Eid al-Adha 2023: ಬಕ್ರೀದ್ ಹಬ್ಬದಂದು ಬಿಬಿಎಂಪಿ ವ್ಯಾಪ್ತಿಯಲ್ಲಿ ಅನಧಿಕೃತ ಪ್ರಾಣಿವಧೆ ನಿಷೇಧ

|

Updated on: Jun 26, 2023 | 6:13 PM

ಬಕ್ರೀದ್ ಹಬ್ಬದಂದು ಅನಧಿಕೃತವಾಗಿ ಪ್ರಾಣಿವಧೆ ನಿರ್ಭಂಧಿಸಲಾಗಿದೆ ಮತ್ತು ಕಾನೂನು ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಪಶುಪಾಲನಾ ವಿಭಾಗದ ಜಂಟಿ ನಿರ್ದೇಶಕರು ಎಚ್ಚರಿಕೆ ನೀಡಿದ್ದಾರೆ.

Eid al-Adha 2023: ಬಕ್ರೀದ್ ಹಬ್ಬದಂದು ಬಿಬಿಎಂಪಿ ವ್ಯಾಪ್ತಿಯಲ್ಲಿ ಅನಧಿಕೃತ ಪ್ರಾಣಿವಧೆ ನಿಷೇಧ
ಬಕ್ರೀದ್ ಹಬ್ಬದಂದು ಬಿಬಿಎಂಪಿ ವ್ಯಾಪ್ತಿಯಲ್ಲಿ ಅನಧಿಕೃತ ಪ್ರಾಣಿವಧೆ ನಿಷೇಧ
Follow us on

ಬೆಂಗಳೂರು: ಬಕ್ರೀದ್ ಹಬ್ಬದಂದು ಅನಧಿಕೃತವಾಗಿ ಪ್ರಾಣಿವಧೆ ನಿರ್ಭಂಧಿಸಿ ಪಶುಪಾಲನಾ ವಿಭಾಗದ ಜಂಟಿ ನಿರ್ದೇಶಕ ಡಾ. ಕೆ.ಪಿ. ರವಿಕುಮಾರ್ (KP Ravikumar) ಆದೇಶಿಸಿದ್ದಾರೆ. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿ ಬಕ್ರೀದ್ ಹಬ್ಬ (Eid al-Adha 2023) ಆಚರಣೆ ಅಥವಾ ಧಾರ್ಮಿಕ ಚಟುವಟಿಕೆ ಸಂದರ್ಭಗಳಲ್ಲಿ ಹಾಗೂ ಜಾತ್ರೆ ಮತ್ತು ಹಬ್ಬ ಹರಿದಿನಗಳ ಸಂದರ್ಭದಲ್ಲಿ ಅನಧಿಕೃತ ಪ್ರಾಣಿವಧೆ ಮತ್ತು ಬಲಿ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ರಸ್ತೆ, ಪಾದಚಾರಿ ಮಾರ್ಗ, ಎಲ್ಲಾ ರೀತಿಯ ಆಸ್ಪತ್ರೆ ಆವರಣಗಳು, ನರ್ಸಿಂಗ್ ಹೋಂ ಒಳ ಮತ್ತು ಹೊರ ಆವರಣಗಳು, ಶಾಲೆ ಕಾಲೇಜುಗಳ ಒಳ ಮತ್ತು ಹೊರ ಆವರಣಗಳು, ಆಟದ ಮೈದಾನಗಳಲ್ಲಿ, ದೇವಸ್ಥಾನಗಳು ಅಥವಾ ಮಸೀದಿಗಳು ಹಾಗೂ ಇತರೆ ಧಾರ್ಮಿಕ ಸ್ಥಳಗಳ ಆವರಣಗಳಲ್ಲಿ, ಉದ್ಯಾನವನಗಳ ಒಳಗೆ ಮತ್ತು ಹೊರಗೆ ಅಥವ ಇನ್ಯಾವುದೇ ಸಾರ್ವಜನಿಕ ಪ್ರದೇಶಗಳಲ್ಲಿ ಯಾವುದೇ ಸಂದರ್ಭಗಳಲ್ಲಿ ಅನಧಿಕೃತ ಪ್ರಾಣಿವಧೆ ಮತ್ತು ಬಲಿ ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇದಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಮತ್ತು ಆಂಧ್ರಪ್ರದೇಶದಲ್ಲಿ ಬೈಕ್​​ ಕಳ್ಳತನ ಮಾಡುತ್ತಿದ್ದ ಬಾಲಕರ ಬಂಧನ

ಅನಧಿಕೃತ ಪ್ರಾಣಿವಧೆ ಮಾಡಿದರೆ ಐದು ವರ್ಷ ಜೈಲು

  1. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿನಿಯಮ 2020ರ ಪ್ರಕಾರ, ಅನಧಿಕೃತವಾಗಿ ಪ್ರಾಣಿವಧೆ ನಿರ್ಭಂಧಿಸಲಾಗಿದೆ ಮತ್ತು ಕಾನೂನು ಉಲ್ಲಂಘಿಸುವವರ ವಿರುದ್ದ ಕ್ರಮ ಜರುಗಿಸಲಾಗುವುದು.
  2. ಕರ್ನಾಟಕ ರಾಜ್ಯ ಪ್ರಾಣಿ ಬಲಿ ತಡೆ ಕಾಯ್ದೆ 1959ರ ಸೆಕ್ಷನ್ 3 ರ ಪ್ರಕಾರ, ಪ್ರಾಣಿ ಬಲಿ ಶಿಕ್ಷಾರ್ಹ ಅಪರಾಧವಾಗಿದ್ದು, ಅಂಥವರಿಗೆ 06 ತಿಂಗಳ ಸಜೆ ಅಥವಾ ದಂಡ ಎರಡೂ ವಿಧಿಸಬಹುದಾಗಿದೆ.
  3. ಪ್ರಾಣಿವಧೆ ಕಾಯ್ದೆಯ ಪ್ರಕಾರ ವಧೆಗೆ ಅರ್ಹವಾದ ಮತ್ತು ಆಹಾರಕ್ಕೆ ಯೋಗ್ಯವಾದ ಪ್ರಾಣಿಗಳನ್ನು ಅಧಿಕೃತ ಕಸಾಯಿಖಾನೆಗಳಲ್ಲಿ ಮಾತ್ರ ವಧೆ ಮಾಡಲು ಅವಕಾಶವಿರುತ್ತದೆ.
  4. ಭಾರತೀಯ ದಂಡ ಸಂಹಿತೆ (IPC) ಸೆಕ್ಷನ್ 429ರ ಪ್ರಕಾರ ಯಾವುದೇ ಪ್ರಾಣಿಗಳನ್ನು ಅನಧಿಕೃತವಾಗಿ ಕೊಂದರೆ ಐದು ವರ್ಷ ಜೈಲು ಶಿಕ್ಷೆ ಇದೆ.

ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ 2020ರಂತೆ ಯಾವುದೇ ವಯಸ್ಸಿನ ದನ, ಆಕಳು, ಎತ್ತು ಹೋರಿ, ಕರುಗಳನ್ನು ಬಲಿ ಅಥವಾ ಕುರ್ಬಾನಿ ಅಥವಾ ವಧೆ ಮಾಡುವುದನ್ನು ನಿಷೇಧಿಸಲಾಗಿದೆ. ವಧೆಗಾಗಿ ಯಾವುದೇ ವಯಸ್ಸಿನ ದನ, ಆಕಳು, ಎತ್ತು, ಹೋರಿ, ಕರುಗಳನ್ನು ಸಾಗಾಟ ಮಾಡುವುದು ಕೂಡ ಶಿಕ್ಷಾರ್ಹ ಅಪರಾಧವಾಗಿರುತ್ತದೆ.

ಸಾರ್ವಜನಿಕರು ಈ ಬಗ್ಗೆ ಎಲ್ಲಾ ರೀತಿಯ ಸಹಕಾರ ನೀಡುವಂತೆ ಕೋರಲಾಗಿದೆ. ಜೊತೆಗೆ ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ಸಹಾಯವಾಣಿ ಸಂಖ್ಯೆ 8277100200 ಗೆ ಕರೆ ಮಾಡಿ ದೂರು ಅಥವಾ ಮಾಹಿತಿ ನೀಡಬಹುದಾಗಿದೆ ಎಂದು ಪಶುಪಾಲನಾ ವಿಭಾಗದ ಜಂಟಿ ನಿರ್ದೇಶಕರಾದ ಡಾ. ಕೆ.ಪಿ. ರವಿಕುಮಾರ್ ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ