ಬೆಂಗಳೂರು: ನಗರದಲ್ಲಿ ಗುರುವಾರ ಸಂಜೆ ಧಾರಾಕಾರ ಮಳೆ ಸುರಿದಿದ್ದು ಮೈಸೂರು ರಸ್ತೆ, ಬನಶಂಕರಿ, ಚಂದ್ರಾಲೇಔಟ್, ವಿಜಯನಗರ, ಮಾಗಡಿ ರಸ್ತೆ, ಸುಂಕದಕಟ್ಟೆ, ಯಶವಂತಪುರ, ನಾಗರಬಾವಿ, ಅನ್ನಪೂರ್ಣೇಶ್ವರಿನಗರ, ಉತ್ತರಹಳ್ಳಿ, ಕೆಂಗೇರಿ, ಶಾಂತಿನಗರ, ಆಸ್ಟಿನ್ಟೌನ್ ಸೇರಿದಂತೆ ಹಲವು ಬಡಾವಣೆಗಳ ತಗ್ಗು ಪ್ರದೇಶಗಳು ಜಲಾವೃತವಾಗಿವೆ. ನೀರು ನಿಂತ ರಸ್ತೆಗಳಲ್ಲಿ ಸಂಚರಿಸಲು ಸಾಧ್ಯವಾಗದೆ ಜನರು ಪರದಾಡುವಂತಾಯಿತು. ವ್ಯಾಪಕ ಮಳೆ ಸುರಿದ ಕಾರಣ ಬಹುತೇಕ ತಗ್ಗು ಪ್ರದೇಶದ ರಸ್ತೆಗಳು ಜಲಾವೃತಗೊಂಡವು. ಧಾರಾಕಾರ ಸುರಿಯುತ್ತಿರುವ ಮಳೆ ನೀರಿನಿಂದ ರಸ್ತೆಗಳು ಕೆರೆಯಂತಾದವು.
ಬೆಂಗಳೂರು ನಗರದಲ್ಲಿ ಸುರಿದ ಭಾರೀ ಮಳೆಗೆ, ಜೆಜೆಆರ್ ನಗರದಲ್ಲಿ ಬೈಕ್ ಕಾರ್ಗಳು ಜಲಾವೃತಗೊಂಡಿದೆ. ಮಾಗಡಿ ರಸ್ತೆಯ ಟೋಲ್ ಗೇಟ್ ಬಳಿ ಬಿಬಿಎಂಪಿಯ ಪೈಪ್‌ಲೈನ್ ಕಾಮಗಾರಿಯಿಂದ ಎಡವಟ್ಟು ಉಂಟಾಗಿದೆ. ಮಳೆಯಿಂದಾಗಿ 2 ಕಾರುಗಳು ರಸ್ತೆ ಗುಂಡಿಯಲ್ಲಿ ಸಿಲುಕಿದೆ. ಪೈಪ್‌ಲೈನ್ ಕಾಮಗಾರಿಯಿಂದ ನಿರ್ಮಾಣವಾಗಿದ್ದ ಗುಂಡಿಯಲ್ಲಿ ಕಾರುಗಳು ಸಿಲುಕಿವೆ. ಸಂಚಾರಿ ಪೊಲೀಸರು ಕ್ರೇನ್ ಮೂಲಕ ಕಾರು ಮೇಲೆತ್ತಿದ್ದಾರೆ. ಮಾಗಡಿ ರಸ್ತೆಯ ಟೋಲ್ ಗೇಟ್ ಬಳಿ ಘಟನೆ ನಡೆದಿದೆ. ಬೆಂಗಳೂರಿನ ಜೆ.ಜೆ. ನಗರದಲ್ಲಿ ಮಳೆಯಿಂದ ಅವಾಂತರ ಸೃಷ್ಟಿಯಾಗಿದೆ. ಮಳೆಯಿಂದ ಜೆ.ಜೆ.ನಗರ ರಸ್ತೆಗಳು ತುಂಬಿ ಹರಿಯುತ್ತಿವೆ. ಮನೆ ಮುಂದೆ ನಿಲ್ಲಿಸಿದ್ದ ಹಲವು ಕಾರು, ಬೈಕ್ ಮುಳುಗಡೆ ಆಗಿವೆ. ಇನ್ನೂ ನಾಲ್ಕು ದಿನ ಮಳೆ ಮುಂದುವರೆಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಕರ್ನಾಟಕದಲ್ಲಿ ಹಿಂಗಾರು ಮಳೆ ಶುರುವಾಗಿದ್ದು, ಇಂದಿನಿಂದ ನವೆಂಬರ್ 6ರವರೆಗೂ ಮಳೆ ಹೆಚ್ಚಾಗಲಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿರುವುದರಿಂದ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಇಂದಿನಿಂದ ನವೆಂಬರ್ 6ರವರೆಗೂ ಗುಡುಗು ಸಹಿತ ಮಳೆಯಾಗಲಿದೆ. ಕರಾವಳಿ, ದಕ್ಷಿಣ ಒಳನಾಡು, ಮಲೆನಾಡಿನಲ್ಲಿ ನಾಳೆ ಹಳದಿ ಅಲರ್ಟ್ ಘೋಷಿಸಲಾಗಿದ್ದು, ಇಂದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಒಳನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳಲ್ಲಿ ಇಂದು ಹಳದಿ ಅಲರ್ಟ್ ಘೋಷಿಸಲಾಗಿದೆ. ಇಂದು ಮಲೆನಾಡಿನ ಜಿಲ್ಲೆಗಳ ಜತೆಗೆ ದಕ್ಷಿಣ ಒಳನಾಡಿನ ಚಾಮರಾಜನಗರ, ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಮಂಡ್ಯ, ಚಿಕ್ಕಬಳ್ಳಾಪುರ, ಮೈಸೂರು, ರಾಮನಗರ ಜಿಲ್ಲೆಗಳಲ್ಲೂ ಹಳದಿ ಅಲರ್ಟ್ ಘೋಷಿಸಲಾಗಿದೆ.
ದಕ್ಷಿಣ ಕೊಂಕಣ ಕರಾವಳಿ, ಗೋವಾ ಮತ್ತು ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ಗುಡುಗು ಮತ್ತು ಮಿಂಚು ಸಹಿತ ಚದುರಿದ ಮಳೆಯಾಗುವ ಸಾಧ್ಯತೆಯಿದೆ. ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಇಂದಿನಿಂದ 3 ದಿನ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕನ್ಯಾಕುಮಾರಿ ಮತ್ತು ಶ್ರೀಲಂಕಾ ಕರಾವಳಿಯ ಉತ್ತರ ಭಾಗದಲ್ಲಿ ಕಡಿಮೆ ಒತ್ತಡದ ಪ್ರದೇಶವಿದೆ. ದಕ್ಷಿಣ ಒಳನಾಡು ಮತ್ತು ತಮಿಳುನಾಡಿನ ಕರಾವಳಿ, ಪುದುಚೇರಿ ಮತ್ತು ಕೇರಳದ ಪ್ರತ್ಯೇಕ ಸ್ಥಳಗಳಲ್ಲಿ ಇಂದು ಭಾರೀ ಮಳೆಯಾಗಲಿದೆ. ಕರ್ನಾಟಕ, ಲಕ್ಷದ್ವೀಪ, ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲೂ ಮಳೆಯಾಗುವ ಸಾಧ್ಯತೆಯಿದೆ.
ಇದನ್ನೂ ಓದಿ: Karnataka Weather Today: ಬೆಂಗಳೂರು, ಕೊಡಗು ಸೇರಿ ಹಲವೆಡೆ ಇಂದು ಮಳೆ ಹೆಚ್ಚಳ; ಕರಾವಳಿಯಲ್ಲಿ ಆರೆಂಜ್ ಅಲರ್ಟ್ ಘೋಷಣೆ
ಇದನ್ನೂ ಓದಿ: Mysore Chamundi hill: ನಿರಂತರ ಮಳೆ -ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಮತ್ತೆ ರಸ್ತೆ ಕುಸಿತ
Published On - 9:28 pm, Thu, 4 November 21