
ಬೆಂಗಳೂರು, ಜನವರಿ 14: ಬೆಂಗಳೂರಿನ (Bangalore) ರಾಮಮೂರ್ತಿ ನಗರದಲ್ಲಿ ನಡೆದಿದ್ದ ಟೆಕ್ಕಿ ಯುವತಿ ಕೊಲೆ ಪ್ರಕರಣ ಸಂಬಂಧ ಆರೋಪಿ ಕರ್ನಲ್ ಕುರೈ ಕಂಬಿ ಎಣಿಸುತ್ತಿದ್ದಾನೆ. ಆದರೆ ತನಿಖೆ ವೇಳೆ ಆತ ಹೇಳಿದ ರೋಚಕ ಸಂಗತಿಗಳನ್ನು ಕೇಳಿ ಪೊಲೀಸರಿಗೇ ಶಾಕ್ ಆಗಿದೆ. ಯುವತಿಯ ಚಲನವಲನವನ್ನು ಎರಡು ತಿಂಗಳಿಂದ ಗಮನಿಸಿದ್ದ ಕರ್ನಲ್ ಕುರೈ ಓದುವ ನೆಪದಲ್ಲಿ, ಬಟ್ಟೆ ತೆಗೆದುಕೊಳ್ಳುವ ನೆಪದಲ್ಲಿ ಟೆರಸ್ ಮೇಲೆ ಹೋಗುತ್ತಿದ್ದ. ಜನವರಿ 3ರಂದು ಯುವತಿಯ ಸ್ನೇಹಿತೆ ಇಲ್ಲದಿರುವ ಸಮಯ ನೋಡಿಯೇ ಆಕೆಯ ಮನೆಗೆ ತೆರಳಿ ಘನಘೋರ ಕೃತ್ಯ ಎಸಗಿದ್ದ.
ಆರೋಪಿ ಕರ್ನಲ್ ಯುವತಿ ಶರ್ಮಿಳಾ ಮನೆಗೆ ಎಂಟ್ರಿಯಾಗಿದ್ದು ಇದೇ ಮೊದಲು. ಇದಕ್ಕೂ ಮೊದಲು ಇಬ್ಬರಿಗೂ ಪರಿಚಯ ಕೂಡ ಇರಲಿಲ್ಲ. ಆದರೆ ಆರೋಪಿ ಬಾಲ್ಕಿನಿಯ ಸ್ಲೈಡ್ ವಿಂಡೋ ಓಪನ್ ಮಾಡಿದ್ದೇ ರೋಚಕವಾಗಿದ್ದು ಮನೆಯೊಳಗೂ ವಿಚಿತ್ರ ಘಟನೆಗಳು ನಡೆದಿವೆ.
ಆರೋಪಿ ಕರ್ನಲ್ ಕುರೈ SSLCಯಲ್ಲಿ ಶೇ 97 ಅಂಕ ಪಡೆದಿದ್ದ ಎಂಬುದು ಕೂಡ ಈಗ ಬಯಲಾಗಿದೆ. ಕಾಲೇಜಿನಲ್ಲಿ ಸ್ಲೈಡ್ ವಿಂಡೋ ಇದ್ದು, ಒಮ್ಮೆ ಅದರ ಬಾಗಿಲಿನಲ್ಲಿ ಆತನ ಪುಸ್ತಕ ಸಿಕ್ಕಿಹಾಕಿಕೊಂಡಿತ್ತು. ಅದನ್ನು ತೆಗೆಯುವುದಕ್ಕಾಗಿ ಸ್ಲೈಡ್ ವಿಂಡೋ ಓಪನ್ ಮಾಡುವುದನ್ನು ತಿಳಿದುಕೊಂಡಿದ್ದ. ಅದೇ ತಂತ್ರ ಬಳಸಿ ಯುವತಿ ಮನೆಯ ಕಿಟಿಕಿ ತೆಗೆದು ಬೆಡ್ ರೂಂಗೆ ಪ್ರವೇಶಿಸಿದ್ದ.
ಕುರೈ ಮನೆಯೊಳಕ್ಕೆ ಬಂದಾಗ ಯುವತಿ ಎಂಟ್ರಿಯಾದಾಗ ಅಡುಗೆ ಮನೆಯಲ್ಲಿದ್ದರು. ಸ್ಟವ್ ಆನ್ ಮಾಡಿ ಹಾಲು ಕಾಯಿಸಲು ಇಟ್ಟಿದ್ದರು. ಕುರೈ ನೋಡಿ ಗಾಬರಿಯಾಗಿ ಆತನ ಜತೆ ಜಗಳ ಆಗಿತ್ತು. ನಂತರ ಆಕೆ ಪ್ರಜ್ಞಾಹೀನವಾಗಿ ಬಿದ್ದಿದ್ದರು. ಈ ವೇಳೆ ಹಾಲು ಸಂಪೂರ್ಣವಾಗಿ ಉಕ್ಕಿ ಸ್ಟವ್ ಬೆಂಕಿ ಆರಿ ಹೋಗಿತ್ತು. ಬಳಿಕ ಅಡುಗೆ ಕೋಣೆಯಲ್ಲೇ ಯುವತಿಯನ್ನು ಮಲಗಿಸಿ ರೂಂನಲ್ಲಿ ಬೆಂಕಿ ಹಚ್ಚಿ ಪರಾರಿಯಾಗಿದ್ದ ಎಂಬುದು ತನಿಖೆ ವೇಳೆ ತಿಳಿದುಬಂದಿದೆ.
ಅಡುಗೆ ಕೋಣೆಯಲ್ಲಿ ಯುವತಿ ದೇಹ ಪತ್ತೆಯಾಗಿದ್ದು, ಗ್ಯಾಸ್ ಲೀಕ್ ಆಗಿ ಕೋಣೆಯಲ್ಲಿ ಬೆಂಕಿ ಆಗಿರಬಹುದು ಎಂದು ಆರಂಭದಲ್ಲಿ, ಅಂದಾಜಿಸಲಾಗಿತ್ತು. ಹಾಗೆ ಬೆಂಕಿಯ ತೀವ್ರತೆಗೆ ಮೊಬೈಲ್ ಕೂಡ ಕರಗಿ ಹೋಗಿರಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಮನೆಯ ವಾತವಾರಣ, ಕೆಲ ಸನ್ನಿವೇಶಗಳು ಪೊಲೀಸರಿಗೆ ಅನುಮಾನ ಹುಟ್ಟಿಸಿತ್ತು.
ಹೀಗಾಗಿ ಸಮೀಪದಲ್ಲಿ ಕೆಲಸ ಮಾಡುತ್ತಿದ್ದ ಕೆಲ ಹುಡುಗರನ್ನು ಕರೆತಂದು ವಿಚಾರಣೆ ನಡೆಸಿದ್ದಾರೆ. ಕುರೈನನ್ನೂ ವಿಚಾರಣೆ ಮಾಡಬೇಕು ಎನ್ನುವಷ್ಟರಲ್ಲಿ ಯುವತಿ ಮೊಬೈಲ್ ಆತನ ಬಳಿಯೇ ಪತ್ತೆ ಆಗಿತ್ತು. ಈ ಅಧಾರದ ಮೇಲೆ ಆತನನ್ನು ಬಂಧಿಸಲಾಗಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಮಂಗಳೂರು ಮೂಲದ ಟೆಕ್ಕಿ ಕೊಲೆ ಕೇಸ್ಗೆ ಸ್ಫೋಟಕ ಟ್ವಿಸ್ಟ್: ಹತ್ಯೆಗೂ ಮುನ್ನ ರೇಪ್ ಮಾಡಿರುವ ಶಂಕೆ
ಒಟ್ಟಿನಲ್ಲಿ, ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಕರ್ನಲ್ ಕುರೈ ಯುವತಿ ಮೋಹಕ್ಕೆ ಮಾರುಹೋಗಿ ಕೊಲೆಗಾರನಾಗಿ ಜೈಲು ಸೇರಿರುವುದು ದುರಂತ.
ವರದಿ: ಪ್ರದೀಪ್ ಚಿಕ್ಕಾಟಿ, ಟಿವಿ9 ಬೆಂಗಳೂರು