ಬೆಂಗಳೂರು, (ಸೆಪ್ಟೆಂಬರ್ 09): ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಕೊಲೆ ಮಾಡಿ ಬಳಿಕ ಸುಮ್ಮನಹಳ್ಳಿ ಮೋರಿ ಬಳಿ ಶವ ಎಸೆದು ಆರೋಪಿಗಳು ಪರಾರಿಯಾಗಿದ್ದರು. ಬಳಿಕ ಈ ಪ್ರಕರಣ ಸದ್ಯ ಸಾಕಷ್ಟು ಸದ್ದು ಮಾಡುತ್ತಿದೆ. ಇದರ ಬೆನ್ನಲ್ಲೇ ಇಂದು (ಸೆಪ್ಟೆಂಬರ್ 09) ಇದೇ ಸುಮ್ಮನಹಳ್ಳಿ ಮೊರಿಯಲ್ಲಿ ರೇಣುಕಾಸ್ವಾಮಿ ಶವ ಪತ್ತೆಯಾಗಿದ್ದ ಸ್ಥಳದ ಹತ್ತಿರದಲ್ಲಿಯೇ ವೃದ್ಧೆಯ ಮೃತದೇಹವೊಂದು ಪತ್ತೆಯಾಗಿದೆ. ಹೌದು…ಇಂದು ಬೆಳಗ್ಗೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಸುಮ್ಮನಹಳ್ಳಿ ಮೋರಿಯಲ್ಲಿ ವೃದ್ಧೆ ಮೃತದೇಹ ಪತ್ತೆಯಾಗಿದ್ದು, ಕೂಡಲೇ ಸ್ಥಳೀಯರು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ಮೇರೆಗೆ ಕಾಮಾಕ್ಷಿಪಾಳ್ಯ ಪೊಲೀಸರು, ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದು, ವೃದ್ದೆ ಗುರುತು ಇನ್ನೂ ಪತ್ತೆಯಾಗಿಲ್ಲ. ಆಯತಪ್ಪಿ ಮೋರಿಗೆ ಬಿದ್ದು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಆಯತಪ್ಪಿ ಬೀಳುವುದಾದರೆ ಅಕ್ಕಪಕ್ಕದ ಮನೆಯವರು ಅಜ್ಜಿಯ ಶವ ಗುರುತಿಸುತ್ತಿದ್ದರು. ಆದ್ರೆ, ಅಜ್ಜಿಯ ಗುರುತು ಪತ್ತೆಯಾಗುತ್ತಿಲ್ಲವೆಂದರೆ ರೇಣುಕಾಸ್ವಾಮಿ ಮಾದರಿಯಂತೆ ಬೇರೆ ಕಡೆ ಕೊಲೆ ಮಾಡಿ ನಂತರ ಮೃತದೇಹವನ್ನು ತಂದು ಸುಮ್ಮನಹಳ್ಳಿ ಮೋರಿಗೆ ಹಾಕಿರಬಹುದು ಎನ್ನುವ ಅನುಮಾನಗಳು ವ್ಯಕ್ತವಾಗಿವೆ.
ಇದನ್ನೂ ಓದಿ: ಮಡಿಕೇರಿ: ಆಟೋ ಚಾಲಕನ ಆತ್ಮಹತ್ಯೆ ಕೇಸ್ಗೆ ಬಿಗ್ ಟಿಸ್ಟ್: ಶೆಡ್ನಲ್ಲಿ ಹತ್ಯೆ ಮಾಡಲಾಯ್ತೆ?
ಮರಣ ಬಲೆ ಬಿಡಲು ಹೋದ ಮೀನುಗಾರ ಸಮುದ್ರ ಪಾಲಾಗಿರುವ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಸಾಲಿಗ್ರಾಮ ಪಾರಂಪಳ್ಳಿಯ ಸಮುದ್ರ ತೀರದಲ್ಲಿ ನಡೆದಿದೆ. ಭಾಸ್ಕರ ಪೂಜಾರಿ ( 55) ಮೃತಪಟ್ಟ ಮೀನುಗಾರ. ಪಾರಂಪಳ್ಳಿ ಮರಿನಾ ಮನೆಯ ಗೆಸ್ಟ್ ಹೌಸ್ ಬಳಿ ಮರಣಬಲೆ ಬಿಟ್ಟಿದ್ದ. ಆದ್ರೆ, ಆ ಮರಣಬಲೆ ಮೇಲಕ್ಕೆತ್ತಲು ಸಮುದ್ರ ಇಳಿದಾಗ ಅಲೆಗಳಿಗೆ ಸಿಲುಕಿದ್ದಾನೆ. ಆಗ ಕೂಡಲೇ ಕರಾವಳಿ ಪೊಲೀಸ್ ಠಾಣೆಯ ಸಿಬ್ಬಂದಿ ಭಾಸ್ಕರ ಪೂಜಾರಿಯನ್ನು ರಕ್ಷಿಸಿ ಆಸ್ಪತ್ರೆಗೆ ರವಾನಿಸಿದ್ದಾರೆ. ಆದ್ರೆ, ದುರದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೇ ಮೀನುಗಾರ ಭಾಸ್ಕರ ಪೂಜಾರಿ ಕೊನೆಯುಸಿರೆಳೆದಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:00 pm, Mon, 9 September 24