ಬೆಂಗಳೂರಿನಲ್ಲಿ ಮರ್ಯಾದಾ ಹತ್ಯೆ: ಪ್ರಿಯಕರನೊಂದಿಗೆ ಓಡಿಹೋಗಿದ್ದ ಮಗಳನ್ನೇ ಹತ್ಯೆ ಮಾಡಿದ ತಂದೆ

ಬೆಂಗಳೂರಿನಲ್ಲಿ ಮರ್ಯಾದಾ ಹತ್ಯೆ ನಡೆದಿದೆ. ಪ್ರಿಯಕರನೊಂದಿಗೆ ಓಡಿ ಹೋದ ತನ್ನ ಮಗಳನ್ನೇ ತಂದೆ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಪರಪ್ಪನ ಅಗ್ರಹಾರದ ನಾಗನಾಥಪುರದ ಡಾಕ್ಟರ್ ಲೇಔಟ್‌ನಲ್ಲಿ ನಡೆದಿದೆ.

ಬೆಂಗಳೂರಿನಲ್ಲಿ ಮರ್ಯಾದಾ ಹತ್ಯೆ: ಪ್ರಿಯಕರನೊಂದಿಗೆ ಓಡಿಹೋಗಿದ್ದ  ಮಗಳನ್ನೇ ಹತ್ಯೆ ಮಾಡಿದ ತಂದೆ
ಪ್ರಿಯಕರನೊಂದಿಗೆ ಓಡಿಹೋದ ಮಗಳನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ ತಂದೆ
Edited By:

Updated on: Oct 22, 2023 | 6:54 PM

ಆನೇಕಲ್, ಅ.22: ಬೆಂಗಳೂರು ನಗರದಲ್ಲಿ ಮರ್ಯಾದೆಗೆ ಯುವತಿಯೊಬ್ಬಳ ಹತ್ಯೆ ನಡೆದಿದೆ. ಪ್ರಿಯಕರನೊಂದಿಗೆ ಓಡಿ ಹೋಗಿದ್ದಕ್ಕೆ ತಂದೆಯೇ ತನ್ನ ಮಗಳನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಬೆಂಗಳೂರು ನಗರದ (Bengaluru) ಪರಪ್ಪನ ಅಗ್ರಹಾರದ ನಾಗನಾಥಪುರದ ಡಾಕ್ಟರ್ ಲೇಔಟ್‌ನಲ್ಲಿ ನಡೆದಿದೆ. ಪಲ್ಲವಿ (17) ಕೊಲೆಯಾದ ಯುವತಿ.

ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ಮೂಲದ ಗಣೇಶ್​ ಮಗಳು ಪಲ್ಲವಿ ಶಾಲೆಗೆ ಹೋಗುವಾಗ ಪ್ರೀತಿಯ ಬಲೆಗೆ ಬಿದ್ದಿದ್ದಳು. ಈ ವಿಚಾರ ತಿಳಿದು ನಾಗನಾಥಪುರದಲ್ಲಿರುವ ಮಾವನ ಮನೆಗೆ ಪಲ್ಲವಿಯನ್ನು ಕರೆದೊಯ್ದು ಬಿಡಲಾಗಿತ್ತು. ಆದರೆ ಅಕ್ಟೋಬರ್ 14 ರಂದು ಮಾವನ ಮನೆಯಿಂದ ಪಲ್ಲವಿ ಕಾಣೆಯಾಗಿದ್ದಳು.

ಈ ಬಗ್ಗೆ ಪೊಲೀಸರಿಗೆ ಕುಟುಂಬಸ್ಥರು ದೂರು ನೀಡಿದ್ದರು. ಅದರಂತೆ ಪೊಲೀಸರು ಅಕ್ಟೋಬರ್ 20 ರಂದು ಪಲ್ಲವಿಯನ್ನು ಪತ್ತೆ ಹಚ್ಚಿ ಠಾಣೆಗೆ ಕರೆದೊಯ್ದಿದ್ದರು. ನಂತರ ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿತ್ತು. ಕೂಡಲೇ ಠಾಣೆಗೆ ಆಗಮಿಸಿದ ಮಾವ ಶಾಂತಕುಮಾರ್, ಪಲ್ಲವಿಯನ್ನು ಮನೆಗೆ ಕರೆದೊಯ್ದಿದ್ದರು.

ಇದನ್ನೂ ಓದಿ: ಆನೇಕಲ್: ಪ್ರಿಯಕರನ ಜೊತೆ ಓಡಿ ಹೋದ ಮಗಳು, ತಂದೆ ಆತ್ಮಹತ್ಯೆ

ನಿನ್ನೆ ಬೆಳಗ್ಗೆ 10.30ರ ಸುಮಾರಿಗೆ ನಾಗನಾಥಪುರಕ್ಕೆ ಪಲ್ಲವಿ ತಂದೆ ಗಣೇಶ್ ಆಗಮಿಸಿದ್ದರು. ಈ ವೇಳೆ ಪತ್ನಿ ಶಾರದಾ ಮತ್ತು ಪಲ್ಲವಿ ಜೊತೆ ಗಲಾಟೆ ಮಾಡಿದ್ದ. ಗಲಾಟೆ ವಿಕೋಪಕ್ಕೆ ಹೋಗಿ ಮನೆಯಲ್ಲಿದ್ದ ಮಚ್ಚಿನಿಂದ ಪಲ್ಲವಿಯನ್ನೇ ಕೊಚ್ಚಿ ಕೊಲೆ ಮಾಡಿದ್ದಾನೆ.

ಹತ್ಯೆ ಮಾಡುವ ವೇಳೆ ಪತ್ನಿ ಹಾಗೂ ಬಾಮೈದ ತಡೆಯಲು ಮುಂದಾದಾಗ ಅವರ ಮೇಲೂ ಗಣೇಶ್ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ. ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಪರಪ್ಪನ ಅಗ್ರಹಾರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:51 pm, Sun, 22 October 23