ಬೆಂಗಳೂರು: ಕರ್ನಾಟಕದಲ್ಲಿ (Karnataka) ಕಾಂಗ್ರೆಸ್ ಸರ್ಕಾರ ಕೊಟ್ಟ ಮಾತಿನಿಂತೆ ಐದು ಗ್ಯಾರಂಟಿಗಳನ್ನು (guarantee schemes) ಜಾರಿ ಮಾಡಿದೆ. ಗೃಹ ಜ್ಯೋತಿ(Gruha Jyothi Scheme), ಗೃಹ ಲಕ್ಷ್ಮೀ, ಶಕ್ತಿ ಯೋಜನೆ (ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ) ಅನ್ನಭಾಗ್ಯ ಹಾಗೂ ಯುವನಿಧಿ ಯೋಜನೆಯನ್ನು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಘೋಷಣೆ ಮಾಡಿದ್ದು, ಇದರ ಸದುಪಯೋಗ ಪಡೆದುಕೊಳ್ಳಲು ಫಲಾನುಭವಿಗಳು ಅರ್ಜಿ ಸಲ್ಲಿಕೆಗೆ ಮುಗಿಬಿದ್ದಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡು ಸೇವಾಸಿಂಧು, ಬೆಂಗಳೂರು ಒನ್ ಸೇರಿದಂತೆ ಹಲವು ಕೇಂದ್ರಗಳಲ್ಲಿ ಹಣ ವಸೂಲಿ ಮಾಡುತ್ತಿರುವ ದೂರು ಕೇಳಿಬರುತ್ತಿವೆ. ಇದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಗಮನಕ್ಕೆ ಬಂದಿದ್ದು, ಗ್ಯಾರಂಟಿ ಯೋಜನೆಗಳ ಅರ್ಜಿ ಸಲ್ಲಿಕೆಗೆ ಜನರಿಂದ ಹಣ ಪಡೆಯುವಂತಿಲ್ಲ ಎಂದು ಖಡಕ್ ಸಾರ್ಮುನು ಹೊರಡಿಸಿದ್ದಾರೆ.
ಈ ಬಗ್ಗೆ ಇಂದು(ಜೂನ್ 23) ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ಗ್ಯಾರಂಟಿ ಯೋಜನೆಗಳ ಅರ್ಜಿ ಸಲ್ಲಿಕೆಗೆ ಜನ ಹಣ ನೀಡುವಂತಿಲ್ಲ. ಸೇವಾಸಿಂಧು ಸೇರಿ ಹಲವು ಕೇಂದ್ರಗಳಲ್ಲಿ ಹಣ ಪಡೆಯುವ ದೂರು ಬಂದಿದೆ. ಯಾರೂ ಕೂಡ ಸಾರ್ವಜನಿಕರಿಂದ ಹಣ ಪಡೆಯುವಂತಿಲ್ಲ. ಒಂದು ವೇಳೆ ಹಣ ಪಡೆದರೆ ಅಂತಹ ಏಜೆನ್ಸಿ ಲೈಸೆನ್ಸ್ ರದ್ದುಗೊಳಿಸುತ್ತೇವೆ ಎಂದು ಖಡಕ್ ಸೂಚನೆ ಕೊಟ್ಟರು.
200 ಯುನಿಟ್ ಉಚಿತ ವಿದ್ಯುತ್ ಕಲ್ಪಿಸುವ ಗೃಹ ಜ್ಯೋತಿ ಯೋಜನೆಗೆ ನಿಮ್ಮ ಸ್ಮಾರ್ಟ್ ಫೋನ್, ಕಂಪ್ಯೂಟರ್/ ಲ್ಯಾಪ್‌ಟಾಪ್ ಗಳಿಂದ ನೊಂದಾಯಿಸುವ ಸುಲಭ ಮಾರ್ಗಇದ್ದು, ಯಾವುದೇ ದಾಖಲೆ ಅಪ್ಲೋಡ್ ಮಾಡುವ ಅವಶ್ಯಕತೆ ಇಲ್ಲ. ಇನ್ನು ಈ ಸೌಲಭ್ಯಗಳಿಲ್ಲದವರು ಕರೆಂಟ್ ಬಿಲ್, ಆಧಾರ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ನೊಂದಿಗೆ ಹತ್ತಿರದ ಗ್ರಾಮ ಒನ್, ಬೆಂಗಳುರು ಒನ್, ಸೇವಾಸಿಂಧು ಸೇರಿದಂತೆ ಸರ್ಕಾರ ತಿಳಿಸಿರುವ ಕೇಂದ್ರಗಳಿಗೆ ಹೋಗಿ ಅರ್ಜಿ ಸಲ್ಲಿಸಬಹುದಾಗಿದೆ. ರಾಜ್ಯಾದ್ಯಂತ ಬಹಳಷ್ಟು ಜನರು ಒಟ್ಟಿಗೆ ಅರ್ಜಿ ಸಲ್ಲಿಕೆ ಮಾಡುತ್ತಿರುವುದರಿಂದ ಬಹುತೇಕ ಕರೆಗಳಲ್ಲಿ ಸರ್ವರ್ ಸಮಸ್ಯೆ ಎದುರಾಗುತ್ತಿದೆ. ಅರ್ಜಿ ನೊಂದಾಯಿಸಲು ಕೊನೆಯ ದಿನಾಂಕ ಇಲ್ಲ ,ಹಾಗಾಗಿ ಅವಸರ ಮಾಡುವುದು ಬೇಡ.
ಇನ್ನು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಗೆ ಮೂರು ತಿಂಗಳೊಳಗೆ ಸೇವಾಸಿಂಧು ಮೂಲಕ ಸ್ಮಾರ್ಟ್ ಕಾರ್ಡ್ ಪಡೆದುಕೊಳ್ಳಬೇಕು. ಇನ್ನು ಮನೆ ಒಡತಿಗೆ 2000 ನೀಡುವ ಗೃಹ ಲಕ್ಷ್ಮೀ ಯೋಜನೆಗೆ ಇನ್ನೂ ಸರ್ಕಾರ ಅರ್ಜಿ ಆಹ್ವಾನಿಸಿಲ್ಲ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 1:01 pm, Fri, 23 June 23