ಅಂಗಡಿ, ಹೋಟೆಲ್ ಮುಚ್ಚಿ ಬಂದ್​ಗೆ ಬೆಂಬಲ ಕೊಡಿ: ಸಾರ್ವಜನಿಕರಿಗೆ ಮನವಿ ಮಾಡಿದ ಮಾಜಿ ಸಿಎಂ ಯಡಿಯೂರಪ್ಪ

| Updated By: ಗಂಗಾಧರ​ ಬ. ಸಾಬೋಜಿ

Updated on: Sep 25, 2023 | 7:30 PM

ನಾಳೆ ಕರೆ ನೀಡಿರುವ ಬೆಂಗಳೂರು ನಗರ ಬಂದ್ ಯಶಸ್ವಿಯಾಗುತ್ತೆ. ಯಾರು ಏನೇ ಮಾಡಲಿ, ನಾಳಿನ ಬಂದ್ ಯಶಸ್ವಿಯಾಗುತ್ತೆ. ಎಲ್ಲಾ ಅಂಗಡಿ, ಹೋಟೆಲ್ ಮುಚ್ಚಿ ಬಂದ್​ಗೆ ಬೆಂಬಲ ಕೊಡಬೇಕು ಎಂದು ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ಒಂದು ವೇಳೆ ಯಾರಾದರೂ ನಾಳೆ ಅಂಗಡಿಗಳನ್ನು ಓಪನ್ ಮಾಡಿದರೆ, ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾದರೆ ನೀವೇ ಹೊಣೆ ಆಗುತ್ತೀರಿ ಎಂದಿದ್ದಾರೆ.

ಬೆಂಗಳೂರು, ಸೆಪ್ಟೆಂಬರ್​ 25: ನಾಳಿನ ಬೆಂಗಳೂರು ನಗರ ಬಂದ್ ಯಶಸ್ವಿಯಾಗಬೇಕು. ಎಲ್ಲಾ ಅಂಗಡಿ, ಹೋಟೆಲ್ ಮುಚ್ಚಿ ಬಂದ್​ಗೆ ಬೆಂಬಲ ಕೊಡಬೇಕು ಎಂದು ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ (BS Yediyurappa) ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಒಂದು ವೇಳೆ ಯಾರಾದರೂ ನಾಳೆ ಅಂಗಡಿಗಳನ್ನು ಓಪನ್ ಮಾಡಿದರೆ, ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾದರೆ ನೀವೇ ಹೊಣೆ ಆಗುತ್ತೀರಿ. ಬಂದ್ ಯಶಸ್ವಿಗೊಳಿಸಲು JDS ಮುಖಂಡರಿಗೂ ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.

ನಾಳೆ ಕರೆ ನೀಡಿರುವ ಬೆಂಗಳೂರು ನಗರ ಬಂದ್ ಯಶಸ್ವಿಯಾಗುತ್ತೆ. ಯಾರು ಏನೇ ಮಾಡಲಿ, ನಾಳಿನ ಬಂದ್ ಯಶಸ್ವಿಯಾಗುತ್ತೆ. ಬುಧವಾರ ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ಮಾಡುತ್ತೇವೆ. ಬಿಜೆಪಿಯ ಮಾಜಿ ಶಾಸಕರು ಕೂಡ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕು. ಪ್ರಧಾನಿ ಮಧ್ಯಪ್ರವೇಶಕ್ಕೆ ದೇವೇಗೌಡರು ಪತ್ರ ಬರೆದಿರುವುದು ಗೊತ್ತಿದೆ. ಅದರ ಬಗ್ಗೆ ಈಗ ಏನೂ ಮಾತನಾಡುವುದಿಲ್ಲ, ಮುಂದೆ ನೋಡೋಣ ಎಂದಿದ್ದಾರೆ.

ಇದನ್ನೂ ಓದಿ: ಬಲವಂತದ ಬಂದ್​ಗೆ ಇಲ್ಲ ಅವಕಾಶ, ನಾಳೆ ಮಧ್ಯರಾತ್ರಿ ವರೆಗೆ ನಿಷೇಧಾಜ್ಞೆ; ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ ದಯಾನಂದ ಮಾಹಿತಿ

ಬಂದ್​ಗೆ ಸಹಕಾರ ನೀಡುವ ವಿಚಾರವಾಗಿ ಕುಮಾರಸ್ವಾಮಿ ಅವರ ಬಳಿ ಈಗ ಮಾತನಾಡಿದ್ದೇನೆ. ನಾಳೆ ಬಂದ್‌ಗೆ ಸಹಕಾರ ನೀಡುವುದಾಗಿ ಹೇಳಿದ್ದಾರೆ. ನಾಡಿದ್ದು ಗಾಂಧಿ ಪ್ರತಿಮೆ ಬಳಿ ಸತ್ಯಾಗ್ರಹಕ್ಕೆ ಭಾಗಿಯಾಗಲು ಹೇಳಿದ್ದೇನೆ. ಅವರು ಅದಕ್ಕೂ ಒಪ್ಪಿಕೊಂಡಿದ್ದಾರೆ. ಬಿಜೆಪಿ-ಜೆಡಿಎಸ್ ಎರಡೂ ಕೂಡ ಒಟ್ಟಿಗೆ ಪ್ರತಿಭಟನೆ ನಡೆಸಲಿವೆ ಎಂದರು.

ಸಿದ್ದರಾಮಯ್ಯ, ಡಿಕೆ ಶಿವಕುಮಾರ್​ ವಿರುದ್ಧ ಯಡಿಯೂರಪ್ಪ ಕಿಡಿ

ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್​ ಬೇಜವಾಬ್ದಾರಿಯಿಂದ ನಡೆದುಕೊಂಡಿದ್ದಾರೆ. ತಮಿಳುನಾಡಿಗೆ ಕಾವೇರಿ ನೀರು ಬಿಟ್ಟು ಗೊಂದಲಕ್ಕೆ ಸಿಲುಕಿಸಿದ್ದಾರೆ. ತಮಿಳುನಾಡಿನ ಏಜೆಂಟ್​ ರೀತಿ ಕಾಂಗ್ರೆಸ್ ಸರ್ಕಾರ ವರ್ತಿಸುತ್ತಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ತನ್ನ ತಪ್ಪು ಮುಂದುವರಿಸಿದೆ. ಈಗಲಾದರೂ ತಮಿಳುನಾಡಿಗೆ ಹರಿಸುತ್ತಿರುವ ನೀರು ನಿಲ್ಲಿಸಲಿ, ಬೆಂಗಳೂರು ನಗರದ ಜನತೆಗೆ ಕುಡಿಯುವ ನೀರನ್ನು ಒದಗಿಸಲಿ ಎಂದರು.

ಇದನ್ನೂ ಓದಿ: ಬೆಂಗಳೂರು ಬಂದ್: ಖಾಸಗಿ ಶಾಲೆಗಳಿಗೆ ನಾಳೆ ರಜೆ ಘೋಷಣೆ: ಜಿಲ್ಲಾಧಿಕಾರಿ ದಯಾನಂದ್​

ಒಂದು ಹನಿ ನೀರು ಸರ್ಕಾರ ಬಿಟ್ಟರೇ ಹೋರಾಟ ತೀವ್ರಗೊಳ್ಳಲಿದೆ. ಮುಂದಿನ ಆಗುಹೋಗುಗಳಿಗೆ ರಾಜ್ಯ ಸರ್ಕಾರವೇ ಕಾರಣ ಆಗಲಿದೆ. ಕುಡಿಯಲು ನೀರು ಕೊಡಿ ಅಂದರೆ ರಾಜ್ಯ ಸರ್ಕಾರ ಮದ್ಯ ಕೊಡುತ್ತಿದೆ. ಮದ್ಯದಂಗಡಿ ತೆರೆಯಲು ಅವಕಾಶ ಕೊಡುತ್ತಿರುವುದು ಅಕ್ಷಮ್ಯ ಅಪರಾಧ. ತಕ್ಷಣ ಇದನ್ನು ನಿಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಬಿಎಸ್​ ಯಡಿಯೂರಪ್ಪ ಆಗ್ರಹಿಸಿದ್ದಾರೆ.


ಕಾವೇರಿ ನದಿ ದಕ್ಷಿಣ ಭಾರತದ ಆಸ್ತಿ ಎಂದು ಡಿಕೆ ಶಿವಕುಮಾರ್ ಹೇಳಿಕೆ ವಿಚಾರವಾಗಿ ಮಾತನಾಡಿ,  ಡಿಸಿಎಂ ಡಿ.ಕೆ.ಶಿವಕುಮಾರ್​ ಹೇಳಿದ್ದಕ್ಕೆಲ್ಲಾ ನಾನು ಉತ್ತರ ಕೊಡಲ್ಲ. ಇನ್ನು ಸ್ವಲ್ಪ ದಿನಗಳಲ್ಲಿ ಅವರಿಗೆ ಗೊತ್ತಾಗುತ್ತೆ ಎಂದು ಟಾಂಗ್​ ನೀಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:27 pm, Mon, 25 September 23