
ಬೆಂಗಳೂರು, ಸೆಪ್ಟೆಂಬರ್ 07: ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ನಕಲಿ ಕ್ಲಿನಿಕ್ ಹಾಗೂ ನಕಲಿ ವೈದ್ಯರ ಹಾವಳಿ ದಿನದಿಂದ ದಿನಕ್ಕೆ ಮಿತಿಮೀರುತ್ತಿದ್ದು, ಜನರ ಜೀವದ ಜೊತೆ ಚೆಲ್ಲಾಟವಾಡಲಾಗುತ್ತಿದೆ. ಕೊವಿಡ್ ಸಾಂಕ್ರಾಮಿಕದ ಬಳಿಕ ಸೂಕ್ತ ಪದವಿ, ತರಬೇತಿ ಹಾಗೂ ನೋಂದಣಿ ಇಲ್ಲದೆಯೇ ತಲೆ ಎತ್ತಿರುವ ಸಾವಿರಾರು ನಕಲಿ ಕ್ಲಿನಿಕ್‌ಗಳ ವಿರುದ್ಧ ಆರೋಗ್ಯ ಇಲಾಖೆ ಈಗ ಸಮರ ಸಾರಿದೆ.
ರಾಜ್ಯದಲ್ಲಿ ಇದುವರೆಗೆ 583ಕ್ಕೂ ಹೆಚ್ಚು ನಕಲಿ ವೈದ್ಯರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ. ಆದಾಗ್ಯೂ, ಆರೋಗ್ಯ ಇಲಾಖೆಗೆ ನಕಲಿ ವೈದ್ಯರ ವಿರುದ್ಧ ದೂರುಗಳ ಸುರಿಮಳೆಯೇ ಬರುತ್ತಿದೆ. ಅಲೋಪಥಿ, ಆಯುರ್ವೇದ, ಹೋಮಿಯೋಪಥಿ ಹಾಗೂ ನ್ಯಾಚುರೋಪಥಿ ಹೆಸರುಗಳಲ್ಲಿ ಅನಧಿಕೃತ ದಂಧೆ ನಡೆಸುತ್ತಿರುವವರ ಪಟ್ಟಿಯನ್ನು ಇಲಾಖೆ ಸಿದ್ಧಪಡಿಸಿದೆ.
ಗಡಿ ಭಾಗದ ಜಿಲ್ಲೆಗಳಲ್ಲಿ ಹಾಗೂ ಬೆಂಗಳೂರಿನಲ್ಲಿ ಕೆಲವರು ‘ಮೊಬೈಲ್ ಕ್ಲಿನಿಕ್’ ಮಾಡಿಕೊಂಡು ಪ್ರತಿದಿನ ಸ್ಥಳ ಮತ್ತು ಫೋನ್ ನಂಬರ್ ಬದಲಾಯಿಸುತ್ತಾ ಚಿಕಿತ್ಸೆ ನೀಡುತ್ತಿದ್ದಾರೆ. ಕೆಲ ನಿರುದ್ಯೋಗಿಗಳು ಜನರ ಅನಾರೋಗ್ಯವನ್ನೇ ಬಂಡವಾಳ ಮಾಡಿಕೊಂಡು ಎಂಬಿಬಿಎಸ್ ಪದವಿ ಇಲ್ಲದೆ ಕ್ಲಿನಿಕ್ ತೆರೆದು ಚಿಕಿತ್ಸೆ ನೀಡುತ್ತಿರುವುದು ಬೆಳಕಿಗೆ ಬಂದಿದೆ.
ನಕಲಿ ವೈದ್ಯರು ನೀಡುವ ಅವೈಜ್ಞಾನಿಕ ಮಾತ್ರೆ ಮತ್ತು ಚಿಕಿತ್ಸೆಯಿಂದ ಸಾರ್ವಜನಿಕರ ಜೀವಕ್ಕೆ ಸಂಚಕಾರ ಒದಗುತ್ತಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದು, ಸಾರ್ವಜನಿಕರು ಸಹ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿದೆ.
ಇತ್ತೀಚೆಗೆ ಕಲುಷಿತ ಆಹಾರ ನೀಡುತ್ತಿದ್ದ ಹೋಟೆಲ್‌ಗಳ ಮೇಲೆ ದಾಳಿ ನಡೆಸಿದ್ದ ಸರ್ಕಾರ, ಈಗ ನಕಲಿ ವೈದ್ಯರ ಜಾಲವನ್ನು ಧ್ವಂಸ ಮಾಡಲು ಮುಂದಾಗಿದೆ. ಸಾರ್ವಜನಿಕರು ಜಾಗರೂಕರಾಗಿದ್ದಾಗ ಮಾತ್ರ ಈ ನಕಲಿ ವೈದ್ಯರ ದಂಧೆಗೆ ಪೂರ್ಣವಿರಾಮ ಇಡಲು ಸಾಧ್ಯ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.