AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹಾತ್ಮ ಗಾಂಧೀಜಿಯೂ ಉಳಿದುಕೊಂಡಿದ್ದ ಕುಮಾರಕೃಪಾ ಗೆಸ್ಟ್ ಹೌಸ್! 160 ವರ್ಷಗಳ ಕಟ್ಟಡಕ್ಕೆ ಆ ಹೆಸರು ಬಂದಿದ್ಹೇಗೆ? ಇಲ್ಲಿದೆ ಮಾಹಿತಿ

ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಅವರು ವಾಸ್ತವ್ಯ ಹೂಡಿದ್ದ ಐತಿಹಾಸಿಕ ಕುಮಾರಕೃಪಾ ಗೆಸ್ಟ್ ಹೌಸ್ ಈಗ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಅಧಿಕೃತ ನಿವಾಸವಾಗಿದ್ದು, ‘ಗಂಗಾ’ ಎಂದು ಮರುನಮಾಕರಣವಾಗಿದೆ. ಈ ಕಟ್ಟಡಕ್ಕೆ ಕುಮಾರಕೃಪಾ ಎಂಬ ಹೆಸರು ಬಂದಿದ್ದರ ಹಿಂದಿನ ವಿಶೇಷ ಕಾರಣವೇನು? ಕಟ್ಟಡದ ಇತಿಹಾಸ ಮತ್ತು ಗಂಗಾ ನಿವಾಸವಾಗಿ ಬದಲಾದ ವಿವರ ಇಲ್ಲಿದೆ.

ಮಹಾತ್ಮ ಗಾಂಧೀಜಿಯೂ ಉಳಿದುಕೊಂಡಿದ್ದ ಕುಮಾರಕೃಪಾ ಗೆಸ್ಟ್ ಹೌಸ್! 160 ವರ್ಷಗಳ ಕಟ್ಟಡಕ್ಕೆ ಆ ಹೆಸರು ಬಂದಿದ್ಹೇಗೆ? ಇಲ್ಲಿದೆ ಮಾಹಿತಿ
ಕುಮಾರಕೃಪಾ ಗೆಸ್ಟ್ ಹೌಸ್ (ಈಗಿನ ಗಂಗಾ ನಿವಾಸ)
ರಾಚಪ್ಪಾಜಿ ನಾಯ್ಕ್
| Edited By: |

Updated on: Nov 16, 2026 | 8:42 AM

Share

ಬೆಂಗಳೂರು, ನವೆಂಬರ್ 16: ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ನೂತನ ಅಧಿಕೃತ ನಿವಾಸವಾಗಿ ಬದಲಾಗಿರುವ ಹಾಗೂ ಮರುನಾಮಕರಣ ಮಾಡಿರುವ ‘ಗಂಗಾ’ ಕಟ್ಟಡಕ್ಕೆ ಸುದೀರ್ಘ ಇತಿಹಾಸವಿದೆ. ಈ ಹಿಂದೆ ಕುಮಾರಕೃಪಾ ಗೆಸ್ಟ್ ಹೌಸ್ ಎಂದು ಗುರುತಿಸಿಕೊಂಡಿದ್ದ ಈ ಪಾರಂಪರಿಕ ಕಟ್ಟಡದಲ್ಲಿ ಮಹಾತ್ಮ ಗಾಂಧೀಜಿ ಸೇರಿದಂತೆ ಹಲವು ಗಣ್ಯರು ವಾಸ್ತವ್ಯ ಹೂಡಿದ್ದರು. ಸುಮಾರು 160 ವರ್ಷಗಳ ಇತಿಹಾಸ ಹೊಂದಿರುವ ಈ ಕಟ್ಟಡಕ್ಕೆ ಕುಮಾರಕೃಪಾ ಎಂಬ ಹೆಸರು ಬಂದಿದ್ದರ ಹಿಂದೆಯೂ ಒಂದು ವಿಶೇಷ ಕಾರಣವಿದೆ.

ಕುಮಾರಕೃಪಾ ಹೆಸರು ಬಂದಿದ್ಹೇಗೆ?

1880ರಲ್ಲಿ ಕಲ್ಲಿನಿಂದ ಎರಡು ಅಂತಸ್ತುಗಳಲ್ಲಿ ನಿರ್ಮಿಸಲಾದ ಈ ಕಟ್ಟಡ ಮೂಲತಃ ಮೈಸೂರು ದಿವಾನರಾಗಿದ್ದ ಸರ್ ಕೆ. ಶೇಷಾದ್ರಿ ಅಯ್ಯರ್ ಅವರ ಖಾಸಗಿ ನಿವಾಸವಾಗಿತ್ತು. ಅವರು ಕುಮಾರಸ್ವಾಮಿ ದೇವರ ಭಕ್ತರಾಗಿದ್ದ ಕಾರಣ ತಮ್ಮ ನಿವಾಸಕ್ಕೆ ‘ಕುಮಾರಕೃಪಾ’ ಎಂದು ಹೆಸರಿಟ್ಟಿದ್ದರು. ಬಳಿಕ 1918ರಲ್ಲಿ ಈ ಕಟ್ಟಡ ಸರ್ಕಾರದ ಸ್ವಾಧೀನಕ್ಕೆ ಬಂದಿತು. ತದನಂತರ ಕರ್ನಾಟಕ ಸರ್ಕಾರದ ರಾಜ್ಯ ಅತಿಥಿಗೃಹವಾಗಿ ಬಳಕೆಯಾಗತೊಡಗಿತು.

1927ರಲ್ಲಿ ಮಹಾತ್ಮ ಗಾಂಧೀಜಿ ಉಳಿದುಕೊಂಡಿದ್ದ ಅತಿಥಿಗೃಹ

ಐತಿಹಾಸಿಕ ಮಹತ್ವ ಹೊಂದಿರುವ ಈ ಕಟ್ಟಡದಲ್ಲಿ 1927ರಲ್ಲಿ ಮಹಾತ್ಮ ಗಾಂಧೀಜಿ ಬೆಂಗಳೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ವಾಸ್ತವ್ಯ ಹೂಡಿದ್ದರು. ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಅವರೂ ಇದೇ ಕಟ್ಟಡದಲ್ಲಿ ವಾಸವಿದ್ದರು. ಒಟ್ಟು 12 ಕೊಠಡಿಗಳು, ವಿಶಾಲವಾದ ಹಾಲ್ ಹಾಗೂ ಅಡುಗೆಮನೆಯನ್ನು ಹೊಂದಿರುವ ಈ ಕಟ್ಟಡ ಹಲವು ವರ್ಷಗಳ ಕಾಲ ಸರ್ಕಾರಿ ಅತಿಥಿಗೃಹವಾಗಿ ಗುರುತಿಸಿಕೊಂಡಿತ್ತು.

2026ರಲ್ಲಿ ಲೋಕೋಪಯೋಗಿ ಇಲಾಖೆಯು ಹಳೆಯ ಕಟ್ಟಡವನ್ನು ನವೀಕರಿಸಿದ್ದು, ಇದೀಗ ಅದಕ್ಕೆ ‘ಗಂಗಾ’ ಎಂದು ಮರುನಾಮಕರಣ ಮಾಡಲಾಗಿದೆ. ಇಂದು (ನವೆಂಬರ್ 16ರಂದು) ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕುಟುಂಬಸ್ಥರು ಹಾಗೂ ಆಪ್ತರೊಂದಿಗೆ ಶಾಸ್ತ್ರೋಕ್ತವಾಗಿ ಗೃಹಪ್ರವೇಶ ಮಾಡುವ ಮೂಲಕ ಈ ಕಟ್ಟಡವನ್ನು ತಮ್ಮ ಅಧಿಕೃತ ಸರ್ಕಾರಿ ನಿವಾಸವನ್ನಾಗಿ ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ಮರುನಾಮಕರಣ ಮಾಡಿ ನಾಮಫಲಕ ಹಾಕಲಾಗಿದೆ.

ಗಂಗಾ ನಿವಾಸದ ಕೊಠಡಿಗಳಿಗೆ ನದಿಗಳ ಹೆಸರು

ನವೀಕೃತ ಗಂಗಾ ನಿವಾಸದಲ್ಲಿನ ಕೊಠಡಿಗಳಿಗೆ ಹೇಮಾವತಿ, ಶಾಲ್ಮಲ ಮತ್ತು ತುಂಗಭದ್ರಾ ಸೇರಿದಂತೆ ನದಿಗಳ ಹೆಸರುಗಳನ್ನು ಇಡಲಾಗಿದೆ. ಕಾವೇರಿ ನಿವಾಸ ಮತ್ತು ಕೃಷ್ಣ ಕಚೇರಿಗಳ ಮಾದರಿಯಲ್ಲೇ ಈ ಕಟ್ಟಡಕ್ಕೂ ನದಿಯ ಹೆಸರನ್ನು ಆಯ್ಕೆ ಮಾಡಲಾಗಿದೆ.

ಇದನ್ನೂ ಓದಿ: ಕುಮಾರಕೃಪಾ ಗೆಸ್ಟ್ ಹೌಸ್​ಗೆ ಗಂಗಾ ಎಂದು ಮರುನಾಮಕರಣ: ಇನ್ನು ಇದುವೇ ಸಿಎಂ ಅಧಿಕೃತ ನಿವಾಸ

ಈ ಹಿಂದೆ ಸದಾಶಿವನಗರದ ನಿವಾಸದಿಂದ ನಿರ್ವಹಿಸುತ್ತಿದ್ದ ಹಲವು ಸಾರ್ವಜನಿಕ ಕೆಲಸಗಳನ್ನು ಇನ್ನು ಮುಂದೆ ಗಂಗಾ ನಿವಾಸದಿಂದಲೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಿರ್ವಹಿಸಲಿದ್ದಾರೆ. ಹೀಗೆ, ಮಹಾತ್ಮ ಗಾಂಧೀಜಿ ಸೇರಿದಂತೆ ಗಣ್ಯರು ತಂಗಿದ್ದ ಐತಿಹಾಸಿಕ ಕುಮಾರಕೃಪಾ ಗೆಸ್ಟ್ ಹೌಸ್ ಈಗ ಮುಖ್ಯಮಂತ್ರಿಗಳ ಅಧಿಕೃತ ನಿವಾಸವಾಗಿ ಹೊಸ ಗುರುತನ್ನು ಪಡೆದುಕೊಂಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ರಾಚಪ್ಪಾಜಿ ನಾಯ್ಕ್
ರಾಚಪ್ಪಾಜಿ ನಾಯ್ಕ್

ರಾಚಪ್ಪಾಜಿ ನಾಯ್ಕ್ ಅವರು ಮೂಲತಃ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನವರು. ಕಳೆದ 2 ವರ್ಷದಿಂದ ಟಿವಿ9 ಕನ್ನಡದ ಬೆಂಗಳೂರು ಕ್ರೈಂ ಬ್ಯೂರೊ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ನಡೆದ ಪ್ರಮುಖ ಅಪಾರಧ ವಿಷಯಗಳ ಮೇಲಿನ ವರದಿ ಮಾಡಿದ ಅನುಭವವಿದೆ. ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ನಡೆದ ಪ್ರಮುಖ ಬೆಳವಣಿಗೆಯ ವರದಿ ಮಾಡಿದ್ದಾರೆ.

Read More