ಬೆಂಗಳೂರು: ಪ್ರತಿ ಬಾರಿ ಮಳೆ (heavy rain) ಯಾದಾಗಲೂ ಬೆಂಗಳೂರಿನಲ್ಲಿ ಸಮಸ್ಯೆಗಳ ಸರಣಿ ತಪ್ಪಿದ್ದಲ್ಲ. ಸ್ವಲ್ಪ ದಿನ ಕೊಂಚ ಬ್ರೇಕ್ ನೀಡಿದ್ದ ಮಳೆ ನಿನ್ನೆ ರಾತ್ರಿ ಮತ್ತೆ ಏಕಾಏಕಿ ಅಬ್ಬರಿಸಿದೆ. ಕೇವಲ 2 ಗಂಟೆ ಸುರಿದ ಭಾರೀ ಮಳೆಗೆ ಬೆಂಗಳೂರಿನ ಕೆಲವೆಡೆ ಜನಜೀವನ ತತ್ತರಿಸಿದೆ. ರಾಜ್ಯದ ಹಲವೆಡೆ ಹವಮಾನ ವೈಪರೀತ್ಯ ಕಾರಣದಿಂದ ಧಾರಾಕಾರ ವರ್ಷಧಾರೆಯಾದ ಪರಿಣಾಮ ರಾಜ್ಯದ ಒಳನಾಡು ಪ್ರದೇಶ, ದಕ್ಷಿಣ ಒಳನಾಡು ಸೇರಿದಂತೆ ಹಲವೆಡೆ ಮಳೆಯಾಗಿದೆ. ಸಿಲಿಕಾನ್ ಸಿಟಿಯಲ್ಲಿ ಟ್ರಿನಿಟಿ ಸರ್ಕಲ್, ಎಂ.ಜಿ ರಸ್ತೆ, ಮೆಜೆಸ್ಟಿಕ್, ಗಾಂಧಿನಗರ, ಜಯನಗರ, ಬಸವೇಶ್ವರ ವೃತ್ತ, ಶಿವಾನಂದ ಸರ್ಕಲ್, ವಸಂತ ನಗರ, ಕೆ.ಪಿ ಅಗ್ರಹಾರ, ಶೇಷಾದ್ರಿಪುರ, ಮಲ್ಲೇಶ್ವರದ ಸುತ್ತಮುತ್ತ ಧಾರಾಕಾರ ಗಾಳಿ ಮಳೆಯಾಗಿದೆ. ಜನರ ವೀಕೆಂಡ್ ಸುತ್ತಾಟಕ್ಕೆ ಬ್ರೇಕ್ ಬಿದ್ದಿದ್ದು ನಗರದ ಹಲವರಿಗೆ ಕಚೇರಿಯಿಂದ ಮನೆಗೆ ಹೋಗುವ ಸಮಯಕ್ಕೇ ಮಳೆ ಪ್ರಾರಂಭವಾಗಿದ್ದರಿಂದ ಟ್ರಾಫಿಕ್ನಲ್ಲಿ ಸಿಲುಕಿ ಪೇಚಾಡುವಂತಾಗಿತ್ತು.
ಇದನ್ನೂ ಓದಿ: Karnataka Rain: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ; ಕರ್ನಾಟಕದ ಈ ಜಿಲ್ಲೆಗಳಲ್ಲಿ ಇಂದಿನಿಂದ 3 ದಿನ ಮಳೆ
ರಾಜಕಾಲುವೆಯ ನೀರು ಉಕ್ಕಿ ತಗ್ಗು ಪ್ರದೇಶದ ಮನೆಗಳಿಗೆ ನುಗ್ಗಿದ ಘಟನೆ ಕುಮಾರಸ್ವಾಮಿ ಲೇಔಟ್ ನ 15E ಬಸ್ ನಿಲ್ಧಾಣದ ಹಿಂಭಾಗದಲ್ಲಿ ನಡೆದಿದೆ. ಚರಂಡಿ ನೀರು ಸುಮಾರು 50ಕ್ಕೂ ಅಧಿಕ ಮನೆಗಳಿಗೆ ನುಗ್ಗಿದ ಪರಿಣಾಮ ಮನೆ ಮಾಲೀಕರು ಪರಿತಪಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ತಗ್ಗು ಪ್ರದೇಶದಲ್ಲಿ ನೀರಿನ ಹರಿವು ಅಧಿಕವಾದ ಪರಿಣಾಮ ಒತ್ತಡಕ್ಕೆ ರಾಜಕಾಲುವೆ ನೀರಿನ ಹೊರಹರಿವು ಹೆಚ್ಚಾಗಿ ಮನೆಗಳಿಗೆ ನುಗ್ಗಿ ಅವಾಂತರ ಸೃಷ್ಟಿಸಿತ್ತು. ನೀರಿನ ಜೊತೆ ಚರಂಡಿಯ ಕೆಸರು ಸಹ ಏರಿಯಾದೆಲ್ಲೆಡೆ ವ್ಯಾಪಿಸಿತ್ತು. ಪ್ರತೀ ಬಾರಿಯೂ ಅದೇ ಮಳೆ ಹಾನಿ, ಅದೇ ಪರಿಹಾರದಿಂದ ಬೇಸರವಾಗಿದ್ದು, ಇನ್ನಾದರೂ ಶಾಶ್ವತ ಪರಿಹಾರ ಕೊಡುವಂತೆ ಸ್ಥಳಿಯರು ಆಕ್ರೋಶ ಹೊರಹಾಕಿದ್ದಾರೆ.
ಪ್ರತೀ ಬಾರಿಯಂತೆ ಈ ಬಾರಿಯೂ ಸಹ ಮಳೆ ನಿಂತ ಮೇಲೆ ನೀರು ತೆರವುಗೊಳಿಸಿ, ಏರಿಯಾ ಸ್ವಚ್ಚಗೊಳಿಸಲು ಅಧಿಕಾರಿಗಳು ದೌಡಾಯಿಸಿದ್ದಾರೆ. ಒಟ್ನಲ್ಲಿ ಜನ ಹತಾಶೆಯಿಂದಲೇ ಆಕ್ರೋಶ ಹೊರಹಾಕುತ್ತಿದ್ದು, ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಗಾಢ ನಿದ್ದೆಯಿಂದ ಎದ್ದು ಆಗಬೇಕಿರುವ ಕೆಲಸದ ಕಡೆ ಗಮನ ಹರಿಸಬೇಕಿದೆ.
ಮಳೆಯಿಂದಾಗಿ ಧರೆಗುರುಳಿದ ಬೃಹತ್ ಮರ
ಇನ್ನೂ ಭಾರಿ ಮಳೆಯಿಂದಾಗಿ ಯಶವಂತಪುರ ಸರ್ಕಲ್ ಬಳಿ ಭಾರಿ ಗಾತ್ರದ ಮರ ಧರೆಗುರಿಳಿದ್ದು, ಅದೃಷ್ಟವಶಾತ್ ಭಾರಿ ಅನಾಹುತ ತಪ್ಪಿದೆ. ವಾಹನಗಳ ಸಂಖ್ಯೆ ಕಡಿಮೆ ಹಿನ್ನೆಲೆ ಅನಾಹುತ ತಪ್ಪಿದ್ದು, ಗೊರಗುಂಟೆಪಾಳ್ಯದಿಂದ ಯಶವಂತಪುರ ಸರ್ಕಲ್ ಕಡೆ ಬರುವ ರಸ್ತೆಯಲ್ಲಿ ಬೃಹತ್ ಗಾತ್ರದ ಮರ ಧರೆಗುರುಳಿರುವೆ. ಮಹಾಲಕ್ಷ್ಮಿ ಲೇಔಟ್ ತಗ್ಗುಪ್ರದೇಶದ 10 ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಮನೆಯಲ್ಲಿದ್ದ ಬಹುತೇಕ ವಸ್ತುಗಳೆಲ್ಲ ಮುಳುಗಡೆಯಾಗಿದ್ದು, ಮಳೆ ನೀರು ಹೊರಹಾಕಲು ನಿವಾಸಿಗಳು ಪರದಾಡುತ್ತಿದ್ದಾರೆ.
ವಿನಯ್ ಕುಮಾರ್ ಟಿವಿ9 ಬೆಂಗಳೂರು
Published On - 7:11 am, Sun, 31 July 22