ಮೈಸೂರು: ನೆರೆಯ ಮಹಾರಾಷ್ಟ್ರದಲ್ಲಿ ಓಮಿಕ್ರಾನ್ (Omicron) ರೂಪಾಂತರಿ BQ.1 ತಳಿಯ ಮೊದಲ ಪ್ರಕರಣ ವರದಿಯಾಗಿದೆ. ಈ ಹಿನ್ನೆಲೆ ರಾಜ್ಯ ಆರೋಗ್ಯ ಇಲಾಖೆ ಕೆಲವು ವಿಚಾರಗಳ ಮೇಲೆ ಎಚ್ಚರಿಕೆ ವಹಿಸುತ್ತಿದೆ. ಎರಡು ದಿನಗಳ ಹಿಂದಷ್ಟೇ ಈ ಬಗ್ಗೆ ಆರೋಗ್ಯ ಸಚಿವ ಡಾ.ಸುಧಾಕರ್ ಟ್ವೀಟ್ ಮಾಡುವ ಮೂಲಕ ಸಲಹಾ ಪತ್ರವನ್ನು ಹಂಚಿಕೊಂಡದ್ದರು. ಸದ್ಯ ರಾಜ್ಯದಲ್ಲಿ ಮತ್ತೆ ಒಮಿಕ್ರಾನ್ ರೂಪಾಂತರಿ ಆತಂಕ ವಿಚಾರಕ್ಕೆ ಸಂಬಂಧಿಸಿ ಮೈಸೂರಿನಲ್ಲಿ ಆರೋಗ್ಯ ಸಚಿವ ಡಾ.ಸುಧಾಕರ್ ಮಾತನಾಡಿ ಜನತೆ ಮೂರನೇ ಡೋಸ್ ಹಾಕಿಸಿಕೊಳ್ಳಲು ಮನವಿ ಮಾಡಿದ್ದಾರೆ.
ಯಾವುದೇ ಆತಂಕವಿಲ್ಲ, ಅಗತ್ಯ ಮುನ್ನೆಚ್ಚರಿಕೆ ವಹಿಸಲಾಗಿದೆ. ರಾಜ್ಯದಲ್ಲಿ ಮಾಸ್ಕ್ ಕಡ್ಡಾಯ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ. ಮಹಾರಾಷ್ಟ್ರದಲ್ಲಿ ಈಗಾಗಲೇ ಒಂದು ಪ್ರಕರಣ ಪತ್ತೆಯಾಗಿದೆ. ಈ ಹಿನ್ನೆಲೆ ಗಡಿ ಜಿಲ್ಲೆಗಳಿಗೆ ಮಾರ್ಗಸೂಚಿ ಹೊರಡಿಸಲಾಗಿದೆ. ಕಟ್ಟೆಚ್ಚರ ವಹಿಸುವಂತೆ ಗಡಿ ಜಿಲ್ಲೆಯ ಡಿಸಿಗಳಿಗೆ ಸೂಚಿಸಲಾಗಿದೆ. ಅಮೆರಿಕಾದಲ್ಲಿ ಒಮಿಕ್ರಾನ್ ರೂಪಾಂತರಿ ಕೇಸ್ ಹೆಚ್ಚಾಗಿದೆ. ರಾಜ್ಯದ ಜನರು 3ನೇ ಡೋಸ್ ಪಡೆಯುವುದು ಒಳ್ಳೆಯದು ಎಂದರು. ಇದನ್ನೂ ಓದಿ: ಓಮಿಕ್ರಾನ್ ರೂಪಾಂತರಿ ತಳಿ ಪತ್ತೆ ಹಿನ್ನೆಲೆ: ಮುಂಜಾಗ್ರತಾ ಕ್ರಮವಾಗಿ ರಾಜ್ಯ ಆರೋಗ್ಯ ಇಲಾಖೆಯಿಂದ ಸಲಹಾ ಪತ್ರ ಬಿಡುಗಡೆ
ಇನ್ನು ಇದೇ ವೇಳೆ ಸಿದ್ದರಾಮಯ್ಯ ಏಕವಚನದಲ್ಲಿ ವಾಗ್ದಾಳಿ ನಡೆಸಿದ ವಿಚಾರಕ್ಕೆ ಸಚಿವ ಡಾ.ಸುಧಾಕರ್ ಪ್ರತಿಕ್ರಿಯಿಸಿದ್ದಾರೆ. ಸಿದ್ದರಾಮಯ್ಯ ಎಲ್ಲವನ್ನೂ ಕಲಿತಿದ್ದಾರೆ, ಬಹುವಚನ ಮಾತ್ರ ಕಲಿತಿಲ್ಲ. ಏಕವಚನದಲ್ಲಿ ಮಾತನಾಡುವುದರಲ್ಲಿ ಯಾವುದೇ ವಿಶೇಷತೆ ಇಲ್ಲ. ಕೆಲ ಜಿಲ್ಲೆಗಳಲ್ಲಿ JDS, ಕಾಂಗ್ರೆಸ್ಸನ್ನು ಸಮರ್ಥವಾಗಿ ಎದುರಿಸುತ್ತಿದ್ದೇನೆ. ಅದಕ್ಕಾಗಿ ನನ್ನನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಕಾಂಗ್ರೆಸ್ನಿಂದ ಬಿಜೆಪಿಗೆ ಬಂದ ಯಾರೂ ವಾಪಸ್ ಹೋಗುವುದಿಲ್ಲ. ಹೆಚ್.ವಿಶ್ವನಾಥ್ ಸಹ ಕಾಂಗ್ರೆಸ್ಗೆ ಹೋಗಲ್ಲ ಎಂದು ಭಾವಿಸಿದ್ದೇನೆ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಚುನಾವಣೆ ಹತ್ತಿರ ಬರುತ್ತಿದ್ದಂತೆ ಇಂತಹ ಯಾತ್ರೆಗಳು ಸಾಮಾನ್ಯ
ಡಿಕೆ ಶಿವಕುಮಾರ್, ಸಿದ್ದರಾಮಯ್ಯರಿಂದ ಉತ್ತರ, ದಕ್ಷಿಣ ಪಾದಯಾತ್ರೆ ವಿಚಾರಕ್ಕೆ ಸಂಬಂಧಿಸಿ ಸಚಿವ ಡಾ.ಸುಧಾಕರ್ ಟಾಂಗ್ ಕೊಟ್ಟಿದ್ದಾರೆ. ಅವರು ಯಾವಾಗಲೂ ನಾನೊಂದು ತೀರ ನೀನೊಂದು ತೀರ. ಹಾಗಾಗಿ ಒಬ್ಬರು ದಕ್ಷಿಣಕ್ಕೆ, ಮತ್ತೊಬ್ಬರು ಉತ್ತರಕ್ಕೆ ಹೊರಟಿದ್ದಾರೆ. ಚುನಾವಣೆ ಹತ್ತಿರ ಬರುತ್ತಿದ್ದಂತೆ ಇಂತಹ ಯಾತ್ರೆಗಳು ಸಾಮಾನ್ಯ. ನಾಲ್ಕೂವರೆ ವರ್ಷದಿಂದ ಕಾಂಗ್ರೆಸ್ಗೆ ಯಾವ ಸಮಸ್ಯೆ ಕಂಡಿಲ್ಲ. ಚುನಾವಣೆ ಹತ್ತಿರ ಬರುತ್ತಿದ್ದಂತೆ ಪಾದಯಾತ್ರೆ ಮಾಡುತ್ತಿದ್ದಾರೆ. ಜನರು ಎಲ್ಲರಿಗಿಂತ ಬುದ್ದಿವಂತರಿದ್ದಾರೆ. ಇವೆಲ್ಲವೂ ಅವರಿಗೆ ಅರ್ಥವಾಗಲಿದೆ ಎಂದು ಮೈಸೂರಿನಲ್ಲಿ ಆರೋಗ್ಯ ಇಲಾಖೆ ಸಚಿವ ಡಾ.ಸುಧಾಕರ್ ಕಿಡಿ ಕಾಡಿದ್ದಾರೆ.
ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 11:57 am, Thu, 27 October 22