ಬೆಂಗಳೂರಿನ ಕೆಲ ಹೋಟೆಲ್, ರೆಸ್ಟೋರೆಂಟ್​ಗಳಲ್ಲಿ ನಿಮಗೆ ಗೊತ್ತಾಗದಂತೆ ವಸೂಲಿ ಮಾಡ್ತಾರೆ ಸೇವಾ ಶುಲ್ಕ, ಜಿಎಸ್​ಟಿ!

ನಾವು ಸೇವಾ ಶುಲ್ಕ ಪಾವತಿಸಿಲ್ಲ, ತಿಂಡಿಗಷ್ಟೇ ಹಣ ಕೊಟ್ಟು ಬಂದೆವು ಎದು ಹೋಟೆಲ್​​ನಿಂದ ಹೊರಡುವ ಮುನ್ನ ನೀವು ಈ ವಿಚಾರದ ಬಗ್ಗೆ ಯೋಚಿಸಲೇಬೇಕು! ಬೆಂಗಳೂರಿನ ಹಲವು ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳು ಈಗ ಸೇವಾ ಶುಲ್ಕ, ಜಿಎಸ್​​ಟಿಯನ್ನು ಬಿಲ್​ನಲ್ಲಿ ನಮೂದಿಸುತ್ತಿಲ್ಲ ನಿಜ. ಹಾಗೆಂದ ಮಾತ್ರಕ್ಕೆ ನೀವು ಆ ಹಣವನ್ನು ಅವರಿಗೆ ಪಾವತಿಯೇ ಮಾಡಿಲ್ಲವೆಂದು ಅರ್ಥವಲ್ಲ. ಯಾಕೆ ಗೊತ್ತೇ? ತಿಳಿಯಲು ಮುಂದೆ ಓದಿ.

ಬೆಂಗಳೂರಿನ ಕೆಲ ಹೋಟೆಲ್, ರೆಸ್ಟೋರೆಂಟ್​ಗಳಲ್ಲಿ ನಿಮಗೆ ಗೊತ್ತಾಗದಂತೆ ವಸೂಲಿ ಮಾಡ್ತಾರೆ ಸೇವಾ ಶುಲ್ಕ, ಜಿಎಸ್​ಟಿ!
ಸಾಂದರ್ಭಿಕ ಚಿತ್ರ

Updated on: Sep 25, 2025 | 9:41 AM

ಬೆಂಗಳೂರು, ಸೆಪ್ಟೆಂಬರ್ 25: ಜಿಎಸ್​​ಟಿ ದರ (GST) ಇಳಿಕೆ ಹಾಗೂ ಕೆಲವು ಆಹಾರ ವಸ್ತುಗಳಿಗೆ ಜಿಎಸ್​ಟಿಯಿಂದ ವಿನಾಯಿತಿ ನೀಡಲಾಗಿದ್ದು, ಸೆಪ್ಟೆಂಬರ್ 22 ರಿಂದ ಜಾರಿಗೆ ಬಂದಿದೆ. ಹೀಗಾಗಿ ಹೋಟೆಲ್, ರೆಸ್ಟೋರೆಂಟ್​ಗಳಲ್ಲಿ ಕೆಲವು ಆಹಾರ ಪದಾರ್ಥಗಳಿಗೆ ಜಿಎಸ್​​ಟಿ ವಿಧಿಸುವಂತಿಲ್ಲ. ಮತ್ತೊಂದೆಡೆ, ಗ್ರಾಹಕರಿಂದ ಬಲವಂತವಾಗಿ ಸೇವಾ ಶುಲ್ಕ (Service Charges) ಹಾಗೂ ಜಿಎಸ್​ಟಿ ಮೊತ್ತ ಸಂಗ್ರಹಿಸುವಂತಿಲ್ಲ ಎಂಬ ದೆಹಲಿ ಹೈಕೋರ್ಟ್ ಆದೇಶವೂ ಇದೆ. ಹೀಗಾಗಿ ಬೆಂಗಳೂರಿನ ಹೋಟೆಲ್, ರೆಸ್ಟೋರೆಂಟ್ ಹಾಗೂ ದರ್ಶಿನಿಗಳು ಬಿಲ್​ನಲ್ಲಿ ಸೇವಾ ಶುಲ್ಕ ವಿಧಿಸುತ್ತಿಲ್ಲ. ಆದಾಗ್ಯೂ, ನಿಮ್ಮ ಜೇಬಿನಿಂದ ಸೇವಾ ಶುಲ್ಕ ಪಾವತಿಯಾಗುತ್ತಲೇ ಇದೆ ಎಂಬುದು ನಿಮಗೆ ಗೊತ್ತೇ? ಬೆಂಗಳೂರಿನ ಅನೇಕ ಹೋಟೆಲ್, ರೆಸ್ಟೋರೆಂಟ್​​ಗಳ ಬಿಲ್​ನಲ್ಲಿ ಸೇವಾ ಶುಲ್ಕ ನಮೂದಿಸದೇ ಅದರ ಬದಲು ಆ ಮೊತ್ತವನ್ನು ಆಹಾರ ವಸ್ತುಗಳ ದರದ ಜತೆ ಸೇರಿಸಿ ವಸೂಲಿ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

ಗ್ರಾಹಕರು, ತಾವು ಸೇವಾ ಶುಲ್ಕ ಪಾವತಿಸಬೇಕಾಗಿಲ್ಲ ಎಂದು ಭಾವಿಸುವ ಅನೇಕ ರೆಸ್ಟೋರೆಂಟ್‌ಗಳು ಮತ್ತು ಹೋಟೆಲ್‌ಗಳು ಮೆನು ಬೆಲೆಗಳಲ್ಲಿ ಸೇವಾ ಶುಲ್ಕದ ಮೊತ್ತವನ್ನು ಸೇರಿಸುತ್ತಾರೆ. ಬಿಲ್‌ನಲ್ಲಿ ಪ್ರತ್ಯೇಕವಾಗಿ ಸೇವಾ ಶುಲ್ಕ ನಮೂದಿಸುವುದಿಲ್ಲ. ಇದರಿಂದ ಗ್ರಾಹಕರು ತಾವು ಸೇವಾ ಶುಲ್ಕ ಪಾವತಿಸುತ್ತಿಲ್ಲ ಎಂದೇ ನಂಬುತ್ತಾರೆ.

ಇದೀಗ ಜಿಎಸ್​​ಟಿ ಸ್ಲ್ಯಾಬ್​ಗಳ ಬದಲಾವಣೆ ನಂತರ ಗ್ರಾಹಕರು ತೆರಿಗೆ ಪಾವತಿಸುವುದಕ್ಕೂ ಹಿಂದೇಟು ಹಾಕುತ್ತಾರೆ. ತಕರಾರು ತೆಗೆಯುತ್ತಾರೆ. ಹೀಗಾಗಿ ಮೆನುವಿನ ಜತೆಗೇ ಆ ಮೊತ್ತ ಸೇರಿಸುತ್ತಿದ್ದೇವೆ ಎಂದು ಹೋಟೆಲ್ ಸಿಬ್ಬಂದಿಯೊಬ್ಬರು ತಿಳಿಸಿರುವುದಾಗಿ ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ. ಬೆಲೆ ಹೆಚ್ಚಿರುವುದರಿಂದ ಅನೇಕರು ಸೇವಾ ಶುಲ್ಕವನ್ನು ಪಾವತಿಸಲು ನಿರಾಕರಿಸುತ್ತಾರೆ. ಆದ್ದರಿಂದ, ನಾವು ಮೆನುವಿನ ಜತೆಗೇ ಆ ಮೊತ್ತವನ್ನು ಸೇರಿಸಿದಾಗ ಜನರು ಸೇವಾ ಶುಲ್ಕದಲ್ಲಿ ಉಳಿತಾಯ ಮಾಡುತ್ತಿದ್ದೇವೆಂದು ಭಾವಿಸಿ ಹೆಚ್ಚು ಖರ್ಚು ಮಾಡುತ್ತಾರೆ ಎಂದು ವೈಟ್‌ಫೀಲ್ಡ್‌ನಲ್ಲಿರುವ ಒಂದು ರೆಸ್ಟೋರೆಂಟ್ ಸಿಬ್ಬಂದಿ ತಿಳಿಸಿರುವುದಾಗಿ ವರದಿ ಉಲ್ಲೇಖಿಸಿದೆ.

ಇದನ್ನೂ ಓದಿ: ಜಿಎಸ್​ಟಿ ಪರಿಷ್ಕರಣೆ; ಈ ವಸ್ತುಗಳಿಗೆ ನೀವಿನ್ನು ತೆರಿಗೆಯೇ ಪಾವತಿಸಬೇಕಿಲ್ಲ!

ಜಿಎಸ್‌ಟಿ ಸುಧಾರಣೆಯ ನಂತರ ಎಂಜಿ ರಸ್ತೆಯಲ್ಲಿರುವ ಜನಪ್ರಿಯ ರೆಸ್ಟೋರೆಂಟ್ ಮೆನು ಬೆಲೆಗಳನ್ನು ಹೆಚ್ಚಿಸಿರುವ ಬಗ್ಗೆಯೂ ವರದಿ ಉಲ್ಲೇಖಿಸಿದೆ. ಈ ರೆಸ್ಟೋರೆಂಟ್​ನಲ್ಲಿ ಆಹಾರದ ಮೇಲಿನ ಜಿಎಸ್‌ಟಿಯನ್ನು ಶೇ 18 ರಿಂದ ಶೇ 5 ಕ್ಕೆ ಇಳಿಸಲಾಗಿದೆ. ಈ ಹಿಂದೆ ಬಿಲ್‌ನಲ್ಲಿ ಸೇವಾ ಶುಲ್ಕವಾಗಿ ಶೇ 10ರ ದರ ವಿಧಿಸಲಾಗುತ್ತಿತ್ತು. ಇದೀಗ ಅದನ್ನು ಸ್ಥಗಿತಗೊಳಿಸಿ ಮೆನು ಬೆಲೆಯನ್ನು ಶೇ 15 ರಷ್ಟು ಹೆಚ್ಚಿಸಲಾಗಿದೆ.

ಹೀಗೆ ಜಿಎಸ್​​ಟಿ ವಿನಾಯಿತಿ, ಸೇವಾ ಶುಲ್ಕ ಕಡ್ಡಾಯವಿಲ್ಲ ಎಂಬ ಕಾನೂನು ಒಂಡೆದೆಯಾದರೆ, ಅದನ್ನು ಪಾಲಿಸುವ ಹೆಸರಿನಲ್ಲಿಯೇ ಹೋಟೆಲ್​, ರೆಸ್ಟೋರೆಂಟ್​ಗಳು ಗ್ರಾಹಕರ ಜೇಬಿಗೆ ಕತ್ತರಿ ಹಾಕುವುದು ಮಾತ್ರ ನಿಂತಿಲ್ಲ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ