ಬೆಂಗಳೂರು ಮತ್ತು ಆಂಧ್ರಪ್ರದೇಶದಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದ ಬಾಲಕರ ಬಂಧನ
ಬೆಂಗಳೂರು ಮತ್ತು ಆಂಧ್ರಪ್ರದೇಶದ ವಿವಿಧ ನಗರಗಳಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪದ ಮೇಲೆ 16 ವರ್ಷದ ಇಬ್ಬರು ಬಾಲಕರನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು: ಬೆಂಗಳೂರು (Bengaluru) ಮತ್ತು ಆಂಧ್ರಪ್ರದೇಶದ (Andhra Pradesh) ವಿವಿಧ ನಗರಗಳಲ್ಲಿ ಬೈಕ್ ಕಳ್ಳತನ (Bike Robbery) ಮಾಡುತ್ತಿದ್ದ ಆರೋಪದ ಮೇಲೆ 16 ವರ್ಷದ ಇಬ್ಬರು ಬಾಲಕರನ್ನು (Minors) ಪೊಲೀಸರು (Police) ಬಂಧಿಸಿದ್ದಾರೆ. ಇವರು ಒಂದೇ ವರ್ಷದಲ್ಲಿ ಬರೊಬ್ಬರಿ 44 ಬೈಕ್‌ಗಳನ್ನು ಕಳ್ಳತ ಮಾಡಿದ್ದಾರೆ. ಅವುಗಳಲ್ಲಿ ಹೆಚ್ಚಿನವು ಗೇರ್‌ಲೆಸ್ ಸ್ಕೂಟರ್‌ಗಳಾಗಿವೆ. ಪೊಲೀಸರು ಬಾಲಕರನ್ನು ಬಾಲಾಪರಾಧಿಗೃಹಕ್ಕೆ ಒಪ್ಪಿಸಿದ್ದಾರೆ. ಇದಕ್ಕೂ ಮುನ್ನ ಪೊಲೀಸರು, ಪೋಷಕರು ಮತ್ತು ಮಕ್ಕಳ ಕಲ್ಯಾಣ ಸಮಿತಿಯ ಅಧಿಕಾರಿಗಳ ಸಮ್ಮುಖದಲ್ಲಿ ವಿಚಾರಣೆ ನಡೆಸಿದಾಗ ಆಶ್ಚರ್ಯಕರ ಸಂಗತಿ ಬಾಯಿಬಿಟ್ಟಿದ್ದಾರೆ. ಬಾಲಕರು ಬೈಕ್ ಕಳ್ಳತನದಲ್ಲಿ ನಿಪುಣರಾಗಿದ್ದು, ಬೈಕ್ನ ಹ್ಯಾಂಡಲ್ ಲಾಕ್ ಮುರಿದು ಕಳ್ಳತನ ಮಾಡುತ್ತಿದ್ದರು ಎಂದು ವಿಚಾರಣೆ ವೇಳೆ ತಿಳಿದುಬಂದಿದೆ.
ಅಷ್ಟಕ್ಕೂ ಬಾಲಕರು ಈ ದುಷ್ಟ ಬುದ್ದಿ ಕಲಿತಿದ್ದು ಎಲ್ಲಿ
ಈ ಇಬ್ಬರು ಬಾಲ ಆರೋಪಿಗಳಲ್ಲಿ ಓರ್ವ ಬಾಲಕ ನಗರದಲ್ಲಿ ತಾಯಿ ಮತ್ತು ಸಹೋದರಿಯೊಂದಿಗೆ ವಾಸವಾಗಿದ್ದನು. ಈತ ತಾಯಿ ಮತ್ತು ಸಹೋದರಿಗೆ ಬಹಳ ಕಾಡುತ್ತಿದ್ದನು. ಪ್ರತಿನಿತ್ಯ ಜಗಳವಾಡುತ್ತಿದ್ದನು. ಅಲ್ಲದೆ ತಂಬಾಕು ಸೇವನೆಯ ಚಟವೂ ಇತ್ತು. ಹೀಗಾಗಿ ಈತನನ್ನು ಸರಿ ದಾರಿಗೆ ತರಬೇಕು, ಈತ ಶಿಸ್ತು ಕಲಿಯಲಿ ಎಂದು ಒಂದೆರಡು ವರ್ಷಗಳ ಹಿಂದೆ ತಾಯಿ ಮಗನನ್ನು ರಿಮ್ಯಾಂಡ್ ಹೋಮ್ಗೆ ಸೇರಿಸಿದ್ದಳು.
ರಿಮ್ಯಾಂಡ್ ಹೋಮ್‌ನಲ್ಲಿ ಇನ್ನೊಬ್ಬ ಹುಡುಗನೊಂದಿಗೆ ಸೇರಿ ದ್ವಿಚಕ್ರ ವಾಹನಗಳ ಹ್ಯಾಂಡಲ್ ಮುರಿದು ಬೈಕ್ ಹೇಗೆ ಖದೀಯುವುದು, ಮತ್ತು ಎಲೆಕ್ಟ್ರಿಕಲ್ ಸರ್ಕ್ಯೂಟ್ ಅನ್ನು ಟ್ಯಾಂಪರಿಂಗ್ ಮಾಡಿ ಕಳ್ಳತನ ಮಾಡಿ ಓಡಿಸುವುದನ್ನು ಕಲಿತನು. ಇನ್ನು ಇನ್ನೊಬ್ಬ ಹುಡುಗನ ತಂದೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಗುತ್ತಿಗೆ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದರೇ, ತಾಯಿ ಗೃಹಿಣಿ.
ಇದನ್ನೂ ಓದಿ: ಜಡಗನಪುರ ಗ್ರಾಮದಲ್ಲಿ ಸರಣಿ ಕಳ್ಳತನ; ದೇವಸ್ಥಾನ ಹಾಗೂ ಮನೆಗೆ ಕನ್ನ
ಈ ಇಬ್ಬರೂ ಹುಡುಗರು ಹೈಸ್ಕೂಲ್ ಡ್ರಾಪ್ಔಟ್ ಆಗಿದ್ದಾರೆ. ಒಬ್ಬನು ಏಳನೇ ತರಗತಿ ಇನ್ನೊಬ್ಬ ಎಂಟನೇ ತರಗತಿವರೆಗೆ ಮಾತ್ರ ಓದಿದ್ದಾನೆ. ಇವರಿಬ್ಬರೂ ಒಂದು ಪ್ರದೇಶದಲ್ಲಿ ವಾಸಿಸುತ್ತಿದ್ದರಿಂದ ನಿಕಟ ಸ್ನೇಹಿತರಾಗಿದ್ದಾರೆ. ಹಗಲು ರಾತ್ರಿ ಗೊತ್ತುಗುರಿಯಿಲ್ಲದೆ ತಿರುಗಾಡುತ್ತಾ, ಪ್ರತ್ಯೇಕ ಸ್ಥಳಗಳಲ್ಲಿ ಅಥವಾ ಮಂದ ಬೆಳಕಿನಲ್ಲಿರುವ ವಸತಿ ಪ್ರದೇಶಗಳಲ್ಲಿ ನಿಲ್ಲಿಸಿದ ಬೈಕ್‌ಗಳನ್ನು ಕದಿಯುತ್ತಿದ್ದರು.
ಕದ್ದ ಬೈಕ್ಗಳಲ್ಲಿ 18 ಬೈಕ್ ಅನ್ನು ತಲಾ 5,000 ರೂ. ಗಳಿಗೆ ಮಾರಿದ್ದಾರೆ. ಬ್ಯಾಂಕ್‌ಗಳಿಗೆ ವಸೂಲಿ ಏಜೆಂಟ್‌ಗಳಾಗಿ ಕೆಲಸ ಮಾಡುತ್ತಿದ್ದು, ಸಾಲವನ್ನು ಪಾವತಿಸದ ಕಾರಣ ಅವರ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಈಗ ಮಾರುತ್ತಿದ್ದೇವೆ ಎಂದು ಹೇಳಿಕೊಂಡು ಬೈಕ್‌ಗಳನ್ನು ಮಾರುತ್ತಿದ್ದರು.
ಬಹುತೇಕ ಬೈಕ್‌ಗಳನ್ನು ಗಾರ್ಮೆಂಟ್ಸ್, ಸೆಕ್ಯುರಿಟಿ ಏಜೆನ್ಸಿಗಳು ಅಥವಾ ಕಾರ್ಮಿಕರಾಗಿ ಕೆಲಸ ಮಾಡುವ ಪುರುಷರಿಗೆ ಮಾರಾಟ ಮಾಡಿದರು. ಮಾರಾಟವಾಗದ ವಾಹನಗಳಲ್ಲಿ ಜಾಲಿ ರೈಡ್ ಮತ್ತು ವೀಲಿಂಗ್ ಮಾಡುತ್ತಿದ್ದರು. ಕೆಲವೊಮ್ಮೆ, ಟೈರ್ ಹಾಗೂ ಇನ್ನೀತರ ಬಿಡಿಭಾಗಗಳನ್ನು ಮಾರಾಟ ಮಾಡುತ್ತಿದ್ದರು.
ಪೊಲೀಸರ ಪ್ರಕಾರ, ಅಪ್ರಾಪ್ತರಿಬ್ಬರೂ ಯಾವುದೇ ಅಪರಾಧದ ಹಿನ್ನೆಲೆ ಹೊಂದಿಲ್ಲ. ಅವರ ಕೆಲವು ಸ್ನೇಹಿತರು ದರೋಡೆ ಮತ್ತು ವಾಹನ-ಕಳ್ಳತನದ ಆರೋಪದ ಮೇಲೆ ಬಂಧಿತರಾಗಿದ್ದಾರೆ. ಬೆಂಗಳೂರಿನ ಜೆಪಿ ನಗರ, ಬನಶಂಕರಿ, ಜಯನಗರ, ತಿಲಕನಗರ, ಮೈಕೋ ಲೇಔಟ್, ಎಚ್‌ಎಎಲ್, ಕೆಆರ್ ಪುರಂ, ಬೆಳ್ಳಂದೂರು, ಎಚ್‌ಎಸ್‌ಆರ್ ಲೇಔಟ್ ಮತ್ತು ಕಾಡುಗೋಡಿಯಲ್ಲಿ ಇವರಿಬ್ಬರು ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿದ್ದಾರೆ.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ