ಬೆಂಗಳೂರು ಡಿ.04: ಬೆಂಗಳೂರು (Bengaluru) ಸೇರಿ ಮೂರು ಜಿಲ್ಲೆಗಳಲ್ಲಿ ನಡೆದಿದ್ದ ಭ್ರೂಣಲಿಂಗ ಪತ್ತೆ ಮತ್ತು ಹೆಣ್ಣು ಭ್ರೂಣ ಹತ್ಯೆ (Foetus Gender Detection, Murder Case) ಪ್ರಕರಣ ಕರ್ನಾಟಕದಲ್ಲಿ ಸಂಚಲನ ಸೃಷ್ಟಿಸಿದೆ. ಈ ಪ್ರಕರಣವನ್ನು ಬೆಂಗಳೂರು ಪೊಲೀಸರು (Police) ಬೇದಿಸಿದ್ದಾರೆ. ಇದೀಗ ಪ್ರಕರಣ ಸಂಬಂಧ ಬೈಯ್ಯಪ್ಪಹಳ್ಳಿ ಪೊಲೀಸರು ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಮೈಸೂರಿನ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯ ನರ್ಸ್ ಉಷಾರಾಣಿ ಬಂಧಿತ ಆರೋಪಿ. ಈ ಮೂಲಕ ಪ್ರಕರಣ ಸಂಬಂಧ ಬಂಧಿತರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ.
ಬಂಧಿತ ಉಷಾರಾಣಿ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಡಾ.ಚಂದನ್ ಬಲ್ಲಾಳ್ನ ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದಳು. ಪ್ರಕರಣ ಬೆಳಕಿಗೆ ಬಂದ ಬಳಿಕ ನರ್ಸ್ ಉಷಾರಾಣಿ ಕೆಲಸ ಬಿಟ್ಟಿದ್ದಳು. ಬಳಿಕ ಮೈಸೂರಿನ ಮತ್ತೊಂದು ಖಾಸಗಿ ಆಸ್ಪತ್ರೆಗೆ ಕೆಲಸಕ್ಕೆ ಸೇರಿದ್ದಳು.
ನರ್ಸ್ ಉಷಾರಾಣಿ ಪ್ರಕರಣದ ಮತ್ತೊಬ್ಬ ಆರೋಪಿ ಬ್ರೋಕರ್ ಪುಟ್ಟರಾಜು ಸಂಬಂಧಿ ಆಗಿದ್ದಾಳೆ. ಬ್ರೋಕರ್ ಪುಟ್ಟರಾಜು ಅಣತಿ ಮೇರೆಗೆ ಉಷಾರಾಣಿ ಗರ್ಭಪಾತ ಮಾಡುತ್ತಿದ್ದಳು. ಗರ್ಭಪಾತಕ್ಕೆ ನಕಲಿ ದಾಖಲೆಗಳನ್ನು ಸೃಷ್ಟಿಸುತ್ತಿದ್ದಳು. ಬೈಯ್ಯಪ್ಪಹಳ್ಳಿ ಪೊಲೀಸರು ಬ್ರೋಕರ್ ಪುಟ್ಟರಾಜು ಅನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಈ ಎಲ್ಲ ವಿಚಾರಗಳು ಬಯಲಾಗಿವೆ. ಸದ್ಯ ಬ್ರೋಕರ್ ಪುಟ್ಟರಾಜು ಜಾಮೀನು ಪಡೆದಿದ್ದು, ಸಂಬಂಧಿ ಉಷಾರಾಣಿಯನ್ನು ಬಂಧಿಸಲಾಗಿದೆ.
ಇನ್ನು ಉಷಾರಾಣಿ ಕೆಲಸ ಮಾಡುತ್ತಿದ್ದ ಖಾಸಗಿ ಆಸ್ಪತ್ರೆ ಲಿಂಗ ಪತ್ತೆ ಮಾಡದೇ ಆರೋಗ್ಯ ಇಲಾಖೆ ನಿಯಮಾವಳಿ ಪ್ರಕಾರ ಅಬಾಷನ್ ಮಾಡುತಿತ್ತು. ಈ ವಿಚಾರ ತಿಳಿಯುತ್ತಿದ್ದಂತೆ ಆಸ್ಪತ್ರೆ ಮಾಲೀಕರನ್ನು ಬೈಯಪ್ಪನಹಳ್ಳಿ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಇದನ್ನೂ ಓದಿ: ಭ್ರೂಣ ಹತ್ಯೆ ಕಿಂಗ್ ಪಿನ್ ಆರೋಪಿ ವೈದ್ಯ ಕೊಡಗಿನಲ್ಲಿ ಸಾವು: ಸೂಸೈಡ್ ಮಾಡಿಕೊಂಡ್ರಾ ಡಾಕ್ಟರ್?
ಗರ್ಭಪಾತ ಕಾಯ್ದೆಯ ಪ್ರಕಾರ ಲಿಂಗ ಪತ್ತೆ ಮಾಡದೇ, ಪತಿ-ಪತ್ನಿ ಒಪ್ಪಿಗೆ ಬಳಿಕ ಮತ್ತು ಗರ್ಭಿಣಿಗೆ ತೀವ್ರ ಆರೋಗ್ಯ ಸಮಸ್ಯೆ ಇದ್ದಲ್ಲಿ ಮಾತ್ರ ಸ್ಕ್ಯಾನಿಂಗ್ ಹಾಗೂ ಮೆಡಿಕಲ್ ರಿಪೊರ್ಟ್ ಸಹಿತ ಅಬಾಷನ್ ಮಾಡಬೇಕು. ಇವೆಲ್ಲವೂ ಗರ್ಭಧರಿಸಿದ 24 ವಾರದ ಒಳಗಾಗಿ ಆಗಬೇಕು. ಬಳಿಕ ಸಂಬಂಧ ಪಟ್ಟ ಇಲಾಖೆಗೆ ಈ ಎಲ್ಲ ಮಾಹಿತಿ ನೀಡಬೇಕು. ಜೊತೆಗೆ ನಡೆದ ಎಲ್ಲ ಅಬಾಷನ್ಗಳ ಎರಡು ವರ್ಷದ ದಾಖಲೆಗಳನ್ನು ಆಸ್ಪತ್ರೆಯಲ್ಲಿ ಇಟ್ಟುಕೊಂಡಿರಬೇಕು.
ಉಷಾರಾಣಿ ಕೆಲಸ ಮಾಡುತ್ತಿದ್ದ ಖಾಸಗಿ ಆಸ್ಪತ್ರೆ ಈ ನಿಯಮಗಳನ್ನು ಹೊಂದಿದೆ. ಇದನ್ನು ತಿಳಿದ ಉಷಾರಾಣಿ ಆಸ್ಪತ್ರೆಯ ಮಾಲೀಕ ಮತ್ತು ವೈದ್ಯರ ಗಮನಕ್ಕೂ ಬಾರದ ರೀತಿ, ನಕಲಿ ದಾಖಲೆ ಸೃಷ್ಟಿಸಿ ಅಬಾಷನ್ ಮಾಡುತ್ತಿದ್ದಳು. ಬಳಿಕ ವೈದ್ಯರಿಗೆ ಸುಳ್ಳು ಮಾಹಿತಿ ನೀಡುತ್ತಿದ್ದಳು.
ಈ ಹಿನ್ನೆಲೆಯಲ್ಲಿ ಬೈಯಪ್ಪನಹಳ್ಳಿ ಪೊಲೀಸರು ಉಷಾರಾಣಿಯನ್ನು ಬಂಧಿಸಿದ್ದಾರೆ ಉಷಾರಾಣಿಗೆ ಈ ಜಾಲದ ನಂಟು ಸಿಕ್ಕಿದ್ದು ಹೇಗೆ..? ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಉಷಾರಾಣಿ ನಕಲಿ ದಾಖಲೆ ಸೃಷ್ಟಿಸಿದ್ದು ಹೇಗೆ..? ಎಂಬ ವಿವಿಧ ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:51 am, Mon, 4 December 23