ಬೆಂಗಳೂರಿನ ಹೃದಯಭಾಗದಲ್ಲೇ ಇದೆ ಪಾಕಿಸ್ತಾನ, ಚೀನಾ ಪ್ರಜೆಗಳ ಸಾವಿರಾರು ಕೋಟಿ ರೂ. ಮೌಲ್ಯದ ಆಸ್ತಿ! ಎಲ್ಲೆಲ್ಲ ಇವೆ ಗೊತ್ತೇ?

ಬೆಂಗಳೂರಿನಲ್ಲಿ ಸಾವಿರಾರು ಕೋಟಿ ರೂ. ಮೌಲ್ಯದ ಪಾಕಿಸ್ತಾನ ಮತ್ತು ಚೀನಾ ಪ್ರಜೆಗಳ ಸ್ಥಿರ ಆಸ್ತಿಗಳು ಪತ್ತೆಯಾಗಿವೆ. ಎನಿಮಿ ಪ್ರಾಪರ್ಟೀಸ್ ಕಾಯ್ದೆ ಅಡಿ ಇವುಗಳನ್ನು ಗುರುತಿಸಲಾಗಿದ್ದು, ರಾಜಭವನ ರಸ್ತೆ ಸೇರಿ ನಾಲ್ಕು ಪ್ರಮುಖ ಸ್ಥಳಗಳಲ್ಲಿ ಈ ಆಸ್ತಿಗಳಿವೆ. ಸರ್ಕಾರವು ಇವುಗಳ ಮೌಲ್ಯಮಾಪನ ಪೂರ್ಣಗೊಳಿಸಿ, ಹರಾಜು ಪ್ರಕ್ರಿಯೆ ಆರಂಭಿಸಲು ಸಿದ್ಧತೆ ನಡೆಸಿದೆ.

ಬೆಂಗಳೂರಿನ ಹೃದಯಭಾಗದಲ್ಲೇ ಇದೆ ಪಾಕಿಸ್ತಾನ, ಚೀನಾ ಪ್ರಜೆಗಳ ಸಾವಿರಾರು ಕೋಟಿ ರೂ. ಮೌಲ್ಯದ ಆಸ್ತಿ! ಎಲ್ಲೆಲ್ಲ ಇವೆ ಗೊತ್ತೇ?
ಸಾಂದರ್ಭಿಕ ಚಿತ್ರ
Updated By: Ganapathi Sharma

Updated on: Nov 12, 2025 | 3:03 PM

ಬೆಂಗಳೂರು, ನವೆಂಬರ್ 12: ಒಂದೆಡೆ ಭಾರತ ಪಾಕಿಸ್ತಾನ (Pakistan) ನಡುವಣ ಉದ್ವಿಗ್ನ ಪರಿಸ್ಥಿತಿ ತುಸು ನಿಯಂತ್ರಣಕ್ಕೆ ಬಂದಿದೆ ಎನ್ನುವಾಗಲೇ ದೆಹಲಿಯಲ್ಲಿ ಬಾಂಬ್ ಸ್ಫೋಟ ಸಂಭವಿಸಿದೆ. ಇದರ ಹಿಂದೆ ಪಾಕ್ ಉಗ್ರರ ಕೈವಾಡ ಇರುವ ಬಗ್ಗೆ ಬಲವಾದ ಶಂಕೆಯೂ ವ್ಯಕ್ತವಾಗಿದೆ. ಇಂಥ ಸಂದರ್ಭದಲ್ಲೇ ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ (Bengaluru), ಅದರಲ್ಲೂ ನಗರದ ಹೃದಯ ಭಾಗದಲ್ಲೇ ನಾಲ್ಕು ಕಡೆಗಳಲ್ಲಿ ಪಾಕಿಸ್ತಾನಿ ಹಾಗೂ ಚೀನಾ ಪ್ರಜೆಗಳ ಆಸ್ತಿ ಇರುವುದು ಗೊತ್ತಾಗಿದೆ. ಪಾಕಿಸ್ತಾನ ಹಾಗೂ ಚೀನಾ ರಾಷ್ಟ್ರಗಳ ಪ್ರಜೆಗಳ ಹೆಸರಲ್ಲಿ ದಾಖಲಾಗಿರುವ ಸಾವಿರಾರು ಕೋಟಿ ಮೌಲ್ಯದ ಆಸ್ತಿಗಳ ಪತ್ತೆಯಾಗಿದ್ದು, ಇವುಗಳನ್ನು 1968ರ ಎನಿಮಿ ಪ್ರಾಪರ್ಟೀಸ್ ಆಸ್ತಿ ಕಾಯ್ದೆ (Enemy Property Act, 1968) ಅಡಿ ಎನಿಮಿ ಪ್ರಾಪರ್ಟಿ ಎಂದು ಗುರುತಿಸಲಾಗಿದೆ. ಈ ಆಸ್ತಿಗಳನ್ನು ಹರಾಜು ಮಾಡಲು ಸರ್ಕಾರ ಸಿದ್ಧತೆ ನಡೆಸಿದೆ.

ಎನಿಮಿ ಪ್ರಾಪರ್ಟಿ ಎಂದರೇನು?

ಶತ್ರು ರಾಷ್ಟ್ರಗಳಿಗೆ ತೆರಳಿ ಅಲ್ಲಿನ ಪೌರತ್ವ ಪಡೆದವರು ದೇಶದಲ್ಲಿ ಹೊಂದಿರುವ ಆಸ್ತಿಯನ್ನು ‘ಎನಿಮಿ ಪ್ರಾಪರ್ಟಿ’ ಎಂದು ಕರೆಯಲಾಗುತ್ತದೆ. 1968ರ ಎನಿಮಿ ಪ್ರಾಪರ್ಟೀಸ್ ಆಸ್ತಿ ಕಾಯ್ದೆ ಅಡಿ ಈ ಕ್ರಮ ಕೈಗೊಳ್ಳಲಾಗುತ್ತದೆ. ಸದ್ಯ ರಾಜಭವನ ರಸ್ತೆಯಲ್ಲಿರುವ ಕೆಲವು ಪ್ರಮುಖ ಆಸ್ತಿಗಳನ್ನು ‘ಎನಿಮಿ ಪ್ರಾಪರ್ಟಿ’ (ಶತ್ರು ರಾಷ್ಟ್ರದ ಪ್ರಜೆಗಳ ಆಸ್ತಿ) ಎಂದು ಗುರುತಿಸಲಾಗಿದ್ದು, ಇವುಗಳ ಹರಾಜು ಪ್ರಕ್ರಿಯೆ ಆರಂಭಿಸಲು ತಯಾರಿ ನಡೆಯುತ್ತಿದೆ. ಈ ಆಸ್ತಿಗಳು ಭಾರತದಿಂದ ಪಾಕಿಸ್ತಾನ ಅಥವಾ ಚೀನಾ ದೇಶಕ್ಕೆ ತೆರಳಿ ಅಲ್ಲಿನ ನಾಗರಿಕತ್ವ ಪಡೆದವರ ಆಸ್ತಿಗಳಾಗಿವೆ.

ಪಾಕಿಸ್ತಾನೀಯರ ಆಸ್ತಿ ಹರಾಜಿಗೆ ಸಿದ್ಧತೆ ಪೂರ್ಣ

ಕಸ್ಟೋಡಿಯನ್ ಆಫ್ ಎನಿಮಿ ಪ್ರಾಪರ್ಟಿ ಫಾರ್ ಇಂಡಿಯಾ ಇಲಾಖೆ ಈ ಆಸ್ತಿಗಳನ್ನು ಗುರುತಿಸಿದ್ದು, ಬೆಂಗಳೂರಿನ ನಗರ ಜಿಲ್ಲಾಡಳಿತ ಈಗ ಸರ್ಕಾರದ ನಿರ್ದೇಶನದ ಮೇರೆಗೆ ಮೌಲ್ಯ ನಿಗದಿಯ ಕಾರ್ಯಾಚರಣೆ ಪೂರ್ಣಗೊಳಿಸಿದೆ. ಸರ್ಕಾರಿ ದರ ಮತ್ತು ಮಾರುಕಟ್ಟೆ ದರ ಎರಡನ್ನೂ ನಿಗದಿ ಮಾಡಲಾಗಿದೆ.

ನಗರದಲ್ಲಿ ಒಟ್ಟು ನಾಲ್ಕು ಕಡೆ ಶತ್ರು ರಾಷ್ಟ್ರದ ಪ್ರಜೆಗಳ ಆಸ್ತಿಗಳನ್ನು ಗುರುತಿಸಲಾಗಿದ್ದು, ಇದೇ ತಿಂಗಳಲ್ಲಿ ಹರಾಜು ಪ್ರಕ್ರಿಯೆ ಆರಂಭವಾಗುವ ಸಾಧ್ಯತೆ ಇದೆ. ಈ ಹರಾಜಿನಿಂದ ಸರ್ಕಾರಕ್ಕೆ ಸಾವಿರಾರು ಕೋಟಿ ರೂ. ಆದಾಯ ಸಿಗುವ ನಿರೀಕ್ಷೆಯಿದೆ.

ಬೆಂಗಳೂರಿನಲ್ಲಿ ಎಲ್ಲೆಲ್ಲಿವೆ ಎನಿಮಿ ಪ್ರಾಪರ್ಟಿ?

  1. ರಾಜಭವನ ರಸ್ತೆಯ ವಾರ್ಡ್ ನಂ.78, ಕಬ್ಬನ್ ರಸ್ತೆ ಬಳಿ, ಮ್ಯುನಿಸಿಪಲ್ ನಂ.3 ಮತ್ತು 5 ರಲ್ಲಿ ಒಟ್ಟು 1,23,504 ಚ.ಅಡಿ ವಿಸ್ತೀರ್ಣದ ಆಸ್ತಿ ಇದೆ. ಇದರ ಮಾಲೀಕ ಮರಿಯಮ್ ಮಿರ್ಜಾ ಖಲೀಲ್ ಆಗಿದ್ದಾರೆ. ಈ ಆಸ್ತಿಗೆ ಕ್ಯಾಪಿಟಲ್ ಹೋಟೆಲ್, ಪರಾಗ್ ಹೋಟೆಲ್, ಪ್ರೆಸ್ಟೀಜ್ ಸಿಗ್ಮಾ / ಹೆಚ್​ಪಿಸಿಎಲ್ ಪೆಟ್ರೋಲ್ ಬಂಕ್ ಬಾಡಿಗೆದಾರರಾಗಿದ್ದಾರೆ.
  2. ವಿಕ್ಟೋರಿಯಾ ರಸ್ತೆಯ ಸಿವಿಲ್ ಸ್ಟೇಷನ್ ಪ್ರದೇಶ, ಪ್ರೆಮೈಸಸ್ ನಂ.3 (ಹಳೆಯ ನಂ.2), ಬ್ಲಾಕ್ ನಂ.2 ಮತ್ತು 8 ರಲ್ಲಿ ಒಟ್ಟು 8,845 ಚ.ಅಡಿ ವಿಸ್ತೀರ್ಣದ ಆಸ್ತಿ ಇದ್ದು, ಇದರ ಮಾಲೀಕ ಜೋಸೆಫಿನ್ ರಾಜಮ್ಮಾ ಜೇವಿಯರ್ ಆಗಿದ್ದಾರೆ.
  3. ಕಲಾಸಿಪಾಳ್ಯದ 2ನೇ ಮೇನ್ ರಸ್ತೆ, ಪ್ಲಾಟ್ ನಂ.41 (ಹಳೆಯ), ನಂ.21 ರಲ್ಲಿರುವ ಆಸ್ತಿ 70’x30’ ವಿಸ್ತೀರ್ಣ ಹೊಂದಿದ್ದು ಸಯ್ಯದ್ ಒಬೇದುಲ್ಲಾ, ಸಯ್ಯದ್ ಸೈದುಲ್ಲಾ, ಸಯ್ಯದ್ ಸೈಫುಲ್ಲಾ, ಸಯ್ಯದ್ ಅಹ್ಮದುಲ್ಲಾ, ಸಯ್ಯದ್ ಶಮ್ಸುಲ್ಲಾ, ಸಯ್ಯದ್ ಅಮಿನಾ, ಬಾನಿ ನೂರ್ ಮಾಲೀಕರಾಗಿದ್ದಾರೆ.
  4. ಹಾಂಗ್​ಕಾಂಗ್ ಹೋಟೆಲ್, ನಂ.4, ಗ್ರಾಂಟ್ ರಸ್ತೆಯಲ್ಲಿ ಮೈಕಲ್ ಥಾಮ್ ಎಂಬವರ ಹೆಸರಿನಲ್ಲಿ ಕೂಡ ಎನಿಮಿ ಪ್ರಾಪರ್ಟಿ ಇರುವುದು ಪತ್ತೆಯಾಗಿದೆ.

ಇದನ್ನೂ ಓದಿ: ದೆಹಲಿ ಸ್ಫೋಟಕ್ಕೆ ಕಾರಣವಾಗಿದ್ದ ಕಾರು 12 ದಿನಗಳಿಂದ ಎಲ್ಲಿತ್ತು ಗೊತ್ತೇ?

ಶತ್ರು ರಾಷ್ಟ್ರಗಳ ಪ್ರಜೆಗಳು ದೇಶದಲ್ಲಿ ಹೊಂದಿರುವ ಸ್ಥಿರಾಸ್ತಿಗಳನ್ನು ನಿರ್ವಹಿಸುವ ಸಂಬಂಧ ಕೇಂದ್ರ ಗೃಹ ಸಚಿವಾಲಯ ಕಳೆದ ವರ್ಷ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿತ್ತು. ಅದರಂತೆ, 2024ರ ನವೆಂಬರ್​​ನಲ್ಲಿ ಕಂದಾಯ ಇಲಾಖೆ ಕಾರ್ಯದರ್ಶಿ ಅಧಿಸೂಚನೆ ಹೊರಡಿಸಿ ಎನಿಮಿ ಪ್ರಾಪರ್ಟಿ ಗುರುತಿಸಲು ಸೂಚನೆ ನೀಡಿದ್ದರು.

ಕೇಂದ್ರ ಸರ್ಕಾರದ ಸೂಚನೆ ಬಳಿಕ ಮುಂದಿನ ಕ್ರಮ: ಡಿಸಿ

ಕೇಂದ್ರ ಸರ್ಕಾರ ಎನಿಮಿ ಪ್ರಾಪರ್ಟಿಗಳನ್ನು ಗುರುತಿಸಲು ಹೇಳಿತ್ತು. ಅದರಂತೆ ಈಗ ಬೆಂಗಳೂರಲ್ಲಿರುವ ಆಸ್ತಿಗಳನ್ನು ಗುರುತಿಸಿದ್ದೇವೆ. ಈಗ ಕ್ಯಾಪಿಟಲ್ ಹೊಟೇಲ್ ಒಂದು ಕಮರ್ಷಿಯಲ್ ಬಿಲ್ಡಿಂಗ್ ಇದೆ. ಇನ್ನು ಕೆಲ ಜಾಗಗಳು ಕೂಡ ಎನಿಮಿ ಪ್ರಾಪರ್ಟಿ ಎಂಬುದು ಗೊತ್ತಾಗಿದೆ. ಕೇಂದ್ರ ಸರ್ಕಾರದ ಸೂಚನೆ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್ ಮಾಹಿತಿ ನೀಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:11 pm, Wed, 12 November 25