ಕಾಶಿಯಾತ್ರೆಗೆ ಹೋಗುವ ಭಕ್ತರಿಗೆ ಸಹಾಯಧನ ನೀಡಲು ಮುಂದಾದ ರಾಜ್ಯ ಸರ್ಕಾರ, ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿರಬೇಕು!
ರಾಜ್ಯ ಸರ್ಕಾರದಿಂದ ಕಾಶಿ ಯಾತ್ರೆಗೆ ಅಂತಿಮ ಮಾರ್ಗಸೂಚಿ ಹೊರಡಿಸಿದ್ದು, 30 ಸಾವಿರ ಕಾಶಿ ಯಾತ್ರಾರ್ಥಿಗಳಿಗೆ 5 ಸಾವಿರ ರೂ. ಸಹಾಯಧನವನ್ನು ನೀಡಲು ಏಪ್ರಿಲ್ 1ರಿಂದ ಪೂರ್ವಾನ್ವಯವಾಗುವಂತೆ ಸರ್ಕಾರ ಆದೇಶ ಹೊರಡಿಸಿದೆ.
ಬೆಂಗಳೂರು: ರಾಜ್ಯ ಸರ್ಕಾರದಿಂದ (State Government) ಕಾಶಿ (Kashi) ಯಾತ್ರೆಗೆ ಅಂತಿಮ ಮಾರ್ಗಸೂಚಿ ಹೊರಡಿಸಿದ್ದು, 30 ಸಾವಿರ ಕಾಶಿ ಯಾತ್ರಾರ್ಥಿಗಳಿಗೆ 5 ಸಾವಿರ ರೂ. ಸಹಾಯಧನವನ್ನು ನೀಡಲು ಏಪ್ರಿಲ್ 1ರಿಂದ ಪೂರ್ವಾನ್ವಯವಾಗುವಂತೆ ಸರ್ಕಾರ ಆದೇಶ ಹೊರಡಿಸಿದೆ. ರಾಜ್ಯದ ಖಾಯಂ ನಿವಾಸಿಗಳು ಮಾತ್ರ ಸೌಲಭ್ಯ ಪಡೆಯಲು ಅರ್ಹರಾಗಿತ್ತಾರೆ. ಯಾತ್ರಿಕರು ಆಯಾ ವರ್ಷದ ಏಪ್ರಿಲ್ 1ಕ್ಕೆ 18 ವರ್ಷ ಮೇಲ್ಪಟ್ಟಿರಬೇಕು. ಈ ಸಂಬಂಧ ವೋಟರ್ ಐಡಿ (Voter ID), ಆಧಾರ್ ಕಾರ್ಡ್ (Aadhar Card), ಪಡಿತರ ಚೀಟಿ ಹೊಂದಿರಬೇಕು. ಯಾತ್ರಿಕರು ವಯಸ್ಸಿನ ಸಂಬಂಧ ಸೂಕ್ತ ದಾಖಲೆ ಹಾಜರುಪಡಿಸಬೇಕು ಎಂದು ತಿಳಿಸಿದೆ.
ಇದನ್ನು ಓದಿ: ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು: ಸುಪ್ರೀಂಕೋರ್ಟ್ನಲ್ಲಿ ವಾದ, ಪ್ರತಿವಾದ ಹೇಗಿತ್ತು?
ರಾಷ್ಟ್ರೀಕೃತ ಬ್ಯಾಂಕ್ನಲ್ಲಿ ಆಧಾರ್ ಲಿಂಕ್ ಆಗಿರುವ ಖಾತೆಯಿರಬೇಕು. ಏಪ್ರಿಲ್ 1ರಿಂದ ಜೂನ್ 30ರೊಳಗೆ ಕಾಶಿಗೆ ತೆರಳಿದ್ದ ಸಂಬಂಧ ದಾಖಲೆ ಇರಬೇಕು. ಧಾರ್ಮಿಕ ಧತ್ತಿ ಇಲಾಖೆ ಕಚೇರಿಗೆ ಯಾತ್ರಿಕರು ದಾಖಲೆ ಸಲ್ಲಿಸಬೇಕು. ಒಂದು ಬಾರಿ ಸಹಾಯಧನ ಪಡೆದವರು 2ನೇ ಬಾರಿಗೆ ಅವಕಾಶ ಇಲ್ಲ ಎಂದು ಸರ್ಕಾರದ ವರದಿಯಲ್ಲಿ ತಿಳಿಸಲಾಗಿದೆ.
ಮಾರ್ಗಸೂಚಿಯ ಅಂಶಗಳು:
1. ಕರ್ನಾಟಕ ರಾಜ್ಯದಿಂದ ಕಾಶಿ ಯಾತ್ರೆ ಕೈಗೊಂಡ ಅರ್ಹ ಯಾತ್ರಾರ್ಥಿಗಳಿಗೆ ತಲಾ ರೂ 5,೦೦೦/-ಗಳನ್ನು ಸಹಾಯ ಧನವಾಗಿ ನೀಡಲಾಗುವುದು. 2. ಕರ್ನಾಟಕದ ಖಾಯಂ ನಿವಾಸಿಗಳು ಮಾತ್ರ ಈ ಧನ ಸಹಾಯ ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ. ಈ ಉದ್ದೇಶಕ್ಕಾಗಿ ಕೆಳಕಂಡ ಯಾವುದಾದರೂ ಒಂದು ದಾಖಲೆಗಳನ್ನು ಕಡ್ಡಾಯವಾಗಿ ಒದಗಿಸತಕ್ಕದ್ದು.
• ಕರ್ನಾಟಕ ರಾಜ್ಯ ಚುನಾವಣಾ ಆಯೋಗ ನೀಡಿರುವ “ಗುರುತಿನ ಚೀಟಿ’ ಅಥವಾ
• ಆಧಾರ್ ಗುರುತಿನ ಚೀಟಿ ಅಥವಾ
• ರೇಷನ್ ಕಾರ್ಡ್
3. ಕರ್ನಾಟಕ ರಾಜ್ಯದಿಂದ ಕಾಶಿ ಯಾತ್ರೆ ಕೈಗೊಳ್ಳುವ ಯಾತ್ರಾರ್ಥಿಗಳು ಆಯಾ ಆರ್ಥಿಕ ವರ್ಷದ ಮೊದಲ ದಿನಕ್ಕೆ ಅನ್ವಯಿಸುವಂತೆ ಏಪ್ರಿಲ್ 1 ಕ್ಕೆ 18 ವರ್ಷಗಳ ಮೇಲ್ಪಟ್ಟವರಾಗಿರತಕ್ಕದ್ದು, 18 ವಯಸ್ಸಿನ ಕೆಳಗಿನವರ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. 18 ವರ್ಷ ಮೇಲ್ಪಟ್ಟ ಯಾತ್ರಾರ್ಥಿಗಳು ವಯಸ್ಸಿಗೆ ಸಂಬಂಧಿಸಿದ ಸೂಕ್ತ ದಾಖಲೆಯನ್ನು ಹಾಜರುಪಡಿಸುವುದು,
4. ದಿನಾಂಕ: ೦೧.೦೪.೨೦೨೨ ರಿಂದ ದಿನಾಂಕ: ೩೦.೦೬.೨೦೨೨ ರವರೆಗೆ ಕಾಶಿ ಶ್ರೀ ವಿಶ್ವನಾಥ ಸ್ವಾಮಿಯ ದರ್ಶನಕ್ಕೆ ತೆರಳಿದ ಯಾತ್ರಾರ್ಥಿಗಳು ಸಂಬಂಧಿಸಿದ ದಾಖಲಾತಿ (ಕಾಶಿ ಶ್ರೀ ವಿಶ್ವನಾಥ ಸ್ವಾಮಿ ದೇವಾಲಯಕ್ಕೆ ತೆರಳಲು ಮುಂಗಡವಾಗಿ ಕಾಯ್ದಿರಿಸಿದ ಮತ್ತು ಹಿಂದಿರುಗಿದ ಬಗ್ಗೆ ಕಾಯ್ದಿರಿಸಿದ ಟಿಕೇಟ್, ಛಾಯಾಚಿತ್ರ ಪೂಜಾ ರಶೀದಿ, ಅಥವಾ ದೇವಾಲಯಕ್ಕೆ ತೆರಳಿ ಮರಳಿದ ಬಗ್ಗೆ ಯಾವುದಾದರೂ ಇತರೆ ದಾಖಲೆ)ಗಳನ್ನು ಮುದ್ದಾಂ ಆಗಿ ಆಯುಕ್ತರು, ಧಾರ್ಮಿಕ ದತ್ತಿ ಇಲಾಖೆ, ಇವರ ಕಛೇರಿಗೆ ಸಲ್ಲಿಸತಕ್ಕದ್ದು.
5. ದಿನಾಂಕ: ೦೧.೦೭.೨೦೨೨ರಿಂದ ಅನ್ವಯವಾಗುವಂತೆ ಯಾತ್ರಾರ್ಥಿಗಳು ಕಾಶಿ ಯಾತ್ರೆ ಕೈಗೊಂಡಿರುವ ಬಗ್ಗೆ ಸಂಬಂಧಿಸಿದ ದಾಖಲೆಗಳನ್ನು ವ್ಯವಸ್ಥಾಪಕರು, ಕರ್ನಾಟಕ ರಾಜ್ಯ ಛತ್ರ, ವಾರಣಾಸಿ ಇವರ ಕಛೇರಿಯಿಂದ ಬಯೋಮೆಟ್ರಿಕ್ ದೃಢೀಕರಣದೊಂದಿಗೆ, ಆನ್‌ಲೈನ್ ಅಥವಾ ಮುದ್ಧಾಂ/ನೊಂದಾಯಿತ ಅಂಚೆ ಮೂಲಕ, ಆಯುಕ್ತರು ಧಾರ್ಮಿಕ ದತ್ತಿ ಇಲಾಖೆ ಇವರ ಕಛೇರಿಗೆ ಸಲ್ಲಿಸತಕ್ಕದ್ದು ಒಂದು ವೇಳೆ ವ್ಯವಸ್ಥಾಪಕರು ಕರ್ನಾಟಕ ರಾಜ್ಯ ಛತ್ರ, ವಾರಣಾಸಿ ಇವರ ದೃಢೀಕರಣ ಇಲ್ಲದಿದ್ದಲ್ಲಿ ಅಂತಹ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
6. ಯಾತ್ರಾರ್ಥಿಗಳು ಸಹಾಯಧನವನ್ನು ಒಂದು ಬಾರಿ ಪಡೆದ ನಂತರದಲ್ಲಿ, ಅದೇ ವ್ಯಕ್ತಿಗೆ ಎರಡನೇ ಬಾರಿ ಅನುದಾನ ನೀಡಲು ಪರಿಗಣಿಸಲಾಗುವುದಿಲ್ಲ.
7. ಸರ್ಕಾರದ ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸುವ ಯಾತ್ರಾರ್ಥಿಗಳ ಬ್ಯಾಂಕ್ ಖಾತೆಯು ರಾಷ್ಟ್ರೀಕೃತ ಬ್ಯಾಂಕಿನ ಖಾತೆಯಾಗಿರಬೇಕು ಮತ್ತು ಕಡ್ಡಾಯವಾಗಿ ಆಧಾರ್ ಲಿಂಕ್ ಆಗಿರತಕ್ಕದ್ದು,
8. ಸದರಿ ಸಹಾಯಧನವನ್ನು ಯಾತ್ರೆಯನ್ನು ಪೂರ್ಣಗೊಳಿಸಿ ಸಂಬಂಧಿಸಿದ ದಾಖಲೆಗಳನ್ನು ನಿಗಧಿತ ನಮೂನೆ ಅರ್ಜಿಯನ್ನು ಭರ್ತಿ ಮಾಡಿ ಒದಗಿಸಿದ ನಂತರ ಸದರಿ ಅರ್ಜಿಗಳನ್ನು ಧಾರ್ಮಿಕ ದತ್ತಿ ಆಯುಕ್ತರು ಸ್ವೀಕರಿಸಿ, ಪರಿಶಿಲಿಸಿ ಅನುದಾನ ಮಂಜೂರು ಮಾಡಲು ಕ್ರಮ ಕೈಗೊಳ್ಳುವುದು.
ಸದರಿ ಯೋಜನೆಯ ಜೊತೆಯಲ್ಲಿ “ಭಾರತ್ ಗೌರವ್” ಯೋಜನೆ ಅಡಿಯಲ್ಲಿ ಕಾಶಿ ಯಾತ್ರೆಗೆ ವಿಶೇಷ ರೈಲು 30 ಸಾವಿರ ಜನರಿಗೆ ತಲಾ 5 ಸಾವಿರದಂತೆ ಸಹಾಯಧನ ನೀಡುವ ಯೋಜನೆ ಅಲ್ಲದೆ, ಮತ್ತೊಂದು ವಿಶೇಷ ಯೋಜನೆಯನ್ನು ಮುಜರಾಯಿ ಇಲಾಖೆ ಅನುಷ್ಠಾನಗೊಳಿಸುತ್ತಿದೆ.
ಕೇಂದ್ರ ಸರಕಾರದ “ಭಾರತ ಗೌರವ” ಯೋಜನೆಯ ಅಡಿಯಲ್ಲಿ ಮುಜರಾಯಿ ಇಲಾಖೆಯ ರೈಲ್ವೇ ಇಲಾಖೆಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಕಾಶಿಗೆ ವಿಶೇಷ ರೈಲಿನ ಕಾರ್ಯಾಚರಣೆ ಸದ್ಯದಲ್ಲೇ ಪ್ರಾರಂಭಿಸಲು ಸಿದ್ದತೆಗಳನ್ನು ಭರದಿಂದ ಮಾಡಿಕೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ಈಗಾಗಲೇ ರೈಲ್ವೇ ಇಲಾಖೆಯಲ್ಲಿ ನೊಂದಣಿ ಮಾಡಿಸಿದ್ದು ಇನ್ನು ಕೆಲವೇ ತಿಂಗಳುಗಳಲ್ಲಿ ಯೋಜನೆ ಕಾರ್ಯಗತಗೊಳ್ಳಲಿದೆ ಎಂದು ಮಾನ್ಯ ಸಚಿವರಾದ ಶ್ರೀಮತಿ ಶಶಿಕಲಾ ಅ ಜೊಲ್ಲೆ ತಿಳಿಸಿದ್ದಾರೆ.
ಈ ಸಲ ಆಷಾಢ ಮಾಸದಲ್ಲಿ ಚಾಮುಂಡೇಶ್ವರಿ ದರ್ಶನಕ್ಕೆ ಅವಕಾಶ, ಉಚಿತ ಬಸ್ ಸೇವೆ
ಮೈಸೂರು: ಕೊರೊನಾ ಮಹಾಮಾರಿ ಭೀತಿ ಕಳೆದಿದ್ದು, ಈ ಸಲ ಆಷಾಢ ಮಾಸದಲ್ಲಿ ಚಾಮುಂಡೇಶ್ವರಿ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಈ ಬಗ್ಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಅವರು ಮಾಹಿತಿ ನೀಡಿದ್ದು, ಕಳೆದೆರಡು ವರ್ಷ ಕೋವಿಡ್ ಹಿನ್ನೆಲೆಯಲ್ಲಿ ಆಷಾಡ ಮಾಸದಲ್ಲಿ ದೇವಿಯ ದರ್ಶನಕ್ಕೆ ಅವಕಾಶ ಸಿಕ್ಕಿರಲಿಲ್ಲ. ಈ ಬಾರಿಯ ಆಷಾಡ ಮಾಸದಲ್ಲಿ ಚಾಮುಂಡೇಶ್ವರಿಯ ದರ್ಶನಕ್ಕೆ ಅನುವು ಮಾಡಿಕೊಡಲಾಗುತ್ತಿದೆ. ಎರಡು ಡೋಸ್ ಕೊರೊನಾ ಲಸಿಕೆ ತೆಗೆದುಕೊಂಡಿರುವವರಿಗೆ ಪ್ರವೇಶ ನೀಡಲಾಗುವುದು. ಈ ಬಗ್ಗೆ ಆಯ್ದ ಸ್ಥಳಗಳಲ್ಲಿ ತಪಾಸಣೆ ನಡೆಸಲಾಗುತ್ತದೆ. ಈ ಬಾರಿಯೂ ಖಾಸಗಿ ವಾಹನಗಳಿಗೆ ನಿರ್ಬಂಧ ವಿಧಿಸಲಾಗಿದೆ. ಚಾಮುಂಡಿ ಬೆಟ್ಟದ ತಪ್ಪಲಿನ ಲಲಿತ ಮಹಲ್ ಹೆಲಿಪ್ಯಾಡ್ ಬಳಿಯಿಂದ ಸಾರಿಗೆ ಬಸ್ ಗಳು ಹೊರಡಲಿವೆ. ಲಲಿತ ಮಹಲ್ ಹೆಲಿಪ್ಯಾಡ್ ಬಳಿಯಿಂದ ಸಾರಿಗೆ ಬಸ್ ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಸಚಿವ ಸೋಮಶೇಖರ್ ತಿಳಿಸಿದ್ದಾರೆ.
ಇದನ್ನು ಓದಿ: ಕೆಂಪೇಗೌಡ ಜಯಂತಿ ಗಿಫ್ಟ್! ಇನ್ಮುಂದೆ ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ಶೇ. 25ರಷ್ಟು ರಿಯಾಯಿತಿ!
Published On - 7:54 pm, Mon, 27 June 22