ಚೀನಾದಿಂದ ಬೆಂಗಳೂರಿನತ್ತ ಹೊರಟ ಚಾಲಕ ರಹಿತ ಮೆಟ್ರೋ, ಹೊಸ ಇತಿಹಾಸ ರಚಿಸಲು ಹಳದಿ ಕಾರಿಡಾರ್ ಸಜ್ಜು
Driverless Metro: ಬಹುದಿನಗಳಿಂದ ಚಾಲಕ ರಹಿತ ವಾಹನ, ಹಾರುವ ಕಾರು ಬಗ್ಗೆ ಕೇಳುತ್ತಲೇ ಇದ್ದೇವೆ. ಆದ್ರೆ, ಇದೀಗ ಚಾಲಕ ರಹಿತ ಮೆಟ್ರೋ ಬೆಂಗಳೂರಿನಲ್ಲಿ ಓಡಾಡಲಿದೆ. ಹೌದು..ಬೆಂಗಳೂರಿನಲ್ಲಿ ಚಾಲಕ ಇಲ್ಲದೇ ನಮ್ಮ ಮೆಟ್ರೋ ಸಂಚರಿಸಿ ಹೊಸ ಇತಿಹಾಸ ರಚಿಸಲು ಸಜ್ಜಾಗಿದೆ. ಈಗಾಗಲೇ ಚಾಲಕ ರಹಿತ ಮೆಟ್ರೋ ಚೀನಾದಿಂದ ಬೆಂಗಳೂರು ಕಡೆ ಹೊರಟಿದೆ.
ಬೆಂಗಳೂರು, (ಜನವರಿ 24): ಚಾಲಕ ರಹಿತ ಮೆಟ್ರೋ ರೈಲು(Driverless Metro) ಬೆಂಗಳೂರಿನಲ್ಲಿ(Bengaluru) ಆರಂಭಗೊಳ್ಳುತ್ತಿದೆ. ಇದರೊಂದಿಗೆ ನಮ್ಮ ಮೆಟ್ರೋ ಹಳದಿ ಕಾರಿಡಾರ್ ಹೊಸ ಇತಿಹಾಸ ರಚಿಸಲು ಸಜ್ಜಾಗಿದೆ. ಹೌದು…ಬೆಂಗಳೂರಿನ ಇಲೆಕ್ಟ್ರಾನಿಕ್ಸ್ ಸಿಟಿಗೆ ಮೊದಲ ಚಾಲಕ ರಹಿತ ರೈಲು ಚೀನಾದಿಂದ ಹೊರಟಿದೆ. ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ಅಧಿಕಾರಿಗಳು ಎಲೆಕ್ಟ್ರಾನಿಕ್ಸ್ ಸಿಟಿ ಮೆಟ್ರೋಗೆ ಮೊದಲ ಆರು ಬೋಗಿಗಳ ರೈಲನ್ನು ಜನವರಿ 20 ರಂದು ಹಡಗಿಗೆ ಲೋಡ್ ಮಾಡಲಾಗಿದ್ದು, ಹಡಗು ಮೆಟ್ರೋ ರೈಲು ಹೊತ್ತು ಸದ್ಯ ಚೆನ್ನೈನತ್ತ ತೆರಳುತ್ತಿದೆ.
ಇದು 2024 ರ ಮಧ್ಯ ಅಥವಾ ಫೆಬ್ರವರಿ ಅಂತ್ಯದ ವೇಳೆಗೆ ಚೆನ್ನೈ ಬಂದರಿಗೆ ಆಗಮಿಸುವ ನಿರೀಕ್ಷೆಯಿದೆ. ನಂತರ ಚೆನ್ನೈನಿಂದ ರಸ್ತೆ ಮೂಲಕ ಬೆಂಗಳೂರಿನ ಹೆಬ್ಬಗೋಡಿ ಡಿಪೋಗೆ ಸಾಗಿಸಲಾಗುತ್ತದೆ. ಈ ಚಾಲಕ ರಹಿತ ಮೆಟ್ರೋ ರೈಲಿಗೆ ಅತ್ಯಾಧುನಿಕ ತಂತ್ರಜ್ಞಾನವನ್ನು ಜೋಡಣೆ ಮಾಡಿದ ಬಳಿಕ ಎಲೆಕ್ಟ್ರಾನಿಕ್ಸ್ ಸಿಟಿ-ಆರ್‌ವಿ ರಸ್ತೆಗೆ ಸಂಪರ್ಕಿಸುವ 19-ಕಿಮೀ ಹಳದಿ ಮಾರ್ಗದಲ್ಲಿ ಓಡಾಡಲಿದ್ದು, ಸೆಪ್ಟೆಂಬರ್ ವೇಳೆಗೆ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ.
ಇದನ್ನೂ ಓದಿ: Driverless Metro: ರಾಜಧಾನಿಯಲ್ಲಿ ಸಂಚರಿಸಲಿವೆ ಚಾಲಕ ರಹಿತ ಮೆಟ್ರೋ ರೈಲು: ಇಲ್ಲಿದೆ ವಿಶೇಷತೆ
ಬಿಎಂಆರ್‌ಸಿಎಲ್ ಅಧಿಕಾರಿಗಳ ತಂಡವು ಫ್ಯಾಕ್ಟರಿ ಪರೀಕ್ಷೆಗಳಿಗಾಗಿ ಚೀನಾಕ್ಕೆ ಭೇಟಿ ನೀಡಿತ್ತು. ಇದು ಚೀನಾದ ಕಸ್ಟಮ್ಸ್ ಕಳುಹಿಸುವ ಮೊದಲು ತಪಾಸಣೆ ನಡೆಸಿತು. ಒಮ್ಮೆ ಬೆಂಗಳೂರಿಗೆ ತಲುಪಿದರೆ ಸುಮಾರು ಮೂರು ತಿಂಗಳ ಕಾಲ ಪ್ರಯೋಗಗಳನ್ನು ನಡೆಸಲಾಗುತ್ತದೆ. ಡಿಟಿಜಿ (ದೂರ-ಹೋಗಲು) ಸಿಗ್ನಲಿಂಗ್ ವ್ಯವಸ್ಥೆಯೊಂದಿಗೆ ಮೆಟ್ರೋ ಕಾರಿಡಾರ್‌ಗಳಿಗೆ ಇನ್ನೂ ಒಂದು ರೈಲು ಚೀನಾದಿಂದ ಬರಲಿದೆ” ಎಂದು ಬಿಎಂಆರ್‌ಸಿಎಲ್ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಚಾಲಕ ರಹಿತ ರೈಲಿನ ವಿಶೇಷತೆ
ಚಾಲಕ ಇರದಿದ್ದರೂ ಈಗಾಗಲೇ ಅಳವಡಿಸಲಾದ ಪ್ರೋಗ್ರಾಂ ಆಧಾರದ ಮೇಲೆ ರೈಲು ಸಂಚರಿಸಲಿದೆ. ರೈಲಿನ ಸಂಚಾರವನ್ನು ಕಂಟ್ರೋಲ್ ರೂಮ್ನಲ್ಲಿ ನಿಗಾ ವಹಿಸಲಾಗುತ್ತದೆ. ಚಾಲಕ ಇಲ್ಲದೇ ಈ ಮೆಟ್ರೋ ಗಂಟೆಗೆ 80 ಕಿ.ಮೀ. ವೇಗದಲ್ಲಿ ಚಲಿಸಲಿದೆ. 25 ಕೆವಿ ಸಾಮರ್ಥ್ಯದ ವಿದ್ಯುತ್ ಸಹಾಯದಿಂದ ಸಂಚರಿಸುತ್ತದೆ. ಸಿಸಿಟಿವಿ ಕ್ಯಾಮೆರಾಗಳನ್ನೂ ಬೋಗಿಗಳಲ್ಲಿ ಅಳವಡಿಸಲಾಗಿದೆ. ಇನ್ನು ಸಂಚಾರದಲ್ಲಿ ಸಮಸ್ಯೆ ಉಂಟಾದರೆ ತಕ್ಷಣ ಓಸಿಸಿಗೆ ಸಂದೇಶ ರವಾನೆ ಆಗಲಿದೆ. ಆಗ ತಕ್ಷಣ ರೈಲಿನ ಸಂಚಾರವನ್ನು ನಿಲ್ಲಿಸಲಾಗುತ್ತೆ.