ಶ್ರೀರಾಮಸೇನೆ ಗೂಂಡಾಗಳಿಗೆ ರಾಮನ ಹೆಸರು ಹೇಳುವ ಯಾವ ಯೋಗ್ಯತೆಯಿದೆ: ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದ ಸಿದ್ದರಾಮಯ್ಯ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Apr 10, 2022 | 2:41 PM

ಶ್ರೀರಾಮಸೇನೆಯ ಪುಂಡರನ್ನು ಒದ್ದು ಒಳಗೆ ಹಾಕಲು ಪೊಲೀಸರಿಗೆ ಆದೇಶ ನೀಡಬೇಕು. ಸಾಧ್ಯವಿಲ್ಲ ಎಂದಾದರೆ ರಾಜೀನಾಮೆ ನೀಡಿ ಕುರ್ಚಿಯ ಮಾನ ಕಾಪಾಡಬೇಕು ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಶ್ರೀರಾಮಸೇನೆ ಗೂಂಡಾಗಳಿಗೆ ರಾಮನ ಹೆಸರು ಹೇಳುವ ಯಾವ ಯೋಗ್ಯತೆಯಿದೆ: ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದ ಸಿದ್ದರಾಮಯ್ಯ
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ
Follow us on

ಬೆಂಗಳೂರು: ಕರ್ನಾಟಕದ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಇನ್ನೂ ಅಧಿಕಾರದಲ್ಲಿದ್ದರೆ ತಕ್ಷಣ ಧಾರವಾಡದ ಮುಸ್ಲಿಂ ವರ್ತಕರ ಮೇಲೆ ದೌಜ್ಯನ್ಯವೆಸಗಿದ್ದ ಶ್ರೀರಾಮಸೇನೆಯ ಪುಂಡರನ್ನು ಒದ್ದು ಒಳಗೆ ಹಾಕಲು ಪೊಲೀಸರಿಗೆ ಆದೇಶ ನೀಡಬೇಕು. ಸಾಧ್ಯವಿಲ್ಲ ಎಂದಾದರೆ ರಾಜೀನಾಮೆ ನೀಡಿ ಕುರ್ಚಿಯ ಮಾನ ಕಾಪಾಡಬೇಕು ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಭಾರತೀಯ ಜನತಾ ಪಕ್ಷ ಹೇಳಿಕೊಂಡು ಬರುತ್ತಿರುವ ‘ರಾಮ ರಾಜ್ಯ’ದ ಒಂದು ಚಿತ್ರವನ್ನು ರಾಮ ನವಮಿಯ ಹಿನ್ನೆಲೆಯಲ್ಲಿ ಧಾರವಾಡದ ಶ್ರೀರಾಮಸೇನೆಯ ಗೂಂಡಾಗಳು ಜಗತ್ತಿನ ಮುಂದೆ ಇಟ್ಟಿದ್ದಾರೆ. ಇಂತಹ ಗೂಂಡಾಗಳಿಗೆ ರಾಮನ ಹೆಸರು ಹೇಳುವ ಯಾವ ಯೋಗ್ಯತೆ ಇದೆ? ಧಾರವಾಡದಲ್ಲಿ ನಡೆದ ಹಲ್ಲೆ ಕೇವಲ ಮುಸ್ಲಿಂ ವ್ಯಾಪಾರಿಗಳ ಮೇಲೆ ನಡೆದದ್ದಲ್ಲ, ಅದು ಅವರು ಮಾರಾಟ ನಡೆಸುತ್ತಿದ್ದ ಕಲ್ಲಂಗಡಿ ಬೆಳೆಯುವ ರೈತರ ಮೇಲೆ ನಡೆದಿರುವ ದೌರ್ಜನ್ಯವೂ ಆಗಿದೆ. ಈ ಗೂಂಡಾಗಳನ್ನು ಹೀಗೆ ಸ್ವತಂತ್ರವಾಗಿ ಬಿಟ್ಟರೆ ಇವರು ಎಲ್ಲರ ಮನೆ ಬಾಗಿಲು ತಟ್ಟಲಿದ್ದಾರೆ. ರಾಜ್ಯದ ಪೊಲೀಸ್ ಮಹಾನಿರ್ದೇಶಕರ ಹೇಳಿಕೆಯನ್ನು ಧಿಕ್ಕರಿಸುತ್ತಿರುವ ಸಿ.ಟಿ.ರವಿ, ರವಿಕುಮಾರ್ ಮೊದಲಾದ ಕೂಗುಮಾರಿಗಳ ಬಾಯಿಮುಚ್ಚಿಸಲಾಗದಷ್ಟು ಮುಖ್ಯಮಂತ್ರಿ ಬೊಮ್ಮಾಯಿ ಮೂಕ ಬಸವಣ್ಣನಾಗಿದ್ದಾರೆ. ಇಂತಹ ತಂಟೆಕೋರರ ಬೇಜವಾಬ್ದಾರಿ ಹೇಳಿಕೆಗಳಿಂದಾಗಿ ಇಡೀ ಪೊಲೀಸ್ ಇಲಾಖೆ ನೈತಿಕವಾಗಿ ಕುಸಿದುಹೋಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ರಾಜಕೀಯ ದುರುದ್ದೇಶದಿಂದ ಮುಸ್ಲಿಮರನ್ನು ಗುರಿಯಾಗಿಟ್ಟುಕೊಂಡು ಬಿಜೆಪಿ ಮತ್ತು ಸಂಘ ಪರಿವಾರ ನಡೆಸುತ್ತಿರುವ ಪುಂಡಾಟಿಕಗಳಿಗಳಿಂದಾಗಿ ಹೊರರಾಜ್ಯ ಮತ್ತು ಹೊರದೇಶಗಳ ಎದುರು ಕೂಡುಬಾಳ್ವೆಗೆ ಹೆಸರಾದ ಶಾಂತಿ ಮತ್ತು ಸೌಹಾರ್ದಪ್ರಿಯ ಕನ್ನಡಿಗರು ತಲೆತಗ್ಗಿಸುವಂತಾಗಿದೆ. ಇದನ್ನು ಕನ್ನಡಿಗರು ಎಂದೂ ಕ್ಷಮಿಸರು. ಇದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಮಾಡಿರುವ ಪಾಪದ ಫಲ. ಬೀದಿಗೂಂಡಾಗಳ ಪುಂಡಾಟಿಕೆಯನ್ನು ಕ್ರಿಯೆಗೆ ಪ್ರತಿಕ್ರಿಯೆ ಎಂದು ಸಮರ್ಥಿಸಿಕೊಂಡ ನಂತರವೇ ಕೊಲೆ, ಹಿಂಸಾಚಾರ, ಗಲಾಟೆ, ದೌರ್ಜನ್ಯಗಳ ಹೊಸ ಸರಣಿ ಪ್ರಾರಂಭವಾಗಿದ್ದು. ಇದರಿಂದ ಕಾನೂನು ವ್ಯವಸ್ಥೆಯೇ ಕುಸಿದುಬಿದ್ದು ನಾಗರಿಕ ಯುದ್ಧಕ್ಕೆ ದಾರಿಮಾಡಿಕೊಟ್ಟಿದೆ. ಸಂಘ ಪರಿವಾರದ ಜೊತೆಗಿನ ಸಹಯೋಗದಿಂದ ಬಿಜೆಪಿ ಪಕ್ಷವು ರಾಜ್ಯದಲ್ಲಿ ನಡೆಸುತ್ತಿರುವ ಸರ್ಕಾರದಿಂದ ಹರಡುತ್ತಿರುವ ಕೋಮುದ್ವೇಷದ ವಾತಾವರಣದಿಂದ ರಾಜ್ಯದ ಉದ್ಯಮಿಗಳು ಬೇಸತ್ತು ಹೊರರಾಜ್ಯದ ಕಡೆ ಮುಖಮಾಡುತ್ತಿದ್ದಾರೆ. ಕಿರಣ್ ಮಜುಂದಾರ್ ಶಾ ಥರದ ಖ್ಯಾತನಾಮರು ಕೂಡಾ ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿರುವುದ ಕಳವಳಕಾರಿ ಬೆಳವಣಿಗೆ ಎಂದು ಅವರು ವಿಷಾದ ವ್ಯಕ್ತಪಡಿಸಿದ್ದಾರೆ.

ರಾಜ್ಯವು ಬೇಡದ ಕೂಸು, ಅಳುವ ಕೂಸುಗಳನ್ನು ನೋಡಿಯಾಗಿದೆ. ಈಗಿನದ್ದು ಆಡುವ ಗೊಂಬೆಯ ಸರ್ಕಾರ. ಆ ಕೂಸುಗಳಿಗೆ ಜೀವವಾದರೂ ಇತ್ತು, ಈಗಿನದ್ದು ಸಂಪೂರ್ಣ ನಿರ್ಜೀವ ಆಟದ ಗೊಂಬೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಂಘ ಪರಿವಾರದ ಪುಂಡರ ಕೈಲಿ ಆಟಿಕೆಯ ಗೊಂಬೆಯಂತಾಗಿದ್ದಾರೆ. ಜನರ ಗಮನ ಬೇರೆಡೆ ಸೆಳೆದು ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಸಂಘ ಪರಿವಾರಕ್ಕೆ ಔಟ್​ಸೋರ್ಸ್​ ಕೊಟ್ಟಿದ್ದಾರೆ. ಪುಂಡರನ್ನು ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಂಡಂತೆ ಕಾಣುತ್ತಿದೆ. ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ಇದೊಂದು ಶಾಶ್ವತ ಕಳಂಕ. ಸಿಎಂ ಬೊಮ್ಮಾಯಿಗೆ ಸಂಪುಟ, ಪಕ್ಷದ ಮೇಲೆ ನಿಯಂತ್ರಣವಿಲ್ಲ. ಸರ್ಕಾರವನ್ನು ಸಂಘ ಪರಿವಾರಕ್ಕೆ ಅಡವಿಟ್ಟರೆ ತಮ್ಮ ಕುರ್ಚಿ ಉಳಿಸಿಕೊಳ್ಳಬಹುದು ಎಂದು ಕನಸು ಕಾಣುತ್ತಿದ್ದಾರೆ. ಈ ಪುಂಡಾಟಿಕೆ ಅವರ ಕುರ್ಚಿ ಕಿತ್ತುಕೊಳ್ಳಲಿದೆ ಎನ್ನುವುದು ಅವರಿಗೆ ತಿಳಿದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಬಿಜೆಪಿಯವರ ವಿರುದ್ಧ ಜನರೇ ತಿರುಗಿಬಿದ್ದಿದ್ದಾರೆ ಎಂದು ವಾಗ್ದಾಳಿ ನಡೆಸಿರುವ ಅವರು, ಚಂದ್ರು ಹತ್ಯೆ ತನಿಖೆಯನ್ನು ಸಿಐಡಿಗಾದರೂ ಕೊಡಲಿ ಅಥವಾ ಬೇರೆ ಯಾವುದೇ ಸಂಸ್ಥೆಗಾದರೂ ಕೊಡಲಿ. ನಾವು ತಪ್ಪಿತಸ್ಥರ ಪರ ಇಲ್ಲ ಎಂದರು. ಗೃಹ ಸಚಿವ ಆರಗ ಜ್ಞಾನೇಂದ್ರ ಒಬ್ಬ ಅಸಮರ್ಥ ಸಚಿವ. ಅವರಿಗೆ ಕಾನೂನು ಸುವ್ಯವಸ್ಥೆ ಕಾಪಾಡುವುದಕ್ಕೆ ಆಗುತ್ತಿಲ್ಲ. ಹೀಗಾಗಿ ಕೋಮು ಭಾವನೆ ಸೃಷ್ಟಿ ಮಾಡುತ್ತಿದ್ದಾರೆ. ಹಿಂದೂಗಳನ್ನು ಪ್ರಚೋದಿಸುವ ಹೇಳಿಕೆ ಕೊಡುತ್ತಿದ್ದಾರೆ. ಸ್ವಾರ್ಥ, ವೋಟಿಗೋಸ್ಕರ ರಾಜ್ಯ ಹಾಳು ಮಾಡುತ್ತಿದ್ದಾರೆ ಎಂದರು.

ಇದನ್ನೂ ಓದಿ: ಸಿದ್ದರಾಮಯ್ಯ ವೃತ್ತ ಉದ್ಘಾಟನೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಚಾಲನೆ

ಇದನ್ನೂ ಓದಿ: ಮುಸ್ಲಿಮರಿಗೆ ಕಿರುಕುಳ ಕೊಡೋದು ಬಿಜೆಪಿ ಉದ್ದೇಶವಲ್ಲ: ಸಂಸದ ಈರಣ್ಣ ಕಡಾಡಿ