PSI recruitment: ಶೀಘ್ರದಲ್ಲೇ 545 ಹುದ್ದೆಗಳ ಜೊತೆಗೆ 400 ಪಿಎಸ್ಐ ನೇಮಕಾತಿ – ಜಿ ಪರಮೇಶ್ವರ್
545 ಹುದ್ದೆಗಳ ಜೊತೆಗೆ 400 ಪಿಎಸ್ಐ ನೇಮಕ ಮಾಡಿಕೊಳ್ಳಬೇಕು. ಪೊಲೀಸ್ ಇಲಾಖೆಯಲ್ಲಿ ಸಬ್ ಇನ್ಸ್ಪೆಕ್ಟರ್ಗಳ ಕೊರತೆ ಇದೆ. ಆದಷ್ಟು ಬೇಗ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಪ್ರಯತ್ನ ಮಾಡುತ್ತೇವೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದರು.
ಬೆಂಗಳೂರು: 545 ಹುದ್ದೆಗಳ ಜೊತೆಗೆ 400 ಪಿಎಸ್ಐ ನೇಮಕ (PSI Recruitment) ಮಾಡಿಕೊಳ್ಳಬೇಕು. ಪೊಲೀಸ್ ಇಲಾಖೆಯಲ್ಲಿ ಸಬ್ಇನ್ಸ್ಪೆಕ್ಟರ್ಗಳ (Sub-Inspector) ಕೊರತೆ ಇದೆ. ಆದಷ್ಟು ಬೇಗ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಪ್ರಯತ್ನ ಮಾಡುತ್ತೇವೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ (G Parameshwara) ಹೇಳಿದರು. ಬೆಂಗಳೂರಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ 545 ಪಿಎಸ್ಐ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ನಡೆದ ಅಕ್ರಮವನ್ನು (PSI recruitment scam) ನ್ಯಾಯಾಂಗ ತನಿಖೆಗೆ ನೀಡುವ ವಿಚಾರವಾಗಿ ಮಾತನಾಡಿದ ಅವರು ಪ್ರಕರಣದ ತನಿಖೆ ಮುಂದುವರಿದಿದೆ. ಅಲ್ಲಿ ಯಾವ ಅನುಮಾನ ಬಂದಿಲ್ಲ ಎಂದರು.
ಪುನರ್ ಪರೀಕ್ಷೆ ಮಾಡಬೇಕೆಂದು ಹಿಂದಿನ ಸರ್ಕಾರ ಆದೇಶಿಸಿತ್ತು. ಸರ್ಕಾರದ ಆದೇಶಕ್ಕೆ ಕೋರ್ಟ್ನಿಂದ ತಡೆಯಾಜ್ಞೆ ತಂದಿದ್ದಾರೆ. ಹೈಕೋರ್ಟ್ನಿಂದ ನಿರ್ದೇಶನ ಬರಬೇಕು, ಸೂಚನೆ ಬರಬೇಕು. ಸರ್ಕಾರದ ಅಭಿಪ್ರಾಯವನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಲಾಗಿದೆ. ಕೋರ್ಟ್ ಏನು ತೀರ್ಪು ಕೊಡುತ್ತೆ ಎಂಬ ನಿರೀಕ್ಷೆಯಲ್ಲಿದ್ದೇವೆ. ಕೋರ್ಟ್ ತೀರ್ಪು ಬಂದ ಮೇಲೆ ಅದರ ಪ್ರಕಾರ ಕ್ರಮಕೈಗೊಳ್ಳುತ್ತೇವೆ ಎಂದರು.
ಇನ್ನು ಯುವಾ ಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು ಪ್ರಕರಣ ಸಂಬಂಧ ಈಗಾಗಲೇ ಆರೋಪಿಗಳನ್ನು ಬಂಧಿಸಲಾಗಿದೆ. ಪೊಲೀಸರು ಕೂಡ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಉಸ್ತುವಾರಿ ಸಚಿವರು ಹಸ್ತಕ್ಷೇಪ ಮಾಡಿಲ್ಲ, ಮಾಡೋದೂ ಇಲ್ಲ ಎಂದು ಸ್ಪಷ್ಟಪಡಿಸಿದರು.
ನಾಳೆ ಬೆಂಗಳೂರಿನಲ್ಲಿ ನಡೆಯುವ ವಿರೋಧ ಪಕ್ಷದ ನಾಯಕರ ಸಭೆ ವಿಚಾರವಾಗಿ ಮಾತನಾಡಿ ಕಳೆದ 9 ವರ್ಷಗಳಿಂದ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದೆ. ಬಿಜೆಪಿ ಆಡಳಿತದಲ್ಲಿ ಬಹಳಷ್ಟು ಅಭಿವೃದ್ಧಿ ಕೆಲಸ ಕುಂಠಿತವಾಗಿದೆ. ಎಲ್ಲಾ ರಾಜ್ಯಗಳಲ್ಲೂ ಭಯದ ವಾತಾವರಣ ಸೃಷ್ಟಿಯಾಗಿದೆ. ಏಕರೂಪ ನಾಗರಿಕ ಸಂಹಿತೆಯಿಂದ ಅಶಾಂತಿ ಮೂಡಿಸುತ್ತಿದೆ. ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ವಿಪಕ್ಷಗಳಾಗಿ ಪ್ರಯತ್ನ ಮಾಡುತ್ತಿದ್ದೇವೆ. ನಾಳಿನ ಸಭೆಯಲ್ಲಿ 20 ಪಕ್ಷಗಳ ಮುಖಂಡರು ಭಾಗಿಯಾಗುತ್ತಾರೆ. ನಮ್ಮ ದೃಷ್ಟಿಯಲ್ಲಿ ಇದು ಒಳ್ಳೆಯ ಬೆಳವಣಿಗೆ ಎಂದು ತಿಳಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:58 pm, Sun, 16 July 23