Gruha Jyothi Scheme: ಶೂನ್ಯ ಬಿಲ್‌ ಬದಲು ಹೆಚ್ಚುವರಿ ಬಿಲ್, ಹೆವಿ ಲೋಡ್ ಹೆಸರಿನಲ್ಲಿ ವಿದ್ಯುತ್ ಬಿಲ್ ಹೆಚ್ಚಳ

| Updated By: ಗಣಪತಿ ಶರ್ಮ

Updated on: Aug 14, 2024 | 7:52 AM

Electricity Bill: ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ ಗೃಹಜ್ಯೋತಿ ಅಡಿಯಲ್ಲಿ ಕಳೆದ ಎರಡು ತಿಂಗಳುಗಳಿಂದ ಅನೇಕ ಗ್ರಾಹಕರಿಗೆ ಶೂನ್ಯ ಬಿಲ್ ಬದಲು ಹೆಚ್ಚುವರಿ ಬಿಲ್ ಬರುತ್ತಿದೆ. ಹೆವಿ ಲೋಡ್ ಹೆಸರಿನಲ್ಲಿ ವಿದ್ಯುತ್ ಬಿಲ್ ಹೆಚ್ಚಳವಾಗಿ ಬರುತ್ತಿದೆ ಎಂದು ಗ್ರಾಹಕರು ಆರೋಪಿಸಿದ್ದಾರೆ. ಇದೇನಿದು? ಇಲ್ಲಿದೆ ವಿವರ.

Gruha Jyothi Scheme: ಶೂನ್ಯ ಬಿಲ್‌ ಬದಲು ಹೆಚ್ಚುವರಿ ಬಿಲ್, ಹೆವಿ ಲೋಡ್ ಹೆಸರಿನಲ್ಲಿ ವಿದ್ಯುತ್ ಬಿಲ್ ಹೆಚ್ಚಳ
ಶೂನ್ಯ ಬಿಲ್‌ ಬದಲು ಹೆಚ್ಚುವರಿ ಬಿಲ್, ಹೆವಿ ಲೋಡ್ ಹೆಸರಿನಲ್ಲಿ ವಿದ್ಯುತ್ ಬಿಲ್ ಹೆಚ್ಚಳ
Follow us on

ಬೆಂಗಳೂರು, ಆಗಸ್ಟ್ 14: ಕಾಂಗ್ರೆಸ್ ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಒಂದಾದ ಗೃಹಜ್ಯೋತಿ ಜೋಜನೆ ಜಾರಿಯಾಗಿ ಒಂದು ವರ್ಷವಾಗಿದೆ. ಆದರೆ, ಒಂದು ವರ್ಷವಾದ ಬೆನ್ನಲ್ಲೇ ಬೆಸ್ಕಾಂ ಹೊಸ ಕ್ಯಾತೆ ತೆಗೆದಿದ್ದು, ಇಷ್ಟು ದಿನ ಶೂನ್ಯ ಬರುತ್ತಿದ್ದ ಕರೆಂಟ್ ಬಿಲ್​ನಲ್ಲಿ ದಿಢೀರನೇ 150, 200 ರೂಪಾಯಿ ಬಂದಿದ್ದು ಗೃಹಹ್ಯೋತಿ ಫಲಾನುಭವಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಸದ್ಯ ಗೃಹಜ್ಯೋತಿ ಫಲಾನುಭವಿಗಳಿಗೆ ಬಂದಿರುವ ಕರೆಂಟ್ ಬಿಲ್​ನಲ್ಲಿ ಹಲವು ಸಮಸ್ಯರಗಳು ಕಂಡುಬರುತ್ತಿವೆ.‌ ಅದರಲ್ಲಿ ಹೆವಿಲೋಡ್ ಹೆಸರಿನಲ್ಲಿ ಯದ್ವಾತದ್ವಾ ಶುಲ್ಕ ವಿಧಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಈವರೆಗೆ ಶೂನ್ಯ ಬಿಲ್ ಬರುತ್ತಿದ್ದ ಗ್ರಾಹಕರು 200 ರೂ. ಬಿಲ್ ಬಂದಿದ್ದನ್ನು ನೋಡಿ ಶಾಕ್ ಆಗುತ್ತಿದ್ದಾರೆ.

ಪ್ರತಿ ತಿಂಗಳು ಎಷ್ಟು ಪ್ರಮಾಣದಲ್ಲಿ ವಿದ್ಯುತದ ಬಳಕೆ ಮಾಡುತ್ತಿದ್ದೆವೋ ಅಷ್ಟೇ ಮಾಡುತ್ತಿದ್ದೆವು. ಆದರೆ ಈಗ ಶೂನ್ಯ ಬಿಲ್ ಜಾಗದಲ್ಲಿ 200 ರೂಪಾಯಿ ಬಂದಿದ್ದು, ಬಿಲ್ ಪಾವತಿಸಬೇಕಾ ಅಥವಾ ಬೇಡವೇ ಎಂಬ ಯೋಚನೆಯಲ್ಲಿದ್ದೇವೆ. ಅಲ್ಲದೇ ಮೂರು ಜನರಿರುವ ಮನೆಗೆ ಈ ಹಿಂದೆ 400 ರೂ. ಬಿಲ್ ಬರುತ್ತಿತ್ತು. ‌ಆದಾದ ಬಳಿಕ ಶೂನ್ಯ ಬಿಲ್ 3 ತಿಂಗಳು ಬಂತು. ನಂತರ ನಾವು ಹಿಂದೆ ಎಷ್ಟು ಬಿಲ್ ಕಟ್ಟುತ್ತಿದ್ದೆವೋ ಅಷ್ಟೇ ಬಿಲ್ ಬರ್ತಿದೆ. ಈ ಕುರಿತಾಗಿ ಬೆಸ್ಕಾಂ ಅಧಿಕಾರಿಗಳನ್ನ ಪ್ರಶ್ನಿಸಲು ಕರೆಮಾಡಿದರೆ ಯಾರರೂ ಸ್ಪಂದಿಸುವುದಿಲ್ಲ. ಸುಳ್ಳು ಗ್ಯಾರಂಟಿಗಳನ್ನ ಕೊಟ್ಟು ಜನರನ್ನು ಮೋಸ ಮಾಡಿದರು ಎಂದು ಫಾಲಾನುಭವಿ ಶ್ರೀನಿವಾಸ್ ಎಂಬವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೆವಿ ಲೋಡ್ ಅಂದರೇನು?

ಒಂದು ವರ್ಷದ ಸರಾಸರಿ ವಿದ್ಯುತ್ ಬಳಕೆ ಆಧರಿಸಿ ವಿದ್ಯುತ್ ಬಳಕೆಯ ಪ್ರಮಾಣ ಹೆಚ್ಚಾಗಿದ್ದರೆ ಭದ್ರತಾ ಟೇವಣಿ ವಿಧಿಸಿಸುವುದು ಸಾಮಾನ್ಯವಾಗಿರುತ್ತದೆ. ಆದರೆ ವಿದ್ಯುತ್ ಸಂಪರ್ಕ ಪಡೆದುಕೊಳ್ಳುವಾಗ ಎಷ್ಟು ಕೆವಿ ಸಾಮಾರ್ಥ್ಯದ ಸಂಪರ್ಕ ಪಡೆದಿರೋತ್ತಾರೋ ಅದಕ್ಕಿಂತ ಹೆಚ್ಚು ವಿದ್ಯುತ್ ಬಳಕೆ ಮಾಡಿದಾಗ ಹೆವಿಲೋಡ್ ದಂಡವನ್ನ ವಿಧಿಸಲಾಗುತ್ತದೆ. ಆದರೆ ಈಗ, 3 ಕೆವಿ ವೋಲ್ಟೋಜ್ ಸಾಮಾರ್ಥದ ವಿದ್ಯುತ್ ಸಂಪರ್ಕ ಪಡೆದಿದ್ದರೂ ಕೇವಲ 19 ಯುನಿಟ್ ಬಳಕೆಗೆ ಹೆಚ್ಚುವರಿ ಲೋಡ್ ಹೆಸರಿನಲ್ಲಿ ದಂಡ ವಿಧಿಸಲಾಗುತ್ತಿದೆ. ಇದರಿಂದಾಗಿ ಗೃಹಜ್ಯೋತಿ ಫಲಾನುಭವಿಗಳಿಗೆ ಶೂನ್ಯಬಿಲ್ ಬದಲು ಹೆಚ್ಚು ಮೊತ್ತದ ಬಿಲ್ ಬರುತ್ತಿದೆ.

ಬೆಸ್ಕಾಂ ಹೇಳುವುದೇನು?

ಈ ಕುರಿತಾಗಿ ಬೆಸ್ಕಾಂ ಎಂಡಿ ಮಹಾಂತೇಶ್ ಬೀಳಗಿ ಅವರನ್ನು ಪ್ರಶ್ನಿಸಿದಾಗ, ಗೃಹಜ್ಯೋತಿ ಅಡಿಯಲ್ಲಿ ಯಾರು‌ ನೊಂದಾಯಿಸಿಕೊಂಡಿದ್ದಾರೋ ಅವರಿಗೆ ಒಂದು ವರ್ಷದ ಸರಾಸರಿಯನ್ನು ಆಧಾರಿಸಿ ಗೃಹಜ್ಯೋತಿ ಯೋಜನೆಯನ್ನು ನೀಡಲಾಗುತ್ತಿದೆ.‌ ಸದ್ಯ ನಿಗದಿಯಾಗಿರುವ ಯುನಿಟ್​ಗಿಂತ ಹೆಚ್ಚಿನದಾಗಿ ಬಳಕೆ ಮಾಡಿದರೆ ಕರೆಂಟ್ ಬಿಲ್ ಹೆಚ್ಚಾಗಿ ಬರಲಿದೆ. ಅಲ್ಲದೇ ಲೋಡ್​​ಗಳನ್ನ ಗಮನದಲ್ಲಿಟ್ಟುಕೊಂಡು ಎಂಡಿ ಪೆನಾಲ್ಟಿ ಹಾಕಲಾಗುತ್ತಿದೆ. ಇದಲ್ಲದೇ ಬೇರೆ ಬೇರೆ ಕಾರಣಗಳಿಂದ ಕರೆಂಟ್ ಬಿಲ್ ಹೆಚ್ಚಾಗಿ ಬರುತ್ತಿದ್ದರೆ ಬೆಸ್ಕಾಂ ಕಚೇರಿಗೆ ಬಂದು ತಿಳಿಸಿದರೆ ಸಮಸ್ಯೆ ಬಗೆಹರಿಸಲಾಗುತ್ತದೆ. ಆದ್ರೆ ಈಗ ಕೆಲವರಿಗೆ ಬರುತ್ತಿರುವ ಬಿಲ್ ಹೆಚ್ಚುವರಿಯಾಗಿ ವಿದ್ಯುತ್ ಬಳಕೆಗೆ ಸಂಬಂಧಿಸಿದ್ದು ಎಂದರು.

ಇದನ್ನೂ ಓದಿ: ಕೋಟ್ಯಂತರ ರೂ. ಅವ್ಯವಹಾರ ಆರೋಪ; ಭೋವಿ ಅಭಿವೃದ್ಧಿ ನಿಗಮದ ಕಚೇರಿ ಮೇಲೆ ಸಿಐಡಿ ಅಧಿಕಾರಿಗಳ ದಾಳಿ

ಒಟ್ಟಿನಲ್ಲಿ ಉಚಿತ ಯೋಜನೆ ಎಂದು ಹೇಳಿ ಇದೀಗ ಐದು ಯೋಜನೆಗಳಲ್ಲಿ ಒಂದೊಂದೇ ಸಮಸ್ಯೆಗಳು ಬರುತ್ತಿವೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನಾದರೂ ಹೆವಿ ಲೋಡ್ ಸಮಸ್ಯೆಯಿಂದ ಜನರಿಂದ ಮುಕ್ತಿ ಸಿಗಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:51 am, Wed, 14 August 24