ನಮ್ಮನ್ನು ವಲಸಿಗರು, ಬಾಂಬೆ ಬಾಯ್ಸ್ ಎನ್ನುವುದನ್ನು ಬಿಡಿ: ಬಿ.ಸಿ. ಪಾಟೀಲ್

| Updated By: preethi shettigar

Updated on: Aug 01, 2021 | 2:09 PM

ನಮ್ಮ ತಾಲೂಕಿನಲ್ಲಿ ನೀರಾವರಿ ಯೋಜನೆ ಉದ್ಘಾಟನೆ ಇದೆ. ಅದರ ಸಂಬಂಧ ಸಿಎಂ ಬಸವರಾಜ್ ಬೊಮ್ಮಾಯಿಯವರನ್ನು ಭೇಟಿಯಾಗಿದ್ದೆ ಮತ್ತು ಅವರನ್ನು ಉದ್ಘಾಟನೆ ಕಾರ್ಯಕ್ರಮಕ್ಕೆ ಆಹ್ವಾನಿಸಲು ಬಂದಿದ್ದೇನೆ ಎಂದು ತಿಳಿಸಿದ್ದಾರೆ.

ನಮ್ಮನ್ನು ವಲಸಿಗರು, ಬಾಂಬೆ ಬಾಯ್ಸ್ ಎನ್ನುವುದನ್ನು ಬಿಡಿ: ಬಿ.ಸಿ. ಪಾಟೀಲ್
ಮಾಜಿ ಸಚಿವ ಬಿ.ಸಿ. ಪಾಟೀಲ್
Follow us on

ಬೆಂಗಳೂರು: ಪದೇ ಪದೇ ವಲಸಿಗರು ಎಂಬ ಪದವನ್ನು ಎಲ್ಲರೂ ಬಳಸುತ್ತಿದ್ದಾರೆ. ನಮ್ಮನ್ನು ವಲಸಿಗರು ಎಂದು ಕರೆಯಬೇಡಿ. ವಲಸಿಗ, ಬಾಂಬೆ ಬಾಯ್ಸ್ ಎನ್ನುವ ಶಬ್ದ ಬಿಟ್ಟುಬಿಡಿ. ನಾವು ಬಿಜೆಪಿ ಪಕ್ಷಕ್ಕೆ ಬಂದು ಗೆದ್ದು ಮಂತ್ರಿ ಆಗಿದ್ದೇವೆ‌. ಹೀಗಿದ್ದರೂ ನಮ್ಮನ್ನು ವಲಸಿಗರು ಎಂದು ಕರೆಯುವುದನ್ನು ಬಿಡಲಿಲ್ಲ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಭೇಟಿ ನಂತರ ಬಿ.ಸಿ ಪಾಟೀಲ್ ಮಾತನಾಡಿದ್ದು, ಸಂಪುಟ ರಚನೆ ಆಗಲಿ, ಈ ಮೊದಲು ಇದ್ದ ಇಲಾಖೆ ಬಗ್ಗೆ ಆಗಲಿ, ನಾನು ಸಿಎಂ ಜತೆ ಚರ್ಚೆ ಮಾಡಿಲ್ಲ. ನಮ್ಮ ತಾಲೂಕಿನಲ್ಲಿ ನೀರಾವರಿ ಯೋಜನೆ ಉದ್ಘಾಟನೆ ಇದೆ. ಅದರ ಸಂಬಂಧ ಸಿಎಂ ಬಸವರಾಜ್ ಬೊಮ್ಮಾಯಿಯವರನ್ನು ಭೇಟಿಯಾಗಿದ್ದೆ ಮತ್ತು ಅವರನ್ನು ಉದ್ಘಾಟನೆ ಕಾರ್ಯಕ್ರಮಕ್ಕೆ ಆಹ್ವಾನಿಸಲು ಬಂದಿದ್ದೇನೆ ಎಂದು ತಿಳಿಸಿದ್ದಾರೆ.

ಸಂಪುಟ ವಿಸ್ತರಣೆ ವಿಚಾರವಾಗಿ ಮಾತನಾಡಿದ ಅವರು, ಈ ಬಗ್ಗೆ ನಾನು ಸಿಎಂ ಜತೆ ಯಾವುದೇ ರೀತಿ ಚರ್ಚೆ ಮಾಡಿಲ್ಲ. ನೀರಾವರಿ ಯೋಜನೆ ಬಗ್ಗೆಯಷ್ಟೇ ಚರ್ಚೆ ಮಾಡಿ ಬಂದಿದ್ದೇನೆ. ಆದಷ್ಟು ಬೇಗ ಸಂಪುಟ ವಿಸ್ತರಣೆ ಆಗುತ್ತೆ ಎಂದು ಅವರೇ ಹೇಳಿದ್ದಾರೆ. ಏನಾಗುತ್ತೋ ನೋಡೋಣ ಎಂದು ಬೆಂಗಳೂರಿನಲ್ಲಿ ಮಾಜಿ ಸಚಿವ ಬಿ.ಸಿ ಪಾಟೀಲ್ ಹೇಳಿದ್ದಾರೆ.

ಮತ್ತೊಮ್ಮೆ ದೆಹಲಿಗೆ ತೆರಳಿ ಹೈಕಮಾಂಡ್ ಜತೆ ಚರ್ಚಿಸಿ ಸಚಿವ ಸಂಪುಟ ರಚಿಸುತ್ತೇನೆ: ಸಿಎಂ ಬಸವರಾಜ ಬೊಮ್ಮಾಯಿ

ಕರ್ನಾಟಕದ ಸಂಪುಟ ರಚನೆಗೆ ಸಂಬಂಧಿಸಿದಂತೆ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾರನ್ನು ಮತ್ತೊಮ್ಮೆ ಭೇಟಿಯಾಗಿ ಚರ್ಚಿಸುತ್ತೇನೆ ಎಂದು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ  ತಿಳಿಸಿದರು. ಹೈಕಮಾಂಡ್​ನಿಂದ ಸಂದೇಶ ಬಂದ ಬಳಿಕ ಮತ್ತೆ ದೆಹಲಿಗೆ ತೆರಳಿ ಹೈಕಮಾಂಡ್ ಜತೆ ಚರ್ಚಿಸಿ ರಾಜ್ಯದ ಸಚಿವ ಸಂಪುಟವನ್ನು ರಚಿಸುತ್ತೇನೆ ಎಂದು ಈಮೂಲಕ ಅವರು ಸ್ಪಷ್ಟ ಸಂದೇಶವನ್ನು ಆಕಾಂಕ್ಷಿಗಳಿಗೆ ರವಾನಿಸಿದಂತಾಗಿದೆ.

ಎರಡು ದಿನಗಳ ದೆಹಲಿ ಪ್ರವಾಸ ಮುಗಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಬೆಂಗಳೂರಿಗೆ ವಾಪಾಸ್ ಆಗಿದ್ದಾರೆ. ಏಕಾಂಗಿಯಾಗಿ ಪ್ರಮಾಣವಚನ ಸ್ವೀಕರಿಸಿರುವ ಸಿಎಂ‌ ಸಂಪುಟ ತಂಡ ಕಟ್ಟಲು ಹರಸಹಾಸ ಮಾಡ್ತಿದ್ದಾರೆ. ಸಿಎಂ ಬೊಮ್ಮಾಯಿ ದೆಹಲಿ ಭೇಟಿ ವೇಳೆ‌ ಸಂಪುಟ ರಚನೆ ಬಗ್ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರ ಬಳಿ ಚರ್ಚೆ ನಡೆಸಿದ್ದಾರೆ. ಸಂಪುಟ ರಚನೆಗೆ ಗ್ರೀನ್ ಸಿಗ್ನಲ್ ನೀಡುವಂತೆ ಮನವಿ ಮಾಡಿದ್ದಾರೆ. ತ್ವರಿತವಾಗಿ ಸಂಪುಟ ರಚನೆ ಮಾಡಲು ಹೈಕಮಾಂಡ್ ಉತ್ಸಾಹ ತೋರಿದ್ದು ಮುಂದಿನ ಬುಧವಾರ ಅಥವಾ ಗುರುವಾರ ಹೊಸ ಸಚಿವರು ಸಂಪುಟ ಸೇರ್ಪಡೆಯಾಗುವ ಸಾಧ್ಯತೆ ಇದೆ.

ಒಂದೇ ಹಂತದಲ್ಲಿ ಸಂಪುಟ‌ ರಚನೆ ಮಾಡಲು ಹೈಕಮಾಂಡ್ ಪ್ಲಾನ್
ಯಡಿಯೂರಪ್ಪನವರ ನೇತೃತ್ವ ಇಲ್ಲದ ಬಿಜೆಪಿ ಸರಕಾರದಲ್ಲಿ ಸಚಿವರನ್ನು ನೇಮಿಸುವ ವಿಚಾರವಾಗಿ ಹೈಕಮಾಂಡ್ ಹೆಚ್ಚು ಪ್ರಭಾವ ಬೀರಲಿದೆ. ಒಂದೇ ಹಂತದಲ್ಲಿ ಸಂಪುಟ ರಚನೆ ಮಾಡಲು ಹೈಕಮಾಂಡ್ ಪ್ಲಾನ್ ಮಾಡಿದೆ. ಮುಂದಿನ ವಿಧಾನಸಭಾ ಚುನಾವಣೆಗೆ ಒಂದೂವರೆ ವರ್ಷ ಬಾಕಿ ಉಳಿದಿದ್ದು, ಒಂದೇ ಹಂತದಲ್ಲಿ ಎನೆರ್ಜೆಟಿಕ್ ಟೀಂ ಕಟ್ಟಿ ಜನರಲ್ಲಿ ಸರಕಾರದ ಬಗ್ಗೆ ಒಳ್ಳೆ ಅಭಿಪ್ರಾಯದ ಮೂಡಿಸಲು ಬಿಜೆಪಿ ಹೈಕಮಾಂಡ್ ತಯಾರಿ ನಡೆಸಿದೆ. ವಲಸೆ ಬಂದವರಿಗೆ ಮತ್ತೆ ಸಚಿವ ಸ್ಥಾನ ನೀಡುವುದು ಸೇರಿದಂತೆ ಮೂಲ ಬಿಜೆಪಿ ಸಚಿವಾಕಾಂಕ್ಷಿಗಳ‌ ಬೇಡಿಕೆ ಈಡೇರಿಸುವುದು ಕಷ್ಟವಾದ್ರೆ ಎರಡು ಹಂತದಲ್ಲಿ ರಚನೆ ಮಾಡಲು ಹೈಕಮಾಂಡ್ ಯೋಚಿಸಿದೆ.

ಇದನ್ನೂ ಓದಿ:
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ಗೆ ಪ್ರತಿಭಟನೆ ಬಿಸಿ.. ವೀರಶೈವ ಮಹಾಸಭಾದಿಂದ ಧರಣಿ, ಆಕ್ರೋಶ

Exclusive: ದೇಶದಲ್ಲಿರುವ 12 ಬಿಜೆಪಿ ಮುಖ್ಯಮಂತ್ರಿಗಳಲ್ಲಿ ನಾಲ್ವರು ವಲಸಿಗರು; ಬಿಜೆಪಿ ಲೆಕ್ಕಾಚಾರ ಬದಲಾಯಿತೇಕೆ?

 

Published On - 1:59 pm, Sun, 1 August 21