ಓಲಾ, ಉಬರ್ಗೆ ಮೂಗುದಾರ: 2 ಕಿಮೀಗೆ 30 ರೂಪಾಯಿ ನಿಗದಿ, ಶೀಘ್ರ ಹೊಸ ದರಪಟ್ಟಿ
ಕರ್ನಾಟಕ ಸರ್ಕಾರವು ವಿಧಿಸಲಿರುವ ಹೊಸ ದರವು ಜಿಎಸ್ಟಿಯನ್ನೂ ಒಳಗೊಂಡಿರುತ್ತದೆ ಎಂದು ಮೂಲಗಳು ಹೇಳಿವೆ.
ಬೆಂಗಳೂರು: ಕರ್ನಾಟಕ ಸರ್ಕಾರವು ಓಲಾ (Ola) ಮತ್ತು ಉಬರ್ (Uber) ಕಂಪನಿಗಳನ್ನು ನಿಯಮಗಳ ಅಡಿಗೆ ತರುವ ಪ್ರಯತ್ನವನ್ನು ಮುಂದುವರಿಸಿದೆ. ಪೀಕ್ ಟೈಮ್ ಸೇರಿದಂತೆ ಹಲವು ನೆಪಗಳಲ್ಲಿ ಗ್ರಾಹಕರನ್ನು ಮತ್ತು ಚಾಲಕರನ್ನು ಸುಲಿಯುತ್ತಿದ್ದ ಕಂಪನಿಗಳಿಗೆ ಹೊಸದಾಗಿ ದರ ನಿಗದಿಪಡಿಸಲು ಸರ್ಕಾರವು ಮುಂದಾಗಿದೆ. ಇನ್ನೊಂದು ವಾರದಲ್ಲಿ ಹೊಸ ದರ ಪ್ರಕಟಗೊಳ್ಳಬಹುದು. ಈ ದರವು ಜಿಎಸ್ಟಿಯನ್ನೂ ಒಳಗೊಂಡಿರುತ್ತದೆ ಎಂದು ಮೂಲಗಳು ಹೇಳಿವೆ. ಪ್ರಸ್ತುತ 2 ಕಿಮೀಗೆ ₹ 30 ದರವನ್ನು ಸಾರಿಗೆ ಇಲಾಖೆ ನಿಗದಿಪಡಿಸಿದೆ. ಈ ಹಿಂದೆ ರಾಜ್ಯ ಸರ್ಕಾರವು ಎರಡೂ ಅಗ್ರಿಗೇಟರ್ ಆ್ಯಪ್ ಕಂಪನಿಗಳಿಗೆ ಹೊಸ ದರ ನಿಗದಿಪಡಿಸಲು 15 ದಿನಗಳ ಗಡುವು ನೀಡಿತ್ತು. ಗಡುವು ಸಮೀಪಿಸುತ್ತಿದ್ದಂತೆ ಇದೀಗ ಸರ್ಕಾರವೇ ಹೊಸ ದರ ನಿಗದಿಪಡಿಸಲು ಮುಂದಾಗಿದೆ.
ನಿಯಮ ಉಲ್ಲಂಘಿಸಿದ ಆಟೊ ಚಾಲಕರಿಗೆ ಬಿಸಿ ಮುಟ್ಟಿಸಿದ ಪೊಲೀಸರು
ಗ್ರಾಹಕರಿಂದ ಹೆಚ್ಚುವರಿ ದರ ವಸೂಲು ಮಾಡುವವರ ವಿರುದ್ಧದ ಕಾರ್ಯಾಚರಣೆಯನ್ನು ಬೆಂಗಳೂರು ಪೊಲೀಸರು ಮುಂದುವರಿಸಿದ್ದಾರೆ. ಮಫ್ತಿಯಲ್ಲಿ ಸಾಮಾನ್ಯ ಜನರಂತೆ ಆಟೊಗಳನ್ನು ಬಾಡಿಗೆಗೆ ಕರೆದ ಪೊಲೀಸರು ದುಬಾರಿ ಹಣ ಕೇಳಿದ ಚಾಲಕರು, ಬಾಡಿಗೆಗೆ ಬರಲು ನಿರಾಕರಿಸಿದವರಿಗೆ ದಂಡ ವಿಧಿಸಿದರು. ಈ ಕುರಿತು ಕೆ.ಆರ್.ಪುರಂ ಪೊಲೀಸರು ಟ್ವೀಟ್ ಮಾಡಿದ್ದು, ‘ನಿಯಮ ಉಲ್ಲಂಘನೆ ಮಾಡುವ ಆಟೊ ಚಾಲಕರ ವಿರುದ್ಧ ವಿಶೇಷ ಅಭಿಯಾನ ಮುಂದುವರಿಸಿದ್ದೇವೆ’ ಎಂದು ಸಾಮಾಜಿಕ ಜಾಲತಾಣದಲ್ಲಿ ಕೆ.ಆರ್.ಪುರಂ ಪೊಲೀಸರು ಹೇಳಿದ್ದಾರೆ.
ಕೆ.ಆರ್.ಪುರಂನಿಂದ ಫೀನಿಕ್ಸ್ ಮಾರ್ಕೆಟ್ ಸಿಟಿಗೆ ಮೀಟರ್ ಹಾಕಲು ಒಪ್ಪದ ಆಟೊ ಚಾಲಕರೊಬ್ಬರು ₹ 150 ಬಾಡಿಗೆ ದರ ಕೇಳಿದ್ದರು. ಆ ಚಾಲಕನಿಗೆ ಪೊಲೀಸರು ₹ 150 ದಂಡ ವಿಧಿಸಿದರು. ಈ ಘಟನೆಯನ್ನೂ ಪೊಲೀಸರು ಟ್ವೀಟ್ನಲ್ಲಿ ಹಂಚಿಕೊಂಡಿದ್ದಾರೆ.
Today also we have conducted a drive against auto drivers for their violations ( not wearing uniform, demanding excess fair and refuse to hire etc. pic.twitter.com/KFi1EKWyn2
— K.R.PURA TRAFFIC POLICE.BENGALURU. (@KRPURATRAFFIC) October 26, 2022
Published On - 9:55 am, Thu, 27 October 22