
ಬೆಂಗಳೂರು, ಆಗಸ್ಟ್ 18: ಬೆಂಗಳೂರಿನ ಸಂಚಾರ ದಟ್ಟಣೆ (Bengaluru Traffic) ಕಡಿಮೆ ಮಾಡುವ ನಿಟ್ಟಿನಲ್ಲಿ ಬಹಳ ಮಹತ್ವದ್ದೆನ್ನಲಾದ ಹೆಬ್ಬಾಳ ವಿಸ್ತರಿತ ಫ್ಲೈಓವರ್ ಉದ್ಘಾಟನೆ (Hebbal Flyover loop Inauguration) ಸೋಮವಾರ ನೆರವೇರಿತು. ಈ ವಿಸ್ತರಿತ ಮೇಲ್ಸೇತುವೆಯಿಂದ ಈ ಭಾಗದಲ್ಲಿ ಟ್ರಾಫಿಕ್ ಶೇ 30 ರಷ್ಟು ಕಡಿಮೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಆದಾಗ್ಯೂ, ಹೆಬ್ಬಾಳ ಫ್ಲೈಓವರ್ನ ಹೊಸ ಲೂಪ್ ಲೋಕಾರ್ಪಣೆ ದಿನವೇ ಸಾವಿರಾರು ಮಂದಿ ಟ್ರಾಫಿಕ್ ಜಾಮ್ನಲ್ಲಿ ಸಿಲುಕಿ ಪರದಾಡುವಂತಾಗಿದೆ. ಅನೇಕರು ವಿಮಾನ ನಿಲ್ದಾಣಕ್ಕೆ ತೆರಳುವ ದಾರಿಯಲ್ಲಿ ಟ್ರಾಫಿಕ್ ಜಾಮ್ನಲ್ಲಿ ಸಿಲುಕಿಕೊಂಡು ವಿಮಾನ ಮಿಸ್ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ದೀರ್ಘ ವಾರಾಂತ್ಯದ ರಜೆಯ ನಂತರ ಜನರು ಹೆಚ್ಚಿನ ಸಂಖ್ಯೆಯಲ್ಲಿ ನಗರಕ್ಕೆ ಬರುವ ಹಾಗೂ ನಿರ್ಗಮಿಸುವ ದಿನವೇ ಉದ್ಘಾಟನೆ ಕಾರ್ಯಕ್ರಮ ಹಮ್ಮಿಕೊಂಡು ಸಂಚಾರಕ್ಕೆ ಅಡ್ಡಿ ಮಾಡಿದ್ದಕ್ಕೆ ರಾಜ್ಯ ಸರ್ಕಾರದ ವಿರುದ್ಧ ಸಂಸದ ತೇಜಸ್ವಿ ಸೂರ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಇಂದು ಬೆಳಿಗ್ಗೆ ಹೆಬ್ಬಾಳ ರಸ್ತೆಯ ಪ್ರಯಾಣ ಬಹಳ ತ್ರಾಸದಾಯಕವಾಗಿತ್ತು. ಸಂಸತ್ತಿನ ಕಲಾಪದಲ್ಲಿ ಭಾಗವಹಿಸಲು ದೆಹಲಿಗೆ ಹೋಗುವಾಗ, ಸಾವಿರಾರು ಜನರೊಂದಿಗೆ ನಾನೂ ಸಹ ಹೆಬ್ಬಾಳ ಜಂಕ್ಷನ್‌ನಲ್ಲಿ ಸುಮಾರು 50 ನಿಮಿಷಗಳ ಕಾಲ ಸಿಲುಕಿಕೊಂಡೆ ಮತ್ತು ವಿಮಾನ ತಪ್ಪಿಸಿಕೊಳ್ಳುವುದರಲ್ಲಿದ್ದೆ’ ಎಂದು ತೇಜಸ್ವಿ ಸೂರ್ಯ ಎಕ್ಸ್ ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ.
ರಾಜ್ಯ ಸರ್ಕಾರವು ಸೋಮವಾರ ಬೆಳಗ್ಗಿನ ಪೀಕ್ ಅವರ್ ಅನ್ನೇ ಉದ್ಘಾಟನೆಗೆ ನಿಗದಿ ಮಾಡಿಕೊಂಡಿದ್ದು ಸಮಸ್ಯೆಗೆ ಕಾರಣವಾಯಿತು. ದೀರ್ಘ ವಾರಾಂತ್ಯ ಮುಗಿದ ಸಂದರ್ಭದಲ್ಲೇ ಕಾರ್ಯಕ್ರಮ ಇರಿಸಲಾಗಿತ್ತು. ಇದರ ಬದಲು ಕನಿಷ್ಠ ಅಡಚಣೆಯಾಗುವಂಥ ಸಮಯವನ್ನು ಆಯ್ಕೆ ಮಾಡಿಕೊಳ್ಳಬಹುದಿತ್ತು ಎಂದು ತೇಜಸ್ವಿ ಸೂರ್ಯ ಅಭಿಪ್ರಾಯಪಟ್ಟಿದ್ದಾರೆ.
Hebbal Road was a nightmare this morning. On my way to Delhi this morning to attend Parliament, I was stuck at Hebbal Junction for nearly 50 minutes along with thousands of people and almost missed my flight.
All because the state government chose a Monday morning peak hours as…
— Tejasvi Surya (@Tejasvi_Surya) August 18, 2025
ಪ್ರಯಾಣಿಕರ ಸೌಕರ್ಯವನ್ನು ಎಂದಿಗೂ ಕೊನೆಯಲ್ಲಿ ಪರಿಗಣಿಸಲಾಗುತ್ತದೆ. ಯೋಜನೆಯ ವಿನ್ಯಾಸದಲ್ಲಾಗಲಿ ಅಥವಾ ಉದ್ಘಾಟನೆ ಸಮಯ ನಿಗದಿಯಲ್ಲಾಗಲೀ ಸಾರ್ವಜನಿಕರ ಬಗ್ಗೆ ಯಾರೂ ಗಮನಿಸುವುದೇ ಇಲ್ಲ. ಇವುಗಳನ್ನೆಲ್ಲ ಯಾವಾಗಲೂ ರಾಜಕಾರಣಿಗಳಿಂದ ರಾಜಕಾರಣಿಗಳಿಗಾಗಿಯೇ ಮಾಡಲಾಗುತ್ತದೆ ಎಂದು ಸೂರ್ಯ ಟೀಕಿಸಿದ್ದಾರೆ.
ಸುಮಾರು 80 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಈ 700 ಮೀಟರ್ ಉದ್ದದ ವಿಸ್ತರಿತ ಲೂಪ್, ಹೆಬ್ಬಾಳ ಜಂಕ್ಷನ್‌ನಲ್ಲಿ ಸಂಚಾರ ದಟ್ಟಣೆಯನ್ನು ಕನಿಷ್ಠ ಶೇ 30 ರಷ್ಟು ಕಡಿಮೆ ಮಾಡುವ ಗುರಿ ಹೊಂದಿದೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ), ಐಟಿ ಕಾರಿಡಾರ್‌ಗಳು ಮತ್ತು ಉತ್ತರ ಉಪನಗರಗಳಿಗೆ ಹೋಗುವ ಮತ್ತು ಅಲ್ಲಿಂದ ಹೊರಡುವ ಸಂಚಾರಕ್ಕೆ ಪ್ರಮುಖವಾದ ಈ ಜಂಕ್ಷನ್ನ ಸಂಚಾರ ದಟ್ಟಣೆಯು ಬೆಂಗಳೂರಿನ ವಾಹನ ಚಾಲಕರಿಗೆ ದಿನನಿತ್ಯ ಹತಾಶೆಯನ್ನುಂಟುಮಾಡುತ್ತಿತ್ತು.
ಇದನ್ನೂ ಓದಿ: ಡಿಕೆ ಶಿವಕುಮಾರ್ಗೆ ರಮ್ಯಾ ಪ್ರೀತಿಯ ಅಪ್ಪುಗೆ: ವಿಡಿಯೋ ನೋಡಿ
ಏತನ್ಮಧ್ಯೆ, ಮುಂದಿನ 3 ತಿಂಗಳಲ್ಲಿ ಹೆಬ್ಬಾಳ ಫ್ಲೈಓವರ್ನಲ್ಲಿ ಮತ್ತೊಂದು ಲೂಪ್ ಕಾರ್ಯಾಚರಣೆಗೆ ಸಿದ್ಧವಾಗಲಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಘೋಷಣೆ ಮಾಡಿದ್ದಾರೆ.
Published On - 2:14 pm, Mon, 18 August 25