ಬೆಂಗಳೂರು, (ಆಗಸ್ಟ್ 17): ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿ ಗುತ್ತಿಗೆದಾರರ ಸಂಘದ (BBMP contractors association) ನಡುವಿನ ಹಗ್ಗಜಗ್ಗಾಟ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ಬಾಕಿ ಬಿಲ್ ಬಿಡುಗಡೆ ಮಾಡುವಂತೆ ಬಿಬಿಎಂಪಿ(BBMP) ಗುತ್ತಿಗೆದಾರರ ಸಂಘ ಆಗ್ರಹಿಸಿದ್ದು, ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕಿದೆ. ಈ ಹಿನ್ನೆಲೆಯಲ್ಲಿ ಇದೀಗ ಬಿಬಿಎಂಪಿ ಗುತ್ತಿಗೆದಾರರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಬಿಬಿಎಂಪಿ ಅಧಿಕಾರಿ ಮಹದೇವ್ ದೂರಿನ ಮೇರೆಗೆ ಬೆಂಗಳೂರಿನ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಬಿಬಿಎಂಪಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಂಜುನಾಥ್ ಸೇರಿದಂತೆ ಒಟ್ಟು 57 ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಈ ದೂರಿನ ಸಂಬಂಧ ಗುತ್ತಿಗೆದಾರರ ಪಿಟಿಷನ್ ವಿಚಾರಣೆಗೆ ಇಳಿದಿರುವ ಪೊಲೀಸರು, ಗುತ್ತಿಗೆದಾರರಿಗೆ ನೋಟಿಸ್ ಜಾರಿ ಮಾಡಿದ್ದು, ಎಸಿಪಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಶೇಷಾದ್ರಿಪುರಂ ಎಸಿಪಿ ಗುತ್ತಿಗೆದಾರರಿಗೆ ನೋಟಿಸ್ ನೀಡಿದ್ದಾರೆ.
ಡಿಸಿಎಂ ಡಿಕೆ ಶಿವಕುಮಾರ್ ಒತ್ತಡ ಹೇರಿ ಹಣ ಬಿಡುಗಡೆ ಮಾಡುತ್ತಿಲ್ಲ. ನಮ್ಮ ಕಾಮಗಾರಿ ಮುಕ್ತಾಯ ಆಗಿದ್ದರೂ ಹಣ ಬಿಡುಗಡೆಯಾಗಿಲ್ಲ. ಡಿಕೆ ಶಿವಕುಮಾರ್ ಹಣ ಬಿಡುಗಡೆ ಮಾಡದಂತೆ ಅಧಿಕಾರಿಗಳ ಮೇಲೆ ಒತ್ತಾಯ ಮಾಡಿದ್ದಾರೆ. ಹೀಗಾಗಿ ಸೂಕ್ತ ನಿರ್ದೇಶನ ನೀಡುವಂತೆ ರಾಜ್ಯಪಾಲರಿಗೆ ಗುತ್ತಿಗೆದಾರರು ದೂರು ನೀಡಿದ್ದರು. ರಾಜ್ಯಪಾಲರಿಗೆ ನೀಡಲಾಗಿದ್ದ ದೂರು ಪೊಲೀಸ್ ಠಾಣೆಗೆ ರವಾನೆಯಾಗಿದ್ದು, ದೂರಿನಲ್ಲಿ ಸಹಿ ಹಾಕಿದ್ದ ಎಲ್ಲಾ ಗುತ್ತಿಗೆದಾರರಿಗೂ ವಿಚಾರಣೆ ಬರುವಂತೆ ನೋಟಿಸ್ ನೀಡಲಾಗಿದೆ. ಈಗಾಗಲೇ ಕೆಲವು ಗುತ್ತಿಗೆದಾರರು ಎಸಿಪಿ ಮುಂದೆ ಹಾಜರಾಗಿದ್ದು, ಎಸಿಪಿ ಪ್ರಕಾಶ್ ರೆಡ್ಡಿ ಅವರು ವಿಚಾರಣೆ ನಡೆಯುತ್ತಿದ್ದಾರೆ. ರಾಜ್ಯಪಾಲರಿಗೆ ನೀಡಿದ ದೂರಿನಲ್ಲಿ ಬಿಲ್ ಬಿಡುಗಡೆ ಮಾಡದ ಬಿಬಿಎಂಪಿ, ಸರ್ಕಾರದ ವಿರುದ್ಧ ಆರೋಪ ಮಾಡಲಾಗಿತ್ತು.. ಆರೋಪಕ್ಕೆ ಸಂಬಂಧಿಸಿದಂತೆ ಮಾಹಿತಿ, ದಾಖಲೆ ನೀಡುವಂತೆ ಪೊಲೀಸರು ವಿಚಾರಣೆ ನಡೆಸಿದ್ದಾರೆ.
Published On - 12:21 pm, Thu, 17 August 23