ಬೆಂಗಳೂರು: ಕೃಷಿ ವಿಶ್ವವಿದ್ಯಾಲಯದ ಭದ್ರತಾ ಸಿಬ್ಬಂದಿ ಕೊಲೆ ಪ್ರಕರಣಕ್ಕೆ ಸಂಬಂಧಿ ಮತ್ತೊಂದು ಸ್ಫೋಟಕ ಮಾಹಿತಿ ಬಯಲಾಗಿದೆ. ಕೊಲೆ ಪ್ರಕರಣದ ತನಿಖೆ ವೇಳೆ ಪೊಲೀಸರೇ ಶಾಕ್ ಆಗಿದ್ದಾರೆ. ಒಂದು ಪ್ರಕರಣದ ಬೆನ್ನು ಬಿದ್ದ ಪೊಲೀಸರಿಗೆ ಇನ್ನೆರಡು ಅಪರಾಧ ಕೃತ್ಯ ಬಯಲಾಗಿದೆ.
ಯಲಹಂಕ ನ್ಯೂಟೌನ್ನ ಅಟ್ಟೂರು ಕೊಲೆ ಕೇಸ್ಗೆ ಟ್ವಿಸ್ಟ್ ಸಿಕ್ಕಿದೆ. ಕಳೆದ ತಿಂಗಳ ನವೆಂಬರ್ 22 ರಂದು ಕೃಷಿ ವಿಶ್ವವಿದ್ಯಾಲಯದ ಸೆಕ್ಯೂರಿಟಿ ಗಾರ್ಡ್ ಕೊಲೆ ನಡೆದಿತ್ತು. ಕೊಲೆಯ ಹಿಂದಿನ ರಹಸ್ಯ ಭೇದಿಸಲು ಮುಂದಾದ ಪೊಲೀಸರಿಗೆ ಕೊಲೆಯ ಅಸಲಿ ಸತ್ಯ ಗೊತ್ತಾಗಿದೆ. ಒಟ್ಟು ನಾಲ್ವರು ಮೃತನ ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ದಾಳಿ ಮಾಡಿ ಹತ್ಯೆ ಮಾಡಿದ್ದರು. ಈ ಕೇಸ್ ಸಂಬಂಧ ಪೊಲೀಸರು ಮೃತ ವ್ಯಕ್ತಿಯ ಮಗಳ ಬಳಿ ಮಾಹಿತಿ ಪಡೆಯುವ ವೇಳೆ ಕೊಲೆಯ ಸತ್ಯ ಸಂಗತಿ ಬಯಲಾಗಿದೆ.
ಮೃತನ ಮಗಳ ಬಾಯಿಂದ ಹೊರ ಬಿತ್ತು ಸತ್ಯ
ಕೊಲೆ ಕೇಸ್ಗೆ ಸಂಬಂಧಿಸಿ ಪೊಲೀಸರು ಮಾಹಿತಿ ಕೇಳುವಾಗ ನಾಲ್ವರು ಟೂಲ್ಸ್ ಸಮೇತ ಬಂದು ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆಂದ ಮಗಳು ಉತ್ತರಿಸಿದ್ದಳು. ಈ ವೇಳೆ ಅನುಮಾನಗೊಂಡ ಪೊಲೀಸರು ಟೆಕ್ನಿಕಲ್ ವರ್ಡ್ ಬಳಿಸಿದ ಮಗಳ ಬಳಿ ಕ್ರಾಸ್ ಕ್ವೆಷನಿಂಗ್ ಮಾಡಿದಾಗ ಹತ್ಯೆಯ ರಹಸ್ಯ ಬಯಲಾಗಿದೆ. ತನ್ನ ಕಾಲೇಜು ಗೆಳೆಯರ ಜೊತೆ ಗೂಡಿ ಕೊಲೆ ಕೃತ್ಯ ನಡೆಸಿರುವುದು ಬೆಳಕಿಗೆ ಬಂದಿದೆ.
ಮೃತನ ನೀಚ ಕೃತ್ಯದ ವಿರುದ್ಧ ದಾಖಲಾಯ್ತು ಎಫ್ಐಆರ್
ಸದ್ಯ ಪೊಲೀಸರ ವಿಚಾರಣೆ ವೇಳೆ ತಂದೆಯ ಕಿರುಕುಳದ ಬಗ್ಗೆ ಎಳೆಎಳೆಯಾಗಿ ಮಗಳು ಮಾಹಿತಿ ಬಿಚ್ಚಿಟ್ಟಿದ್ದಾಳೆ. ತಂದೆಯ ನಿರಂತರ ಕಿರುಕುಳಕ್ಕೆ ಬೇಸತ್ತು ಸ್ನೇಹಿತರ ಜೊತೆಗೂಡಿ ಹತ್ಯೆ ಮಾಡಿದ್ದಾಗಿ ಹೇಳಿಕೆ ನೀಡಿದ್ದಾಳೆ. ಹೀಗಾಗಿ ಮಗಳ ಮೇಲೆ ತನ್ನ ಕಾಮಕೃತ್ಯ ತೋರಿಸಿಕೊಂಡಿದ್ದ ತಂದೆ ದೀಪಕ್ ಕುಮಾರ್ ಸಿಂಗ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಅತ್ಯಾಚಾರ, ಮಾರಣಾಂತಿಕ ಹಲ್ಲೆ, ಪೊಕ್ಸೊ ಆ್ಯಕ್ಟ್ ಅಡಿ ಕೊಲೆಯಾದ ನಂತರ ಮೃತನ ವಿರುದ್ಧ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಕೊಲೆ ಪ್ರಕರಣದಲ್ಲಿ ವಶಕ್ಕೆ ಪಡೆದ ಬಾಲಕಿ ಮೆಡಿಕಲ್ ರಿಪೋರ್ಟ್ ನೋಡಿ ಪೊಲೀಸರು ಶಾಕ್
ಕೊಲೆಗೆ ಕಾರಣವಾದ ಸತ್ಯ ಬಯಲಾಗುತ್ತಿದ್ದಂತೆ ಬಾಲಕಿಯನ್ನು ವಶಕ್ಕೆ ಪಡೆದ ಪೊಲೀಸರು ಮೆಡಿಕಲ್ ಟೆಸ್ಟ್ ಮಾಡಿಸಿದ್ದಾರೆ. ಈ ವೇಳೆ 17 ವರ್ಷದ ಬಾಲಕಿ ಗರ್ಭವತಿಯಾಗಿರೋದು ಪತ್ತೆಯಾಗಿದೆ. ಹೀಗಾಗಿ ಪೊಲೀಸರು ಮತ್ತೆ ವಿಚಾರಣೆ ಶುರು ಮಾಡಿದ್ದು ಈ ವೇಳೆ ಆಕೆಯ ಪ್ರಿಯಕರನ ವಿಚಾರ ಸಹ ಬಯಲಾಗಿದೆ. ಬಾಲಕಿ ಹಾಗೂ ಆಕೆಯ ಬಾಯ್ ಫ್ರೆಂಡ್ ಸೇರಿ ಈ ಕೊಲೆ ಪ್ಲ್ಯಾನ್ ಮಾಡಿದ್ದರು ಎಂದು ತಿಳಿದು ಬಂದಿದೆ. ಹೀಗಾಗಿ ಆತನ ವಿರುದ್ಧ ಸಹ IPC sec 376 ಹಾಗೂ ಪೊಕ್ಸೋ ಅಡಿ ಪ್ರಕರಣ ದಾಖಲಾಗಿದೆ. ಕೊಲೆ ಹಾಗೂ ಅತ್ಯಾಚಾರ ಪ್ರಕರಣ ಸಂಬಂಧ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಯಲಹಂಕ ನ್ಯೂಟೌನ್ ಪೊಲೀಸರಿಂದ ತನಿಖೆ ಮುಂದುವರೆದಿದೆ.
ಇದನ್ನೂ ಓದಿ: ಎರಡನೇ ಪತ್ನಿ ಕುಮ್ಮಕ್ಕು: ಜನ್ಮ ನೀಡಿದ ತಂದೆಯಿಂದಲೇ ಇಬ್ಬರು ಮಕ್ಕಳ ಹತ್ಯೆಗೆ ಯತ್ನ, ಒಂದು ಮಗು ಸಾವು
Published On - 1:29 pm, Fri, 10 December 21