
ಬೆಂಗಳೂರು, ನವೆಂಬರ್ 16: ಹೆಬ್ಬಾಳದಲ್ಲಿ ಪ್ರಸ್ತಾಪಿತ 2.22 ಕಿ.ಮೀ. ಉದ್ದದ ಸಣ್ಣ ಸುರಂಗ ಮಾರ್ಗ ಯೋಜನೆಯಿಂದ 92 ಪ್ರಭೇದಗಳ 1,128 ಮರಗಳ ಮೇಲೆ ಪರಿಣಾಮ ಬೀರಲಿದೆ ಎಂದು ಸ್ವತಂತ್ರ ಅಧ್ಯಯನ ವರದಿಯೊಂದು ತಿಳಿಸಿದೆ. ಇವುಗಳಲ್ಲಿ ಬೆಳೆದು ನಿಂತ ಆಲ, ಅತ್ತಿ ಮತ್ತು ರೇನ್ ಟ್ರೀಗಳೂ ಸೇರಿವೆ. ಹೆಚ್ಚಿನ ಮರಗಳನ್ನು ಸ್ಥಳಾಂತರಿಸುವುದರಿಂದ ಅವುಗಳ ಪರಿಸರ ಪ್ರಯೋಜನ ಹಾಗೂ ಬೆಂಗಳೂರಿನಲ್ಲಿ ಪರಿಸರದ ಮೇಲಿನ ಪ್ರಭಾವ ಹಾಗೆಯೇ ಉಳಿಯುವುದು ಸಾಧ್ಯವೇ ಎಂದು ವರದಿ ಪ್ರಶ್ನಿಸಿದೆ.
ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಸಂಶೋಧಕರಾದ ಹರಿಣಿ ನಾಗೇಂದ್ರ, ಸೀಮಾ ಮುಂಡೋಲಿ, ಪ್ರಾಚಿ ಗುಪ್ತಾ ಮತ್ತು ವಿವೇಕ್ ಜಿ. ಈ ವರದಿ ಸಿದ್ಧಪಡಿಸಿದ್ದಾರೆ. ಅವರು 2026ರ ಅಕ್ಟೋಬರ್ 21ರಂದು ಸ್ಥಳ ಪರಿಶೀಲನೆ ನಡೆಸಿದ್ದು, ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಪ್ರಕಟಿಸಿದ್ದ ಮರಗಳ ಪಟ್ಟಿಯನ್ನೂ ಪರಿಶೀಲಿಸಿ ದೃಢಪಡಿಸಿಕೊಂಡಿದ್ದಾರೆ.
ತೆರವಿಗೆ ಗುರುತಿಸಲಾದ ಮರಗಳಲ್ಲಿ ಕಾಗದ ಮಲ್ಬೆರಿ (ಪೇಪರ್ ಮಲ್ಬೆರಿ) ಅತಿ ಹೆಚ್ಚು, ಅಂದರೆ 173 ಇವೆ. ನಂತರದ ಸ್ಥಾನಗಳಲ್ಲಿ ಹೊಂಗೆ (67), ಸೀಮೆ ಹುಣಸೆ (63), ಗುಲ್‌ಮೊಹರ್ (57), ಹಳದಿ ಕಾಪರ್‌ಪಾಡ್ (45) ಮತ್ತು ರೇನ್ ಟ್ರೀ (30) ಇವೆ. ವಿಶಾಲವಾಗಿ ಹರಡಿದ ನೆರಳು ನೀಡುವ ರೇನ್ ಟ್ರೀಗಳು ನಗರದ ಉಷ್ಣತೆ ತಗ್ಗಿಸಲು ನೆರವಾಗುತ್ತವೆ ಎಂದು ವರದಿ ಹೇಳಿದೆ.
ಯೋಜನೆ ಜಾರಿ ಮಾಡುತ್ತಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ), 1,128 ಮರಗಳ ತೆರವಿಗೆ ಅನುಮತಿ ಕೋರಿದೆ. ಇವುಗಳಲ್ಲಿ ಹೆಚ್ಚಿನವನ್ನು ಸ್ಥಳಾಂತರಿಸಲಾಗುವುದು ಎಂದು ಹೇಳಿದೆ. ಆದರೆ ಸ್ಥಳಾಂತರದ ವೇಳೆ ಮರಗಳ ಕೊಂಬೆಗಳನ್ನು ತೀವ್ರವಾಗಿ ಕತ್ತರಿಸಿ ಮೂಲ ಗಾತ್ರದ ಒಂದು ಭಾಗಕ್ಕೆ ಇಳಿಸಬೇಕಾಗುತ್ತದೆ. ಇದರಿಂದ ಅವುಗಳ ಪರಿಸರ ಪ್ರಯೋಜನ ಕಡಿಮೆಯಾಗುತ್ತದೆ. ಸ್ಥಳಾಂತರದ ನಂತರ ಅವು ಬದುಕುಳಿಯುವ ಬಗ್ಗೆಯೂ ಖಚಿತತೆ ಇಲ್ಲ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.
ಮರಗಳ ತೆರವಿಗೆ ವಿರೋಧ ಹೆಚ್ಚುತ್ತಿರುವ ಸಂದರ್ಭದಲ್ಲೇ ಈ ವರದಿ ಪ್ರಕಟವಾಗಿದೆ. ಈ ಪ್ರಸ್ತಾವದ ವಿರುದ್ಧ ಜಿಬಿಎಗೆ 1,500ಕ್ಕೂ ಹೆಚ್ಚು ಆಕ್ಷೇಪಣೆಗಳು ಸಲ್ಲಿಕೆಯಾಗಿವೆ.
ಹೆಬ್ಬಾಳದ ಆಸುಪಾಸಿನಲ್ಲಿ 199 ಪಕ್ಷಿ ಪ್ರಭೇದಗಳು ದಾಖಲಾಗಿವೆ ಎಂದು ವರದಿ ತಿಳಿಸಿದೆ. ಇವುಗಳಲ್ಲಿ ಅಳಿವಿನಂಚಿನ ಅಪಾಯದಲ್ಲಿರುವ ದೊಡ್ಡ ಚುಕ್ಕೆ ಹದ್ದು, ಚುಕ್ಕೆ ಕೊಕ್ಕಿನ ಪೆಲಿಕನ್, ಜೊತೆಗೆ ಭಾರತೀಯ ನವಿಲು ಮತ್ತು ನೀಲಕಂಠ ಪಕ್ಷಿಗಳು ಸೇರಿವೆ. ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿಕೆವಿಕೆ), ಕೃಷಿ ವಿಶ್ವವಿದ್ಯಾಲಯ ಮತ್ತು ಹೆಬ್ಬಾಳ ಕೆರೆ ಸುತ್ತಲಿನ ಹಸಿರು ಪ್ರದೇಶಗಳು ಉತ್ತರ ಬೆಂಗಳೂರಿನ ಮುಖ್ಯ ಪರಿಸರ ಜಾಲವಾಗಿವೆ ಎಂದು ಸಂಶೋಧಕರು ಹೇಳಿದ್ದಾರೆ.
ಇಲ್ಲಿ ಇನ್ನಷ್ಟು ಹಳೆಯ ಮರಗಳು ಕಳೆದುಹೋದರೆ ತಾಪಮಾನ ಏರಿಕೆ, ಮಾಲಿನ್ಯ ಮತ್ತು ಜೀವವೈವಿಧ್ಯ ನಷ್ಟ ಹೆಚ್ಚಬಹುದು ಎಂದು ಅವರು ಎಚ್ಚರಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ