ಬೆಂಗಳೂರು ವಿಶ್ವವಿದ್ಯಾಲಯದ ಕ್ಯಾಂಪಸ್ನಲ್ಲಿ ಬೆಂಕಿ: 3 ಎಕರೆಯಷ್ಟು ಅರಣ್ಯ ಪ್ರದೇಶ ಬೆಂಕಿಗಾಹುತಿ
ಬೆಂಗಳೂರು ವಿಶ್ವವಿದ್ಯಾಲಯದ ಕ್ಯಾಂಪಸ್ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸುಮಾರು 3 ಎಕರೆಯಷ್ಟು ಅರಣ್ಯ ಪ್ರದೇಶ ಬೆಂಕಿಗಾಹುತಿಯಾಗಿರುವಂತಹ ಘಟನೆ ನಡೆದಿದೆ.
ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಕ್ಯಾಂಪಸ್ನಲ್ಲಿ ಬೆಂಕಿ (Fire breaks out) ಕಾಣಿಸಿಕೊಂಡಿದ್ದು, ಸುಮಾರು 3 ಎಕರೆಯಷ್ಟು ಅರಣ್ಯ ಪ್ರದೇಶ ಬೆಂಕಿಗಾಹುತಿಯಾಗಿರುವಂತಹ ಘಟನೆ ನಡೆದಿದೆ. ಒಟ್ಟು 1,200 ಎಕರೆ ವಿಸ್ತೀರ್ಣ ಬೆಂಗಳೂರು ವಿವಿ ಹೊಂದಿದೆ. 3 ಎಕರೆಯಷ್ಟು ಅರಣ್ಯ ಬೆಂಕಿಗೆ ಆಹುತೆ ಆಗಿದೆ ಎನ್ನಲಾಗುತ್ತಿದೆ. ಇನ್ನು ಘಟನೆಗೆ ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದವರು ಸಿಗರೇಟ್ ಸೇದಿ ಕ್ಯಾಂಪಸ್ನ ಒಣ ನೀಲಗಿರಿ ತೋಪಿಗೆ ಬೆಂಕಿಯ ತುಂಡು ಎಸೆದಿದ್ದಾರೆ ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಗೊಟ್ಟಿಪುರ ಅರಣ್ಯ ಪ್ರದೇಶಕ್ಕೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ಬೆಂಗಳೂರು ಗ್ರಾಮಾಂತರ: ಕಿಡಿಗೇಡಿಗಳು ಅರಣ್ಯ ಪ್ರದೇಶಕ್ಕೆ ಬೆಂಕಿ ಹಚ್ಚಿದ್ದು, ನೂರಾರು ಎಕರೆ ಅರಣ್ಯ ಪ್ರದೇಶ ಹೊತ್ತಿ ಉರಿದಿರುವಂತಹ ಘಟನೆ ಜಿಲ್ಲೆಯ ಹೊಸಕೋಟೆ ತಾಲೂಕಿನ ಗೊಟ್ಟಿಪುರ ಅರಣ್ಯ ಪ್ರದೇಶದಲ್ಲಿ ನಡೆದಿದೆ. ಕಳೆದ ಅರ್ಧ ಗಂಟೆಗೂ ಹೆಚ್ಚುಕಾಲದಿಂದ ಬೆಂಕಿ ಉರಿಯುತ್ತಿದ್ದು, ಬೆಂಕಿಯ ಕೆನ್ನಾಲಿಗೆಗೆ ಮರ ಗಿಡ ಸೇರಿ ಅರಣ್ಯ ಸಂಪತ್ತು ನಾಶವಾಗಿದೆ. ಹೆದ್ದಾರಿಯಲ್ಲಿ ಬಂದ ಕಿಡಿಗೇಡಿಗಳಿಂದ ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದೆ.
ಇದನ್ನೂ ಓದಿ: ಚಿಕ್ಕಮಗಳೂರು: ಕಾಡ್ಗಿಚ್ಚಿಗೆ ಧಗ-ಧಗ ಹೊತ್ತಿ ಉರಿದ ಅರಣ್ಯ ಇಲಾಖೆ ಸಿಬ್ಬಂದಿಯ ಮೂರು ಬೈಕ್ಗಳು!
ಸ್ಥಳಿಯರಿಂದ ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ. ಬಳಿಕ ಸ್ಥಳಕ್ಕಾಗಮಿಸಿದ ಅರಣ್ಯ ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸಿದ್ದಾರೆ. ಸಿಬ್ಬಂದಿ ಕಾರ್ಯಾಚರಣೆಯಿಂದ ಅರಣ್ಯ ಪ್ರದೇಶ ನಾಶ ತಪ್ಪಿದೆ. ಸಕಾಲದಲ್ಲಿ ಬೆಂಕಿ ನಂದಿಸಿದ ಕಾರಣ ಅರಣ್ಯಕ್ಕೆ ಹಾನಿಯಾಗಿಲ್ಲ ಅಂತ ಅರಣ್ಯಾಧಿಕಾರಿ ಪುಪ್ಪಲತಾ ಟಿವಿ9 ಗೆ ಹೇಳಿಕೆ ನೀಡಿದ್ದಾರೆ.
ಹೊಟೇಲ್‌ನಲ್ಲಿ ಆಕಸ್ಮಿಕ ಬೆಂಕಿ ಅವಘಡ
ವಿಜಯಪುರ: ಹೊಟೇಲ್‌ನಲ್ಲಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿರುವಂತಹ ಘಟನೆ ನಗರದ ಗೋದಾವರಿ ಹೊಟೇಲ್‌ನಲ್ಲಿ ನಡೆದಿದೆ. ಬೆಳಗಿನ ಜಾವ 3ಗಂಟೆಗೆ ಬೆಂಕಿ ಹೊತ್ತಿಕೊಂಡಿದ್ದು, ಹೊಟೇಲ್‌ನಲ್ಲಿ ಮಲಗಿದ್ದ ಇಬ್ಬರಿಗೆ ಗಾಯಗಾಳಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸದ್ಯ ಗಾಯಾಳುಗಳನ್ನು ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಗಾಂಧಿಚೌಕ್ ಪೊಲೀಸ್ ಠಾಣಾ ವ್ಯಾಪ್ತಿ ಘಟನೆ ದಾಖಲಾಗಿದೆ.
ಇದನ್ನೂ ಓದಿ: ಚಾರ್ಮಾಡಿಘಾಟ್ನ ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು: ಅಪಾರ ಪ್ರಮಾಣದ ವನ್ಯಸಂಪತ್ತು ಬೆಂಕಿಗಾಹುತಿ
ಕಾಡ್ಗಿಚ್ಚಿಗೆ ಧಗ-ಧಗ ಹೊತ್ತಿ ಉರಿದ ಅರಣ್ಯ ಪ್ರದೇಶ
ಚಿಕ್ಕಮಗಳೂರು: ಅರಣ್ಯ ಪ್ರದೇಶಕ್ಕೆ ಬೆಂಕಿ ಹತ್ತಿಕೊಂಡ ಘಟನೆ ತಾಲೂಕಿನ ಸಿಂದಿಗೆರೆ ಗ್ರಾಮದಲ್ಲಿ ನಡೆದಿದೆ. ಕಾಡ್ಗಿಚ್ಚಿನ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿದ ಅರಣ್ಯ ಇಲಾಖೆ ಸಿಬ್ಬಂದಿ ಮೂರು ಬೈಕ್ಗಳನ್ನು ರಸ್ತೆ ಪಕ್ಕ ನಿಲ್ಲಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಆದರೆ ಬೆಂಕಿ ಬಿದ್ದ ವ್ಯಾಪ್ತಿಯಲ್ಲಿ ಗಾಳಿ ಜೋರಾಗಿ ಬೀಸಿದ ಪರಿಣಾಮ ಬೆಂಕಿ ಮತ್ತಷ್ಟು ಹೆಚ್ಚಾಗಿದೆ. ಪರಿಣಾಮ ಗಾಳಿಯಲ್ಲಿ ಬಂದ ಬೆಂಕಿಯ ಕಿಡಿ ಅರಣ್ಯ ಇಲಾಖೆ ಸಿಬ್ಬಂದಿಯ ಬೈಕ್ಗಳಿಗೆ ತಗುಲಿದೆ. ಅದರಂತೆ ಮೂರು ಬೈಕ್ಗಳು ಸಂಪೂರ್ಣ ಬೆಂಕಿಗಾಹುತಿಯಾಗಿವೆ.
ಮೈಸೂರಿನ ಚಾಮುಂಡಿ ಬೆಟ್ಟದ ಕುರುಚಲು ಪ್ರದೇಶದಲ್ಲಿ ಬೆಂಕಿ
ಮೈಸೂರು: ಜಿಲ್ಲೆಯ ಚಾಮುಂಡಿ ಬೆಟ್ಟದ ಕುರುಚಲು ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕಾಡ್ಗಿಚ್ಚಿನಿಂದ ಬೆಂಕಿ ಹಬ್ಬಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ, ಅರಣ್ಯ ಸಿಬ್ಬಂದಿ, ಪೊಲೀಸರು ದೌಡಾಯಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಬೆಂಗಳೂರಿನ ಕುರುಬರಹಳ್ಳಿಯ ಕಾವೇರಿ ನಗರದಲ್ಲಿ ಮನೆಯ ಮುಂದೆ ನಿಲ್ಲಿಸಿದ್ದ ಸುಬ್ರಹ್ಮಣ್ಯ ಎಂಬುವರಿಗೆ ಸೇರಿದ ಕಾರು ಮತ್ತು ಬೈಕ್ಗೆ ತಡರಾತ್ರಿ ಕಿಡಿಗೇಡಿಗಳು ಬೆಂಕಿ ಹಾಕಿ ಪರಾರಿಯಾಗಿದ್ದಾರೆ.
ಬೆಂಕಿ ಹೊತ್ತಿ ಉರಿಯುವಾಗ ಪಕ್ಕದ ಮನೆಗಳಿಗೂ ಹಾನಿಯಾಗಿದ್ದು, ಸ್ಥಳಕ್ಕೆ ಮಹಾಲಕ್ಷ್ಮೀ ಲೇಔಟ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಎರಡು ಜನ ದುಷ್ಕರ್ಮಿಗಳು ಸೇರಿ ಸುಬ್ರಹ್ಮಣ್ಯ ಅವರ ಟಿಯುವಿ 300(TUV 300) ಕಾರು ಹಾಗೂ ಬೈಕ್ಗೆ ಬೆಂಕಿ ಹಾಕಿರುವ ಶಂಕೆ ವ್ಯಕ್ತವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:58 pm, Wed, 8 March 23