
ಬೆಂಗಳೂರು, ಸೆಪ್ಟೆಂಬರ್ 27: ಪಾರ್ಕಿಂಗ್ ವಿಚಾರವಾಗಿ ನಡೆದ ಗಲಾಟೆ ವಿಕೋಪಕ್ಕೆ ಹೋಗಿ ವ್ಯಕ್ತಿಯೋರ್ವ ನಾಲ್ವರಿಗೆ ಚಾಕು ಇರಿದಿರುವ ಘಟನೆ ಬೆಂಗಳೂರಿನ (Bengaluru) ಮಾರಗೊಂಡನಹಳ್ಳಿ ಆರ್.ಆರ್. ಲೇಔಟ್ ನಲ್ಲಿ ನಡೆದಿದೆ. ಘಟನೆಯಲ್ಲಿ ಹೇಮಂತ್, ಹನುಮಂತಮ್ಮ ಮತ್ತು ರಮೇಶ್ ಸೇರಿ ಓರ್ವ ಅಪ್ರಾಪ್ತ ಗಾಯಗೊಂಡಿದ್ದಾರೆ. ಆರೋಪಿ ವೆಂಕಟೇಶ್ನನ್ನು ಕೆ.ಆರ್.ಪುರಂ ಪೊಲೀಸರು ಬಂಧಿಸಿದ್ದಾರೆ. ಸೆಪ್ಟೆಂಬರ್ 24ರಂದು ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ರಾತ್ರಿ 8.30 ಸುಮಾರಿಗೆ ತಮ್ಮ ದೊಡ್ಡಪ್ಪ ರಮೇಶ್ ಜೊತೆ ಹೇಮಂತ್ ಮನೆಯ ಮುಂಭಾಗ ಕುಳಿತಿದ್ದರು. ಈ ವೇಳೆ ವೇಗವಾಗಿ ಬಂದ ಸ್ಕಾರ್ಪಿಯೋ ಮನೆ ಬಳಿ ಇರುವ ಮೋರಿಯ ಮೇಲೆ ಪಾರ್ಕ್ ಆಗಿದೆ. ಇದನ್ನ ಗಮನಿಸಿದ ಹೇಮಂತ್, ಯಾಕೆ ಕಿಷ್ಟು ವೇಗವಾಗಿ ಬರುತ್ತೀರಾ ಎಂದು ಚಾಲಕ ವೆಂಕಟೇಶ್ ನನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಅವಾಚ್ಯ ಪದಗಳಿಂದ ವೆಂಕಟೇಶ್ ನಿಂದಿಸಿದ್ದು, ಗಲಾಟೆ ಮಾಡಿದ್ದಾನೆ. ಯಾಕಪ್ಪ ಹೀಗೆ ಮಾಡ್ತಿದ್ದೀಯ ಎಂದು ಹೇಮಂತ್ ದೊಡ್ಡಪ್ಪ ರಮೇಶ್ ಪ್ರಶ್ನಿಸಿದ್ದೇ ತಡ ವೆಂಕಟೇಶ್ ಕಾರಿನಿಂದ ಚಾಕು ತಂದು ಅಟ್ಯಾಕ್ ಮಾಡಿದ್ದಾನೆ. ಎಡ ಕಾಲಿನ ತೊಡೆಗೆ ಚಾಕು ಇರಿದ ಪರಿಣಾಮ ರಮೇಶ್ ಅಲ್ಲೇ ಕುಸಿದಿದ್ದು, ಗಲಾಟೆ ನೋಡಿ ಸ್ಥಳಕ್ಕೆ ಬಂದ ರಮೇಶ್ ಪತ್ನಿ ಹನುಮಂತಮ್ಮ, ಹೇಮಂತ್ ಸೇರಿ ಅಪ್ರಾಪ್ತನಿಗೂ ಚಾಕುವಿನಿಂದ ಇರಿದು ಅಟ್ಟಹಾಸ ಮೆರೆದಿರುವ ಆರೋಪ ಕೇಳಿಬಂದಿದೆ. ಘಟನೆ ಸಂಬಂಧ ಕೆ.ಆರ್.ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಅಪ್ಪನ ಜೇಬಿನಿಂದ ಹಣ ಕದ್ದಿದ್ದಕ್ಕೆ ಇಷ್ಟು ದೊಡ್ಡ ಶಿಕ್ಷೆಯೇ? ಅಪ್ರಾಪ್ತ ಮಗಳನ್ನು ಕೊಂದ ತಂದೆ
ಸತ್ಯನಾರಾಯಣ ಪೂಜೆಗೆ ಬಂದಿದ್ದ ಅರ್ಚಕನೇ ದೇವರಿಗೆ ಹಾಕಿದ್ದ 44 ಗ್ರಾಂ ಚಿನ್ನದ ಸರ ಎಗರಿಸಿರುವ ಘಟನೆ ಬೆಂಗಳೂರಿನ ಅಗ್ರಹಾರ ದಾಸರಹಳ್ಳಿಯಲ್ಲಿ ನಡೆದಿದೆ. ಘಟನೆ ಸಂಬಂಧ ಮುನೇಶ್ವರಸ್ವಾಮಿ ದೇವಸ್ಥಾನದ ಅರ್ಚಕ ರಮೇಶ್ ಶಾಸ್ತ್ರಿಯನ್ನ ಪೊಲೀಸರು ಬಂಧಿಸಿದ್ದಾರೆ. ತನಿಖೆ ವೇಳೆ ಅರ್ಚಕನ ಗೋವಾ ಕೆಸಿನೋ ಪ್ಲ್ಯಾನ್ ಬಯಲಿಗೆ ಬಂದಿದ್ದು, ಚಿನ್ನದ ಸರ ಗಿರವಿ ಇಟ್ಟು ರಮೇಶ್ ಹಣ ಪಡೆದಿದ್ದ. ಆ ಬಳಿಕ ಗೋವಾ ಕೆಸಿನೋದಲ್ಲಿ ಹಣ ಕಳೆದುಕೊಂಡಿದ್ದ ಎಂಬುದು ಗೊತ್ತಾಗಿದೆ.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:42 am, Sat, 27 September 25