ಬೆಂಗಳೂರು ನ.08: ರಾಜ್ಯದಲ್ಲಿ ಮುಂಗಾರು ಕೈಕೊಟ್ಟಿದ್ದು, ಹಿಂಗಾರು ಕೈ ಹಿಡಿಯುವ ಆಶಾಭಾವನೆ ಮೂಡಿದೆ. ಅರಬ್ಬಿ ಸಮುದ್ರದಲ್ಲಿ ಸುಳಿಗಾಳಿ ಸೃಷ್ಟಿಯಿಂದಾಗಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bengaluru) ನವೆಂಬರ್ 6ರ ರಾತ್ರಿ ಭಾರಿ ಮಳೆಯಾಗಿತ್ತು. ಸೋಮವಾರದ ಮಳೆ (Rain) 2015 ರ ನಂತರ ನವೆಂಬರ್ ತಿಂಗಳಲ್ಲಿ ಸುರಿದ ಭಾರಿ ಮಳೆಯಾಗಿದೆ. ಭಾರತೀಯ ಹವಾಮಾನ ಇಲಾಖೆ (IMD)ಯ ಅಂಕಿಅಂಶಗಳ ಪ್ರಕಾರ ನಗರದಲ್ಲಿ 7 ಸೆಂ.ಮೀ ಗಿಂತ ಹೆಚ್ಚು ಮಳೆಯಾಗಿತ್ತು. ಮಂಗಳವಾರ ಕೂಡ ನಗರದಲ್ಲಿ ಧಾರಾಕಾರ ಮಳೆಯಾಗಿದ್ದು, ಸಂಜೆಯವರೆಗೆ 26.1 ಮಿಮೀ ಮಳೆಯಾಗಿದೆ.
ಯಲಹಂಕ-ಜಕ್ಕೂರು ಪ್ರದೇಶದಲ್ಲಿ ಅತಿ ಹೆಚ್ಚು ಮಳೆ ದಾಖಲಾಗಿದೆ. ಯಲಹಂಕ-ಜಕ್ಕೂರು ಪ್ರದೇಶದಲ್ಲಿ 164 ಮಿಮೀ ಮಳೆಯಾಗಿತ್ತು. ಹಂಪಿನಗರದಲ್ಲಿ 101.5 ಮಿಮೀ, ನಾಗಪುರ ಬಡಾವಣೆಯಲ್ಲಿ 82.50 ಮಿಮೀ, ನಂದಿನಿ ಲೇಔಟ್ನಲ್ಲಿ 70.60 ಮಿ.ಮೀ, ನಾಗೇನಹಳ್ಳಿ 71 ಮಿಮೀ, ರಾಜಮಹಲ್ ಗುಟ್ಟಹಳ್ಳಿ ವ್ಯಾಪ್ತಿಯಲ್ಲಿ 69.50 ಮಿಮೀ, ಮೈಸೂರು ರಸ್ತೆಯ ಗಾಳಿ ಆಂಜನೇಯ ದೇವಸ್ಥಾನ ವ್ಯಾಪ್ತಿಯಲ್ಲಿ 68 ಮಿಮೀ, ಕೊಟ್ಟಿಗೆಪಾಳ್ಯ 64 ಮಿಮೀ, ಅಗ್ರಹಾರದಾಸರಹಳ್ಳಿ 64 ಮಿಮೀ, ಕಮ್ಮನಹಳ್ಳಿ (ಈಸ್ಟ್ ಜೋನ್) 6.95 ಮಿಮೀ, ಮಾರುತಿ ಮಂದಿರ ವಾರ್ಡ್ 6.8 ಮಿಮೀ, ಪೀಣ್ಯ ಇಂಡಸ್ಟ್ರಿಯಲ್ ಏರಿಯಾ 6.75 ಮಿಮೀ ಮಳೆಯಾಗಿತ್ತು.
ಇದನ್ನೂ ಓದಿ: ಬೆಂಗಳೂರು ಮಳೆಗೆ ಬಾನಂಗಳದಲ್ಲಿ ಬಣ್ಣ ಬಣ್ಣದ ಚಿತ್ತಾರ: ಸಾಮಾಜಿಕ ಜಾಲತಾಣದಲ್ಲಿ ಫೋಟೋಸ್ ವೈರಲ್
ರಾತ್ರಿಯ ಮಳೆಯು ದಾಖಲೆಯಲ್ಲದಿದ್ದರೂ, 2015 ರಿಂದ ಹಿಂದಿನ ಅತ್ಯಂತ ಆರ್ದ್ರ ನವೆಂಬರ್ ದಿನದ ಸಮೀಪಕ್ಕೆ ಬಂದಿದೆ. “2015ರ ನವೆಂಬರ್ 4 ರಂದು ನಗರದಲ್ಲಿ 9 ಮಿಮೀ ಮಳೆಯಾಗಿತ್ತು. ಇದಾದ ಬಳಿಕ ಇದೇ ಸಲ ನವೆಂಬರ್ ತಿಂಗಳಲ್ಲಿ 7 ಮಿಮೀ ಮಳೆಯಾಗಿದೆ ಎಂದು ಐಎಂಡಿ ಬೆಂಗಳೂರಿನ ಹಿರಿಯ ವಿಜ್ಞಾನಿ ಎ ಪ್ರಸಾದ್ ಹೇಳಿದರು.
ಸೋಮವಾರ ರಾತ್ರಿ ಸುರಿದ ಭಾರಿ ಮಳೆಗೆ ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ನಗರದ ಹಲವೆಡೆ ಅಂಡರ್‌ಪಾಸ್‌ಗಳು ಜಲಾವೃತಗೊಂಡಿದ್ದವು. ಈ ಅವಧಿಯಲ್ಲಿ ಸಾಮಾನ್ಯವಾಗಿ 10 ಮಿಮೀ ಮಳೆ ಬೀಳುವ ಬೆಂಗಳೂರು ನಗರದ ಐದು ತಾಲ್ಲೂಕುಗಳಲ್ಲಿ ಸೋಮವಾರ 211.4 ಮಿಮೀ ಮಳೆಯಾಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ