ಬೆಂಗಳೂರು: ಕರ್ನಾಟಕದ ಆಹಾರ ಮತ್ತು ನಾಗರಿಕ ಪೂರೈಕೆ ಹಾಗೂ ಅರಣ್ಯ ಸಚಿವ ಉಮೇಶ್ ಕತ್ತಿ (Minister Umesh Vishwanath Katti) ಅವರು ಹೃದಯಾಘಾತದಿಂದ ನಿಧನ ಹೊಂದಿದ್ದು, ಇಡೀ ರಾಜಕೀಯ ವಲಯದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ರಾಜಕೀಯ ನಾಯಕರುಗಳು ಮತ್ತು ಗಣ್ಯರು ಕಂಬನಿ ಮಿಡಿದಿದ್ದಾರೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಸಚಿವ ಉಮೇಶ್ ಕತ್ತಿ ಪತ್ನಿ ಶೀಲಾ ಕತ್ತಿಗೆ ಪತ್ರದ ಮೂಲಕ ಸಾಂತ್ವನ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಪತ್ರದ ಸಾರ ಹೀಗಿದೆ:
ಉಮೇಶ ಕತ್ತಿಯವರ ನಿಧನದ ಬಗ್ಗೆ ತಿಳಿದು ನನಗೆ ಅತೀವ ನೋವಾಗಿದೆ. ತೀವ್ರ ದುಃಖದ ಈ ಸಮಯದಲ್ಲಿ ನನ್ನ ಆಲೋಚನೆಗಳು ಕುಟುಂಬದೊಂದಿಗೆ ಇವೆ. ಅನುಭವಿ ನಾಯಕರಾದ ಶ್ರೀ ಉಮೇಶ ಕತ್ತಿ ಅವರು ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಬದ್ಧರಾಗಿದ್ದರು. ಶಾಸಕ ಮತ್ತು ಸಮರ್ಥ ಆಡಳಿತಗಾರ, ರಾಜ್ಯದ ಜನರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರಲು ಅವರ ಅವಿರತ ಪ್ರಯತ್ನಗಳು ಯಾವಾಗಲೂ ಸ್ಮರಣೀಯವಾಗಿವೆ.
ಉತ್ತಮ ಸಂಘಟನಾ ಕೌಶಲ್ಯವನ್ನು ಹೊಂದಿದ್ದರು. ಶ್ರೀ ಉಮೇಶ ಕತ್ತಿ ಅವರು ರಾಜ್ಯದಲ್ಲಿ ಪಕ್ಷವನ್ನು ಬಲಪಡಿಸಲು ಯಾವಾಗಲೂ ಶ್ರಮಿಸಿದರು. ಸಮಸ್ಯೆಗಳ ಬಗ್ಗೆ ಅವರ ಉತ್ತಮ ತಿಳುವಳಿಕೆ ಮತ್ತು ಸ್ಪಂದನೆ ಮನೋಭಾವ ಹೊಂದಿದ್ದರು. ಅವರ ಅನುಉಪಸ್ಥಿತಿಯು ಕಾರ್ಯಕರ್ತಗೆ ಅಪಾರ ನಷ್ಟವಾಗಿದೆ. ನಾವೆಲ್ಲರೂ ಕೂಡ ಅವರನ್ನು ಕಳೆದುಕೊಂಡು ದುಃಖತಪ್ತರಾಗಿದ್ದು, ಅದನ್ನು ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ.
ಶ್ರೀ ಉಮೇಶ ಕತ್ತಿ ಅವರು ತಮ್ಮ ಕುಟುಂಬಕ್ಕೆ ಮಾತ್ರ ಆಧಾರ ಸ್ತಂಭವಲ್ಲದೆ ಇಡೀ ಸಮಾಜಕ್ಕೆ ಆಧಾರಸ್ತಂಭವಾಗಿದ್ದರು. ಆದರೆ ಅವರು ಈಗ ದೈಹಿಕವಾಗಿ ನಮ್ಮೊಂದಿಗಿಲ್ಲ. ಆದರೆ ಅವರ ಮೌಲ್ಯಗಳು ಮತ್ತು ಆದರ್ಶಗಳು ಯಾವಾಗ ನಮ್ಮೊಂದಿಗೆ ಮುಂದುವರಿಯುತ್ತವೆ. ಈ ತುಂಬಲಾರದ ನಷ್ಟವನ್ನು ಭರಿಸುವ ಶಕ್ತಿ ಆ ದೇವರು ಕುಟುಂಬದವರಿಗೆ ಮತ್ತು ಬೆಂಬಲಿಗರಿಗೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಓಂ ಶಾಂತಿ ಎಂದು ಪತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾವುಕ ನುಡಿಗಳನ್ನು ಹಂಚಿಕೊಂಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:10 pm, Wed, 7 September 22