ಆಪರೇಶನ್ ಕಮಲವೇ ಬಿಜೆಪಿ ಸೋಲಿಗೆ ಕಾರಣ ಎಂದ ಈಶ್ವರಪ್ಪ; ಸಿಟಿ ರವಿ, ರವಿ ಕುಮಾರ್ ಹೇಳಿದ್ದೇನು ಗೊತ್ತಾ?
ಬಿಜೆಪಿ ಸೋಲಿಗೆ ಆಪರೇಷನ್ ಕಮಲವೇ ಕಾರಣ ಎಂದು ಮಾಜಿ ಸಚಿವ ಕೆಎಸ್ ಈಶ್ವರಪ್ಪ ಅವರು ಪರೋಕ್ಷವಾಗಿ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಮತ್ತು ಷರಿಷತ್ ಸದಸ್ಯ ಎನ್ ರವಿಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರು: ಬಿಜೆಪಿಯಲ್ಲಿ ಶಿಸ್ತು ಹೋಗಿದೆ, ಕಾಂಗ್ರೆಸ್ ಗಾಳಿ ನಮ್ಮ ಮೇಲೂ ಬಂದಿದೆ. ಕಾಂಗ್ರೆಸ್ ನಾಯಕರನ್ನು ಕರೆದುಕೊಂಡು ಬಂದಿದ್ದಕ್ಕೆ ಅನುಭವಿಸುತ್ತಿದ್ದೇವೆ ಎಂದು ಹೇಳುವ ಮೂಲಕ ಬಿಜೆಪಿ ಸೋಲಿಗೆ ಆಪರೇಷನ್ ಕಮಲವೇ ಕಾರಣ ಎಂದು ಮಾಜಿ ಸಚಿವ ಕೆಎಸ್ ಈಶ್ವರಪ್ಪ (KS Eshwarappa) ಪರೋಕ್ಷವಾಗಿ ಹೇಳಿದ್ದಾರೆ. ಇದು ಬಿಜೆಪಿಯಲ್ಲಿ ಆಂತರಿಕ ಚರ್ಚೆಗೆ ಕಾರಣವಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ವಿಧಾನ ಪರಿಷತ್ ಬಿಜೆಪಿ ಸದಸ್ಯ ಎನ್ ರವಿಕುಮಾರ್, ಕೆ.ಎಸ್.ಈಶ್ವರಪ್ಪ ಅವರು ಯಾವ ಹಿನ್ನೆಲೆಯಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಕಾಂಗ್ರೆಸ್ನಿಂದ ಬಂದವರಿಂದಲೇ ನಾವು ಅಧಿಕಾರ ನಡೆಸಿದ್ದು. ಪಕ್ಷಕ್ಕೆ ಬಂದ ಬಹಳಷ್ಟು ವಲಸಿಗರು ಗೆದ್ದಿದ್ದಾರೆ. ಲೋಕಸಭೆ ಚುನಾವಣೆಯನ್ನು ಎಲ್ಲರೂ ಒಟ್ಟಾಗಿ ಎದುರಿಸುತ್ತೇವೆ. ಹೊರಗಿನವರು, ಒಳಗಿನವರು ಎಂಬ ಭೇದ ಇಲ್ಲ ಎಂದರು.
ಈಶ್ವರಪ್ಪ ಹೇಳಿಕೆ ಬಗ್ಗೆ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ, ನಾನು ಇದರ ಬಗ್ಗೆ ಸಾರ್ವಜನಿಕ ಚರ್ಚೆಗೆ ಹೋಗುವುದಿಲ್ಲ. ನಾನು ಅಂದು ದೆಹಲಿಯಲ್ಲಿ ಕೇವಲ ಅರ್ಕಾವತಿಗೆ ಸಂಬಂಧಿಸಿದಂತೆ ಮಾತ್ರ ಹೇಳಿದ್ದೆ. ಅರ್ಕಾವತಿ ವಿಷಯದಲ್ಲಿ ನಾವು ಬಿಗಿ ನಿಲುವು ತೆಗೆದುಕೊಂಡಿದ್ದರೆ ಅಧಿಕಾರ ಕಳೆದುಕೊಳ್ಳುವ ಪರಿಸ್ಥಿತಿ ಬರುತ್ತಿರಲಿಲ್ಲ ಅಂತ ನಾನು ದೆಹಲಿಯಲ್ಲಿ ಹೇಳಿದ್ದೆ. ಹೀಗಾಗಿ ಎಲ್ಲವನ್ನೂ ಬಂದವರ ತಲೆ ಮೇಲೆ ಕಟ್ಟಲು ಇಷ್ಟ ಪಡುವುದಿಲ್ಲ. ಯಾರು ಸರಿ ಅಂತಲೂ ನಾವು ಹೇಳುವುದಿಲ್ಲ. ಆದರೆ ಪಕ್ಷದ ವೇದಿಕೆಯಲ್ಲಿ ಏನೇ ಇದ್ದರೂ ಮಾತಾಡುತ್ತೇನೆ. ನಮ್ಮಿಂದ ಏನೂ ತಪ್ಪು ಆಗಿಲ್ಲ ಅನ್ನೋದು ಬೇಡ, ಕೆಲವು ತಪ್ಪಾಗಳಾಗಿವೆ ಎಂದರು.
ಇದನ್ನೂ ಓದಿ: ಬಿಜೆಪಿ ಕಾರ್ಯಕರ್ತರ ನೈತಿಕ ಸ್ಥೈರ್ಯ ಕುಗ್ಗಿಸಲು ಡಿಕೆ ಶಿವಕುಮಾರ್ ಆಟ: ಶಾಸಕ ಯತ್ನಾಳ್
ಇತ್ತ ಕಾಂಗ್ರೆಸ್ ಹಿರಿಯ ನಾಯಕರೂ ಆಗಿರುವ ಸಚಿವ ಎಂಬಿ ಪಾಟೀಲ್ ಅವರು ಈಶ್ವರಪ್ಪ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಮುನಿರತ್ನ, ಸುಧಾಕರ, ಎಮ್‌ಟಿಬಿ ಎಸ್.ಟಿ.ಸೋಮಶೇಖರ್, ಬಿ.ಸಿ.ಪಾಟೀಲ್ ಸೇರಿದಂತೆ ಬಿಜೆಪಿ ಸೇರಿದ 17 ಮಂದಿ ಉತ್ತರ ಕೊಡಲಿ ಎಂದರು. ಅಲ್ಲದೆ, ಅವರನ್ನ ಮರಳಿ ಕಾಂಗ್ರೆಸ್‌ಗೆ ಸೇರಿಸಿಕೊಳ್ಳುವ ಮಾತೆ ಇಲ್ಲ ಎಂದರು.
ಅಡ್ಜೆಸ್ಟ್ಮೆಂಟ್ ರಾಜಕಾರಣ ಬಗ್ಗೆ ಬಹಿರಂಗವಾಗಿ ಮಾತಾಡಬಾರದು. ನಾಲ್ಕು ಗೋಡೆಗಳ ಮಧ್ಯೆ ಮಾತಾಡಬೇಕೆಂದು ಅಧ್ಯಕ್ಷರಿಗೆ ಮನವಿ ಮಾಡುತ್ತೇನೆ. ಕರ್ನಾಟಕ ರಾಜಕಾರಣದ ಇತಿಹಾಸದಲ್ಲೇ ಹೊಂದಾಣಿಕೆ ನಡೆದಿಲ್ಲ. ಬಿಜೆಪಿಯಲ್ಲಿ ಶಿಸ್ತು ಹೋಗಿದೆ, ಕಾಂಗ್ರೆಸ್ ಗಾಳಿ ನಮ್ಮ ಮೇಲೂ ಬಂದಿದೆ. ಕಾಂಗ್ರೆಸ್ ನಾಯಕರನ್ನು ಕರೆದುಕೊಂಡು ಬಂದಿದ್ದಕ್ಕೆ ಅನುಭವಿಸುತ್ತಿದ್ದೇವೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಆಪರೇಷನ್ ಕಮಲವೇ ಬಿಜೆಪಿ ಸೋಲಿಗೆ ಕಾರಣ ಎಂದು ಹುಬ್ಬಳ್ಳಿಯಲ್ಲಿ ಈಶ್ವರಪ್ಪ ಹೇಳಿಕೆ ನೀಡಿದ್ದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ