ಹೆಡ್ ಕಾನ್​ಸ್ಟೇಬಲ್ ಹತ್ಯೆ ಪ್ರಕರಣ: ನ್ಯಾಯಾಂಗ ತನಿಖೆಗೆ ಬಿಜೆಪಿ ಪಟ್ಟು, ಸಾಧ್ಯವಿಲ್ಲ ಎಂದ ಪರಮೇಶ್ವರ

| Updated By: Rakesh Nayak Manchi

Updated on: Jul 17, 2023 | 8:59 PM

ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನಲ್ಲಿ ನಡೆದ ಹೆಡ್ ​ಕಾನ್​ಸ್ಟೇಬಲ್ ಹತ್ಯೆ ಪ್ರಕರಣವು ಇಂದು ವಿಧಾನ ಪರಿಷತ್ ಅಧಿವೇಶನದಲ್ಲಿ ಪ್ರಸ್ತಾಪವಾಯಿತು. ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಬಿಜೆಪಿ ಸದಸ್ಯರು ಪಟ್ಟು ಹಿಡಿದಿದರೆ, ಇತ್ತ ಗೃಹಸಚಿವ ಪರಮೇಶ್ವರ ಅವರು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಹೆಡ್ ಕಾನ್​ಸ್ಟೇಬಲ್ ಹತ್ಯೆ ಪ್ರಕರಣ: ನ್ಯಾಯಾಂಗ ತನಿಖೆಗೆ ಬಿಜೆಪಿ ಪಟ್ಟು, ಸಾಧ್ಯವಿಲ್ಲ ಎಂದ ಪರಮೇಶ್ವರ
ಡಾ.ಜಿ. ಪರಮೇಶ್ವರ ಮತ್ತು ಹತ್ಯೆಯಾದ ಹೆಡ್​ ಕಾನ್​ಸ್ಟೇಬಲ್ ಮಯೂರ್ ಚೌಹಾನ್
Follow us on

ಬೆಂಗಳೂರು, ಜುಲೈ 17: ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ನಾರಾಯಣಪುರ ಬಳಿ ಮರಳು ಸಾಗಣೆ ಟ್ರ್ಯಾಕ್ಟರ್​ ಹತ್ತಿಸಿ ಹೆಡ್​ಕಾನ್ಸ್​ಟೇಬಲ್​ರನ್ನು​ ಹತ್ಯೆ ಮಾಡಿದ್ದ ಪ್ರಕರಣವು (Head Constable Murder Case) ಇಂದು ನಡೆದ ವಿಧಾನ ಪರಿಷತ್ ಕಲಾಪದಲ್ಲಿ ಪ್ರಸ್ತಾಪವಾಯಿತು. ಈ ವೇಳೆ ಪ್ರಕರಣದ ಬಗ್ಗೆ ಶಂಕೆ ವ್ಯಕ್ತಪಡಿಸಿದ ಬಿಜೆಪಿ ಸದಸ್ಯರು, ನ್ಯಾಯಾಂಗ ತನಿಖೆಗೆ ಆಗ್ರಹಿಸಿದ್ದು, ಇದು ಸಾಧ್ಯವಿಲ್ಲ ಎಂದು ಗೃಹಸಚಿವ ಡಾ.ಜಿ. ಪರಮೇಶ್ವರ (Dr. G. Parameshwara) ಹೇಳಿದ್ದಾರೆ.

ಹೆಡ್​ ಕಾನ್​ಸ್ಟೇಬಲ್ ಹತ್ಯೆ ಪ್ರಕರಣದ ಬಗ್ಗೆ ಪರಿಷತ್​ ಕಲಾಪದಲ್ಲಿ ಮಾತನಾಡಿದ ಗೃಹ ಸಚಿವ ಪರಮೇಶ್ವರ, ಮರಳು ಮಾಫಿಯಾ ತಡೆಯಲು ಹೋದ ಪೋಲಿಸ್ ಪೇದೆ ಮೇಲೆ ಟ್ರಾಕ್ಟರ್ ಹತ್ತಿಸಿ ಕೊಲೆ ಮಾಡಿದ್ದರು. ವಿಚಾರಣೆಗೆ ಟ್ರಾಕ್ಟರ್ ಮಾಲೀಕ ಸಾಯಿಬಣ್ಣ ಕರ್ಜಗಿ ಕರೆತರಲು ಹೋದಾಗ ಪೊಲೀಸರ ಮೇಲೆ ಹಲ್ಲೆ ಮಾಡಲು ಮುಂದಾದರು. ಆಗ ಪೊಲೀಸರು ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದಾರೆ ಎಂದರು. ಆದರೆ ಗೃಹಸಚಿವರ ಉತ್ತರಕ್ಕೆ ತೃಪ್ತರಾಗದ ಬಿಜೆಪಿ ಸದಸ್ಯರು ಪ್ರಕರಣದ ಹಿಂದಿನ ಸಂಶಯವನ್ನು ಹೊರಹಾಕಿದರು.

ಇದನ್ನೂ ಓದಿ: PSI recruitment: ಶೀಘ್ರದಲ್ಲೇ 545 ಹುದ್ದೆಗಳ ಜೊತೆಗೆ 400 ಪಿಎಸ್ಐ ನೇಮಕಾತಿ – ಜಿ ಪರಮೇಶ್ವರ್

ಪೊಲೀಸರು ದುರುದ್ದೇಶದಿಂದ ಕರ್ಜಗಿ ಮೇಲೆ ಗುಂಡು ಹಾರಿಸಿದ್ದಾರೆ. ಸಿಬ್ಬಂದಿಯನ್ನು ಕೊಲೆ ಮಾಡಬೇಕಿದ್ದರೆ ಮುಂದಿನಿಂದ ಡಿಕ್ಕಿ ಹೊಡೆಸುತ್ತಿದ್ದರು. ಆದರೆ ಹೆಡ್​ ಕಾನ್ಸ್​ಟೇಬಲ್ ಟ್ರ್ಯಾಕ್ಟರ್​​ ಟ್ರೈಲರ್​ಗೆ ಸಿಲುಕಿ ಮೃತಪಟ್ಟಿದ್ದಾರೆ. ಟ್ರ್ಯಾಕ್ಟರ್​ ಚಾಲಕನನ್ನು ಬಿಟ್ಟು ಮಾಲೀಕ ಕರ್ಜಗಿ ಮೇಲೆ ಗುಂಡುಹಾರಿಸಿದ್ದಾರೆ. ಹೀಗಾಗಿ ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕೆಂದು ಬಿಜೆಪಿ ಸದಸ್ಯರು ಪಟ್ಟು ಹಿಡಿದರು. ಆದರೆ ನ್ಯಾಯಾಂಗ ತನಿಖೆ ಸಾಧ್ಯವಿಲ್ಲವೆಂದು ಗೃಹಸಚಿವರು ತಿಳಿಸಿದರು. ಇದನ್ನು ಖಂಡಿಸಿ ಸದನದ ಬಾವಿಗಿಳಿದ ಬಿಜೆಪಿ ಸದಸ್ಯರ ಧರಣಿ ನಡೆಸಿದರು.

ಏನಿದು ಪ್ರಕರಣ?

ತಾಲೂಕಿನ ಹಲ್ಲೂರ್ ಚೆಕ್​ಪೋಸ್ಟ್​ ಬಳಿ ಟ್ರ್ಯಾಕ್ಟರ್​ ಹತ್ತಿಸಿ ಹೆಡ್ ಕಾನ್​ಸ್ಟೇಬಲ್ ಮಯೂರ್ ಚೌಹಾನ್ ಅವರನ್ನು ಹತ್ಯೆ ಮಾಡಲಾಗಿತ್ತು. ಘಟನೆ ಸಂಬಂಧ ಚಾಲಕ ಸಿದ್ದಪ್ಪ ಮತ್ತು ಮಾಲೀಕ ಸಾಯಿಬಣ್ಣ ಕರ್ಜಗಿ ವಿರುದ್ಧ ಪ್ರಕರಣ ದಾಖಲಿಸಿ ಸಿದ್ದಪ್ಪನನ್ನು ಬಂಧಿಸಲಾಗಿತ್ತು. ತಲೆಮೆರೆಸಿಕೊಂಡಿದ್ದ ಸಾಯಿಬಣ್ಣನನ್ನು ನಂತರ ಬಂಧಿಸಿ ಕೊರೆದೊಯ್ಯುತ್ತಿದ್ದಾಗ ಜೇರಟಗಿ ಮಂದೇವಾಲ ಮಾರ್ಗ ಮಧ್ಯೆ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದನು. ಈ ವೇಳೆ ಆತ್ಮರಕ್ಷಣೆಗಾಗಿ ಆರೋಪಿ ಸಾಯಿಬಣ್ಣನ ಕಾಲಿಗೆ ಗುಂಡು ಹಾರಿಸಲಾಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ