾಣಿ ಕರೆ ಮೂಲಕ ಸೋಮಣ್ಣ ಜೊತೆ ಮಾತಾಡಿದ್ದೇನೆ. ಜನವರಿ 4 ರಂದು ಅವರನ್ನು ಭೇಟಿ ಮಾಡುತ್ತೇನೆ. ಭೇಟಿ ಸಂದರ್ಭದಲ್ಲಿ ಒಳ್ಳೆಯದಂತೂ ಆಗುತ್ತದೆ. ಅವರು ಸಮಾಧಾನಗೊಳ್ಳುವ ವಿಶ್ವಾಸ ಇದೆ ಎಂದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:46 pm, Mon, 1 January 24