ಬೆಂಗಳೂರು, ಸೆ.3: ಸಸ್ಯಾಹಾರ ಎಂದು ಮಗನಿಗೆ ಚಿಕನ್ ಬರ್ಗರ್ (Chicken Burger) ನೀಡಿದ ಹೊಟೇಲ್ ವಿರುದ್ಧ ವ್ಯಕ್ತಿಯೊಬ್ಬರು ಗ್ರಾಹಕರ ಆಯೋಗಕ್ಕೆ (Consumer Commission) ದೂರು ನೀಡಿದ್ದರು. ವಿಚಾರಣೆ ನಡೆಸಿದ ಆಯೋಗವು, ದೂರುದಾರರು ರೂಮ್ ಬಾಡಿಗೆ, ಆಹಾರ ಇತ್ಯಾದಿಗಳಿಗೆ ಪಾವತಿಸಿದ ಒಟ್ಟು 15 ಸಾವಿರ ರೂಪಾಯಿಯನ್ನು ವಾಪಸ್ ನೀಡುವಂತೆ ಹೋಟೆಲ್ ಹರ್ಷ ದಿ ಫರ್ನ್ ಹೊಟೇಲ್ಗೆ ಆದೇಶಿಸಿದೆ.
ಬೆಂಗಳೂರಿನ ದೊಡ್ಡಬಳ್ಳಾಪುರ ರಸ್ತೆಯಲ್ಲಿ ವಾಸವಾಗಿರುವ 62 ವರ್ಷದ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ದೂರಿನ ವಿಚಾರಣೆ ನಡೆಸಿದ ಅಧ್ಯಕ್ಷ ಶಿವರಾಮ ಕೆ, ಸದಸ್ಯರಾದ ಚಂದ್ರಶೇಖರ ಎಸ್ ನೂಲಾ ಮತ್ತು ರೇಖಾ ಸಾಯಣ್ಣವರ್ ಅವರನ್ನೊಳಗೊಂಡ ಮೂರನೇ ಹೆಚ್ಚುವರಿ ಬೆಂಗಳೂರು ನಗರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಈ ಆದೇಶ ನೀಡಿದೆ.
ದೂರುದಾರರು ಶುದ್ಧ ಸಸ್ಯಾಹಾರಿ ಆಹಾರ ಪದ್ಧತಿಗೆ ಅನುಸರಿಸುತ್ತಿದ್ದಾರೆ. ಇವರಿಗೆ ಮಾಂಸಾಹಾರಿ ಆಹಾರವನ್ನು ನೀಡುವ ಮೂಲಕ ಧಾರ್ಮಿಕ ಭಾವನೆಗಳು, ಆಚರಣೆಗಳು ಮತ್ತು ದೀರ್ಘಕಾಲದ ಪವಿತ್ರ ಸಂಪ್ರದಾಯಕ್ಕೆ ಧಕ್ಕೆ ತರಲಾಗಿದೆ. ಅಲ್ಲದೆ, ಯಾತನೆಯನ್ನು ಉಂಟುಮಾಡಿದೆ ಎಂದು ಆಯೋಗವು ಅಭಿಪ್ರಾಯಪಟ್ಟಿದೆ.
ಇದನ್ನೂ ಓದಿ: ಧಾರವಾಡ: ಸಿಮ್ ಸಕ್ರಿಯಗೊಳಿಸಲು ಜಿಯೋ ಕಂಪನಿಗೆ ನಿರ್ದೇಶನ ನೀಡಿದ ಗ್ರಾಹಕರ ಆಯೋಗ
ಸಂಬಂಧಿಕರೊಬ್ಬರ ಅಗಲಿಕೆಯ ಸಮಾರಂಭದಲ್ಲಿ ಭಾಗವಹಿಸಲು ಬೆಂಗಳೂರಿನ ದೊಡ್ಡಬಳ್ಳಾಪುರ ರಸ್ತೆ ಬಳಿಯ ನಿವಾಸಿ ದೂರುದಾರರು ಸೇರಿದಂತೆ ಮೂವರು, 2023 ರ ಫೆಬ್ರವರಿ 5 ರಂದು ಶಿವಮೊಗ್ಗಕ್ಕೆ ಆಗಮಿಸಿದ್ದರು. ಅಲ್ಲದೆ, ಕಾರ್ಯಕ್ರಮ ಮುಕ್ತಾಯದ ವರೆಗೆ ತಂಗಲು ಫೆ.5ರಿಂದ ಫೆ.8ರ ವರೆಗೆ ಹೋಟೆಲ್ ಹರ್ಷ ದಿ ಫರ್ನ್ನಲ್ಲಿ ರೂಮ್ ಬುಕ್ ಮಾಡಿದ್ದರು.
ಇವರು ತಂಗಿದ್ದ ರೂಮ್ನಲ್ಲಿದ್ದ ಮಂಚ-ಹಾಸಿಗೆ ಸರಿಯಿರಲಿಲ್ಲ. ಇದರಿಂದಾಗಿ ದೂರುದಾರರಿಗೆ ಬೆನ್ನು ನೋವು ಉಂಟಾಗಿದೆ. ಅಲ್ಲದೆ, ಕಡಲೆಕಾಯಿ, ಸಸ್ಯಾಹಾರಿ ಬರ್ಗರ್ ಮತ್ತು ಸ್ಯಾಂಡ್ವಿಚ್ ಅನ್ನು ಆರ್ಡರ್ ಮಾಡಲಾಗಿತ್ತು. ಅದರಂತೆ, ದೂರುದಾರನ ಮಗ ಸಸ್ಯಾಹಾರಿ ಎಂದು ತಿಂದ ಬರ್ಗರ್ ಚಿಕನ್ ಬರ್ಗರ್ ಆಗಿತ್ತು ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ಘಟನೆಯು ತನ್ನ ಮಗನಿಗೆ ತೀವ್ರ ಆಘಾತ ಪಶ್ಚಾತ್ತಾಪ, ಖಿನ್ನತೆ ಮತ್ತು ಅಪರಾಧವನ್ನು ಉಂಟುಮಾಡಿತು. ಅವರು ತೀವ್ರವಾದ ಜೀರ್ಣಕಾರಿ ಸಮಸ್ಯೆಗಳು ಮತ್ತು ಹೊಟ್ಟೆಯ ಕಾಯಿಲೆಗಳಿಂದ ಬಳಲಿದ್ದಾರೆ. ಹೀಗಾಗಿ ಪರಿಹಾರ ನೀಡುವಂತೆ ದೂರಿನಲ್ಲಿ ಮನವಿ ಮಾಡಿದ್ದರು. ದೂರು ದಾಖಲಾದ ನಂತರ ಆಯೋಗದಿಂದ ಹೋಟೆಲ್‌ಗೆ ನೋಟಿಸ್ ಜಾರಿ ಮಾಡಲಾಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:52 pm, Sun, 3 September 23