Namma Metro: ಬೆಂಗಳೂರು ತಲುಪಿದ ನಮ್ಮ ಮೆಟ್ರೋದ ಮೊದಲ ಚಾಲಕ ರಹಿತ ರೈಲು

ಜನವರಿ 24 ರಂದು ಶಾಂಘೈ ಬಂದರಿನಿಂದ ಸಮುದ್ರ ಮಾರ್ಗವಾಗಿ ಕಳುಹಿಸಲಾದ ಮೆಟ್ರೋ ಟ್ರೈನ್ ಫೆಬ್ರವರಿ 6 ರಂದು ಚೀನಾದಿಂದ ಚೆನ್ನೈ ಬಂದರಿಗೆ ಬಂದು ತಲುಪಿತ್ತು. ಸದ್ಯ ಈಗ ಚೆನ್ನೈ ಬಂದರಿನಿಂದ ಬೆಂಗಳೂರಿನ ಹೆಬ್ಬಗೋಡಿ ಡಿಪೋಗೆ ಚಾಲಕ ರಹಿತ ನಮ್ಮ ಮೆಟ್ರೋ ರೈಲು ಬಂದು ತಲುಪಿದೆ. ಈ ಚಾಲಕ ರಹಿತ ರೈಲು ಆರ್‌ವಿ ರಸ್ತೆ-ಬೊಮ್ಮಸಂದ್ರ ಲೈನ್‌ನಲ್ಲಿ ಸಂಚರಿಸಲಿದೆ.

ಬೆಂಗಳೂರು, ಫೆ.14: ನಮ್ಮ ಮೆಟ್ರೋದ ಮೊದಲ ಚಾಲಕ ರಹಿತ (Driverless Metro) ರೈಲು ಬೆಂಗಳೂರು ತಲುಪಿದೆ. ಇಂದು ಬೆಳಿಗ್ಗೆ 3.30 ಕ್ಕೆ ಚೆನ್ನೈ ಬಂದರಿನಿಂದ ಬೆಂಗಳೂರಿನ ಹೆಬ್ಬಗೋಡಿ ಡಿಪೋಗೆ ಚಾಲಕ ರಹಿತ ನಮ್ಮ ಮೆಟ್ರೋ ರೈಲು (Namma Metro) ಬಂದು ತಲುಪಿದೆ. ಆರು ಬೋಗಿಗಳನ್ನು ಟ್ರೇಲರ್‌ಗಳ ಮೂಲಕ ಸಾಗಿಸಲಾಗಿದೆ. ಈ ಚಾಲಕ ರಹಿತ ರೈಲು ಆರ್‌ವಿ ರಸ್ತೆ-ಬೊಮ್ಮಸಂದ್ರ ಲೈನ್‌ನಲ್ಲಿ ಸಂಚರಿಸಲಿದೆ. ಪ್ರತಿ ಕೋಚ್ 38.7 ಮೆಟ್ರಿಕ್ ಟನ್ ತೂಕವಿದೆ.

ಜನವರಿ 24 ರಂದು ಶಾಂಘೈ ಬಂದರಿನಿಂದ ಸಮುದ್ರ ಮಾರ್ಗವಾಗಿ ಕಳುಹಿಸಲಾದ ಮೆಟ್ರೋ ಟ್ರೈನ್ ಫೆಬ್ರವರಿ 6 ರಂದು ಚೀನಾದಿಂದ ಚೆನ್ನೈ ಬಂದರಿಗೆ ಬಂದು ತಲುಪಿತ್ತು. ಬಳಿಕ ಕಸ್ಟಮ್ಸ್ ಕ್ಲಿಯರೆನ್ಸ್ ನಂತರ, ಈ ರೈಲನ್ನು ರಸ್ತೆ ಮೂಲಕ ಬೆಂಗಳೂರಿನ ಹೆಬ್ಬಗೋಡಿ ಡಿಪೋಗೆ ತರಲಾಗಿದೆ. ಚೀನಾ-ಮಾಲೀಕತ್ವದ ಸಿಆರ್‌ಆರ್‌ಸಿ ನಾನ್‌ಜಿಂಗ್ ಪುಜೆನ್ ಕಂ. ಲಿಮಿಟೆಡ್‌ನಿಂದ ತಯಾರಿಸಲ್ಪಟ್ಟ ಈ ರೈಲು, ಆರ್‌ವಿ ರಸ್ತೆ-ಬೊಮ್ಮಸಂದ್ರ ಲೈನ್‌ಗೆ ಪ್ರಾಯೋಗಿಕ ಸಂಚಾರ ನಡೆಸುತ್ತದೆ.

ಇದನ್ನೂ ಓದಿ: ಚೀನಾದಿಂದ ಬೆಂಗಳೂರಿನತ್ತ ಹೊರಟ ಚಾಲಕ ರಹಿತ ಮೆಟ್ರೋ, ಹೊಸ ಇತಿಹಾಸ ರಚಿಸಲು ಹಳದಿ ಕಾರಿಡಾರ್ ಸಜ್ಜು

ಚಾಲಕ ಇಲ್ಲದಿದ್ದರೂ ಈಗಾಗಲೇ ಅಳವಡಿಸಲಾದ ಪ್ರೋಗ್ರಾಂ ಆಧಾರದ ಮೇಲೆ ರೈಲು ಸಂಚರಿಸಲಿದೆ. ರೈಲಿನ ಸಂಚಾರವನ್ನು ಕಂಟ್ರೋಲ್‌ ರೂಮ್​ನಲ್ಲಿ ನಿಗಾ ವಹಿಸಲಾಗುತ್ತದೆ. ಚಾಲಕ ಇಲ್ಲದೇ ಈ ಮೆಟ್ರೋ ಗಂಟೆಗೆ 80 ಕಿ.ಮೀ. ವೇಗದಲ್ಲಿ ಚಲಿಸಲಿದೆ. 25 ಕೆವಿ ಸಾಮರ್ಥ್ಯದ ವಿದ್ಯುತ್‌ ಸಹಾಯದಿಂದ ಸಂಚರಿಸುತ್ತದೆ. ಸಿಸಿಟಿವಿ ಕ್ಯಾಮೆರಾಗಳನ್ನೂ ಬೋಗಿಗಳಲ್ಲಿ ಅಳವಡಿಸಲಾಗಿದೆ. ಇನ್ನು ಸಂಚಾರದಲ್ಲಿ ಸಮಸ್ಯೆ ಉಂಟಾದರೆ ತಕ್ಷಣ ಓಸಿಸಿಗೆ ಸಂದೇಶ ರವಾನೆ ಆಗಲಿದೆ. ಆಗ ತಕ್ಷಣ ರೈಲಿನ ಸಂಚಾರವನ್ನು ನಿಲ್ಲಿಸಲಾಗುತ್ತೆ.

ಬೆಂಗಳೂರು ತಲುಪಿದ ನಮ್ಮ ಮೆಟ್ರೋದ ಮೊದಲ ಚಾಲಕ ರಹಿತ ರೈಲು

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 10:15 am, Wed, 14 February 24