ಹೋಟೆಲ್ ಗ್ರಾಹಕರಿಗೆ ಗುಡ್ ನ್ಯೂಸ್; ಸದ್ಯಕ್ಕೆ ಊಟ, ತಿಂಡಿ ದರ ಏರಿಕೆ ಇಲ್ಲ
ಹೋಟೆಲ್ ಗ್ರಾಹಕರಿಗೆ ಬೆಂಗಳೂರು ಹೋಟೆಲ್ ಮಾಲೀಕರ ಸಂಘ (Bangalore Hotels Association) ಸಿಹಿ ಸುದ್ದಿ ನೀಡಿದ್ದು, ಸದ್ಯಕ್ಕೆ ಊಟ, ತಿಂಡಿ ದರ ಹೆಚ್ಚಿಸುವುದಿಲ್ಲ ಎಂದು ಸೋಮವಾರ ತಿಳಿಸಿದೆ.
ಬೆಂಗಳೂರು: ಹೋಟೆಲ್ ಗ್ರಾಹಕರಿಗೆ ಬೆಂಗಳೂರು ಹೋಟೆಲ್ ಮಾಲೀಕರ ಸಂಘ (Bangalore Hotels Association) ಸಿಹಿ ಸುದ್ದಿ ನೀಡಿದ್ದು, ಸದ್ಯಕ್ಕೆ ಊಟ, ತಿಂಡಿ ದರ ಹೆಚ್ಚಿಸುವುದಿಲ್ಲ ಎಂದು ಸೋಮವಾರ ತಿಳಿಸಿದೆ. ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಸಭೆ ನಡೆಸಿದ ಹೋಟೆಲ್ ಮಾಲೀಕರ ಸಂಘ, ಊಟ, ತಿಂಡಿ ದರ ಹೆಚ್ಚಳ ಮಾಡದಿರಲು ತೀರ್ಮಾನಿಸಿದೆ. ಈ ವಿಚಾರವಾಗಿ ಸಭೆಯ ಬಳಿಕ ಸಂಘದ ಅಧ್ಯಕ್ಷ ಪಿಸಿ ರಾವ್ ಮಾಹಿತಿ ನೀಡಿದ್ದಾರೆ. ಸದ್ಯಕ್ಕೆ ಹೋಟೆಲ್ ಊಟ, ತಿಂಡಿ ದರ ಏರಿಕೆ ಇಲ್ಲ ಎಂದು ಅವರು ಹೇಳಿದ್ದಾರೆ. ವಾಣಿಜ್ಯ ಸಿಲಿಂಡರ್ ಬೆಲೆ ಹೆಚ್ಚಳ, ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು ಎಂದು ಅವರು ಹೇಳಿದ್ದಾರೆ.
ಚುನಾವಣೆ ಮುಗಿಯುವ ವರೆಗೂ ಆಹಾರದ ಬೆಲೆ ಹೆಚ್ಚಳ ಮಾಡದಿರಲು ತೀರ್ಮಾನಿಸಿದ್ದೇವೆ. ಜತೆಗೆ, ಗ್ಯಾಸ್ ದರ ಇಳಿಕೆ ಮಾಡುವಂತೆ ಕೇಂದ್ರದ ಮೇಲೆ ಒತ್ತಡ ಹಾಕಲು ನಿರ್ಧಾರ ಕೈಗೊಳ್ಳಲಾಗಿದೆ. ಎಲ್ಪಿಜಿ ಸಿಲಿಂಡರ್ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಹಲವು ಹೋಟೆಲ್ ಮಾಲಿಕರಿಗೆ ಭಾರೀ ಹೊಡೆತ ಬಿದ್ದಿದೆ. ಊಟ, ತಿಂಡಿ, ಕಾಫಿ, ಟೀ ದರ ತುಂಬಾ ಕಡಿಮೆ ಇದ್ದು ಅವರು ನಷ್ಟ ಅನುಭವಿಸುತ್ತಿದ್ದಾರೆ. ಹೀಗಾಗಿ ತೀರಾ ನಷ್ಟವಾಗುತ್ತಿದ್ದರೆ ಶೇ 10ರ ದರ ಹೆಚ್ಚಳ ಮಾಡುವುದಕ್ಕೆ ಒಪ್ಪಿಗೆಯನ್ನೂ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಸಿಲಿಂಡರ್ ಬೆಲೆ ಹೆಚ್ಚಳದ ಜೊತೆಗೆ ಹಾಲು, ತುಪ್ಪ, ಮೈದಾ ಸೇರಿ ಇತರೆ ಅಡುಗೆ ಸಾಮಾಗ್ರಿಗಳ ಬೆಲೆ ಇತ್ತೀಚೆಗೆ ಏರಿಕೆಯಾಗಿದೆ. ಸರಕು ಸಾಗಣೆ ಹಾಗೂ ಕಟ್ಟಡಗಳ ಬಾಡಿಗೆಯೂ ಹೆಚ್ಚಾಗಿದೆ. ಹಾಲು, ಮೊಸರು ಹಾಗೂ ತುಪ್ಪದ ಕೊರತೆಯಿಂದಾಗಿ ಸಿಹಿ ಪದಾರ್ಥಗಳ ತಯಾರಿಯನ್ನೇ ಕಡಿಮೆ ಮಾಡಲಾಗಿದೆ. ಇವೆಲ್ಲವನ್ನು ಗಮನದಲ್ಲಿಟ್ಟುಕೊಂಡು ಇಂದು ಸಭೆ ನಡೆಸಲಾಗಿತ್ತು ಎಂದು ಅವರು ಮಾಹಿತಿ ನೀಡಿದ್ದಾರೆ.
ಏಪ್ರಿಲ್ 1ರಂದು ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ ದರ ಸುಮಾರು 92 ರೂ.ನಷ್ಟು ಇಳಿಕೆಯಾಗಿತ್ತು. ಆದರೆ, ಮಾರ್ಚ್ ತಿಂಗಳಲ್ಲಿ ವಾಣಿಜ್ಯ ಬಳಕೆಯ ಸಿಲಿಂಡರ್ ದರವನ್ನು 350 ರೂ.ನಷ್ಟು ಹೆಚ್ಚಿಸಲಾಗಿತ್ತು. ಇದು ಹೋಟೆಲ್ ಉದ್ಯಮವನ್ನು ಮತ್ತಷ್ಟು ಸಂಕಷ್ಟಕ್ಕೀಡು ಮಾಡಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:23 pm, Mon, 3 April 23