ಬೆಂಗಳೂರು, ಅ.14: ನಗರದಲ್ಲಿ ಬಿಎಂಟಿಸಿ (BMTC) ಬಸ್ ಅಪಘಾತ ಪ್ರಕರಣಗಳು ಹೆಚ್ಚುತ್ತಿವೆ. ದ್ವಿಚಕ್ರ ವಾಹನಕ್ಕೆ ಬಸ್ ಡಿಕ್ಕಿ ಹೊಡೆದು ಇಂಜಿನಿಯರ್ ವಿದ್ಯಾರ್ಥಿ ಸಾವನ್ನಪ್ಪಿದ ಘಟನೆ ಯಶವಂತಪುರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ನಡೆದಿದೆ. ಕಳೆದ 10 ದಿನಗಳಲ್ಲಿ ಬಿಎಂಟಿಸಿ ಬಸ್ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದಾರೆ.
ಬಿಎಂಟಿಸಿ (BMTC) ಬಸ್ ಡಿಕ್ಕಿ ಹೊಡೆದು ಕಾಲೇಜು ವಿದ್ಯಾರ್ಥಿ ಸೇರಿದಂತೆ ಇಬ್ಬರು ಸಾವನ್ನಪ್ಪಿದ ಪ್ರತ್ಯೇಕ ಘಟನೆ ನಗರದಲ್ಲಿ ನಡೆದಿದೆ. ಯಶವಂತಪುರ ಗಾರೆಪ್ಪನ ಪಾಳ್ಯ ರಸ್ತೆ ಮಾರ್ಗವಾಗಿ ಹೋಗುತ್ತಿದ್ದ ಬಸ್ ಹೂವಿನ ಮಾರ್ಕೆಟ್ ಸಮೀಪ ಹಿಂಭಾಗದಿಂದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ದುರ್ಘಟನೆ ಸಂಭವಿಸಿದೆ.
ಗಂಗಾಧರ್ (21) ಮೃತ ದುರ್ದೈವಿ. ಹೆಚ್ಎಎಲ್ಗೆ ಇಂಟರ್ನಿಶಿಫ್ ಸರ್ಟಿಫಿಕೇಟ್ ತರಲು ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಗಂಗಾಧರ್ಗೆ ಹೂವಿನ ಮಾರ್ಕೆಟ್ ಸಮೀಪ ಹಿಂಬಂದಿಯಿಂದ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದಿದೆ. ಈ ವೇಳೆ ಹಿಂಬದಿ ಚಕ್ರ ಹರಿದು ಗಂಗಾಧರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಕುಡಿದ ಮತ್ತಿನಲ್ಲಿ ಶಾಲಾ ಬಸ್ ಚಾಲನೆ, ಓರ್ವ ಸಾವು
ಘಟನೆ ಸಂಬಂಧ ಸ್ಥಳಕ್ಕೆ ಆಗಮಿಸಿದ ಯಶವಂತಪುರ ಸಂಚಾರ ಠಾಣಾ ಪೊಲೀಸರು ಪರಿಶೀಲನೆ ನಡೆಸಿದ್ದು, ಅಪಘಾತ ಎಸಗಿದ್ದ BMTC ಬಸ್ ಚಾಲಕನಿಗೆ ಠಾಣೆಗೆ ಬರುವಂತೆ ಸೂಚನೆ ನೀಡಿದ್ದಾರೆ. ಅಲ್ಲದೆ, ವಿದ್ಯಾರ್ಥಿ ಮೃತದೇಹ ಮರಣೋತ್ತರ ಪರೀಕ್ಷೆಗೆ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ರವಾನಿಸಲಾಗಿದೆ.
ಅವಘಡ ಸಂಬಂಧ ಟಿವಿ9 ಜೊತೆ ಮಾತನಾಡಿದ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಜಿ.ಸತ್ಯವತಿ, ಬಿಎಂಟಿಸಿ ಬಸ್ ಚಾಲಕರು ಜವಾಬ್ದಾರಿಯಿಂದ ಇರಬೇಕು. ಬೈಕ್ ಸವಾರರು ಕೂಡ ಎಚ್ಚರಿಕೆಯಿಂದ ಇರಬೇಕು. ಮಕ್ಕಳನ್ನು ಬೈಕ್ನಲ್ಲಿ ಕರೆದೊಯ್ಯುವಾಗ ಎಚ್ಚರವಹಿಸಬೇಕು ಎಂದರು. ಬಿಎಂಟಿಸಿ ಬಸ್ ಅಪಘಾತ ಪ್ರಕರಣಗಳಿಂದ ನಮಗೂ ನೋವಾಗುತ್ತದೆ ಎಂದರು.
ಚಾಲಕರಿಗೆ ಒತ್ತಡ ಕಡಿಮೆ ಮಾಡಲು ಪೈಲಟ್ ನಿಯೋಜನೆಗೆ ನಿರ್ಧಾರ ಮಾಡಲಾಗಿದೆ. ಇಂಟೆಲ್ ಸಂಸ್ಥೆ ಸಹಯೋಗದೊಂದಿಗೆ ಸೆನ್ಸಾರ್ ಅಳವಡಿಕೆಗೆ ನಿರ್ಧಾರ ಮಾಡಲಾಗಿದೆ. ಸದ್ಯ 10 ಬಸ್ಗಳಲ್ಲಿ ಪ್ರಯೋಗಿಕವಾಗಿ ಸೆನ್ಸಾರ್ ಅಳವಡಿಸಲು ನಿರ್ಧಾರ ಮಾಡಲಾಗಿದೆ ಎಂದು ತಿಳಿಸಿದರು.
ಕಳೆದ 10 ದಿನಗಳ ಅಂತರದಲ್ಲಿ BMTC ಬಸ್ ಅಪಘಾತದಲ್ಲಿ ಒಟ್ಟು ಮೂವರ ಬಲಿಯಾಗಿದ್ದಾರೆ. ಅಕ್ಟೋಬರ್ 5 ರಂದು ಸಂಜೆ 5 ಗಂಟೆ ಸುಮಾರಿಗೆ ಓವರ್ ಟೇಕ್ ಮಾಡುವ ವೇಳೆ ಬಿಎಂಟಿಸಿಗೆ ಡಿಕ್ಕಿ ಹೊಡೆದ ಆ್ಯಕ್ಟೀವಾ ಬೈಕ್ ಚಾಲಕ ಭರತ್ ರೆಡ್ಡಿ (23) ಸ್ಥಳದಲ್ಲೇ ಸಾವನ್ನಪ್ಪಿದ್ದನು. ಅಟ್ಟೂರಿನ ಬಳಿಯ ಮದರ್ ಡೈರಿ ಬಳಿ ನಡೆದ ಘಟನೆ ಇದಾಗಿದೆ.
ಅಟ್ವೂರು ಕಡೆಯಿಂದ ಬಿಎಂಟಿಸಿ ಬಸ್ ವೇಗವಾಗಿ ಬರುತ್ತಿತ್ತು. ಇದೇ ವೇಳೆ ವೇಗವಾಗಿ ಬಸ್ ಪಕ್ಕದಲ್ಲೇ ಓವರ್ ಟೇಕ್ ಮಾಡಲು ಮುಂದಾದಾಗ ಬೈಕ್ನಿಂದ ಕೆಳಗೆ ಬಿದ್ದ ಭರತ್ ಮೇಲೆ ಬಸ್ ಹರಿದಿದೆ. ಇಂಜಿನಿಯರಿಂಗ್ ಮುಗಿಸಿದ್ದ ಭರತ್ ಸಿವಿಲ್ ಕಾಂಟ್ರಾಕ್ಟರ್ ಆಗಿದ್ದ. ಘಟನೆ ಸಂಬಂಧ ಯಲಹಂಕ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಿಎಂಟಿಸಿ ಹರಿದು ಮೂರು ವರ್ಷದ ಮಗು ಬಲಿಯಾಗಿದ್ದ ಘಟನೆ ಅಕ್ಟೋಬರ್ 9 ರಂದು ಗಾರೇಪಾಳ್ಯ ಜಂಕ್ಷನ್ನಲ್ಲಿ ನಡೆದಿತ್ತು. ಅಯಾನ್ ಮೃತಪಟ್ಟ ಮಗು. ದೊಡ್ಡಮ್ಮನ ಜೊತೆ ವಾಸವಾಗಿದ್ದ ಮಗು, ಬೈಕ್ನಲ್ಲಿ ಮನೆಗೆ ಹೋಗುತ್ತಿದ್ದಾಗ ಹಿಂಬಂದಿಯಿಂದ ಬೈಕ್ಗೆ ಬಿಎಂಟಿಸಿ ಬಸ್ ಡಿಕ್ಕಿಯಾಗಿದೆ. ಪರಿಣಾಮ ಹಿಂಬದಿಯಲ್ಲಿ ಕುಳಿದ್ದ ಮಗು ಕೆಳಗೆ ಬಿದ್ದಿದೆ. ಈ ವೇಳೆ ಬಸ್ ಚಕ್ರ ಹರಿದು ಮಗು ಮೃತಪಟ್ಟಿತ್ತು.
ಘಟನೆ ಸಂಬಂದ ಹುಳಿಮಾವು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಿಎಂಟಿಸಿ ಬಸ್ ಹಾಗೂ ಚಾಲಕರನ್ನ ವಶಕ್ಕೆ ಪಡೆಯಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:20 am, Sat, 14 October 23