ಸುಪ್ರೀಂ ಕೋರ್ಟ್ ಆದೇಶದಂತೆ ಎಫ್ಐಆರ್ (FIR) ದಾಖಲಿಸಿದ 24 ಗಂಟೆಗಳಲ್ಲಿ ಅದನ್ನು ತನ್ನ ವೆಬ್ ಸೈಟ್ ನಲ್ಲಿ ಪ್ರಕಟಿಸದ ಕರ್ನಾಟಕ ಲೋಕಾಯುಕ್ತ ಸಂಸ್ಥೆಗೆ (karnataka lokayukta) ಹೈಕೋರ್ಟ್ (karnataka high court) ನೋಟಿಸ್ ಜಾರಿ ಮಾಡಿದೆ. ಸುಪ್ರೀಂ ಕೋರ್ಟ್ (supreme court) ಆದೇಶ ಪಾಲಿಸುತ್ತಿಲ್ಲ ಎಂದು ವಕೀಲ ಎಸ್. ಉಮಾಪತಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸುತ್ತಿರುವ ಮುಖ್ಯ ನ್ಯಾಯಮೂರ್ತಿ ಪಿ.ಬಿ ವರಾಳೆ ಹಾಗೂ ನ್ಯಾ. ಅಶೋಕ್ ಎಸ್. ಕಿಣಗಿ ಅವರಿದ್ದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.
ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿಗಳ ವಿಭಾಗೀಯ ಪೀಠ ಪ್ರತಿವಾದಿಗಳಾದ ರಾಜ್ಯ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಎಸಿಎಸ್ ಹಾಗೂ ಲೋಕಾಯುಕ್ತ ಎಡಿಜಿಪಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ನವೆಂಬರ್ 9ಕ್ಕೆ ಮುಂದೂಡಿದೆ.
ಅರ್ಜಿದಾರರ ಮನವಿ ಏನು?:
ಎಫ್‌ಐಆರ್ ದಾಖಲಾದ 24 ಗಂಟೆಗಳಲ್ಲಿ ಅದನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು ಎಂದು ಸುಪ್ರೀಂಕೋರ್ಟ್ 2016 ರಲ್ಲೇ ಆದೇಶಿಸಿದೆ. ಈ ಆದೇಶವನ್ನು ಲೋಕಾಯುಕ್ತ ಪೊಲೀಸರು ಪಾಲಿಸುತ್ತಿಲ್ಲ. ಸುಪ್ರೀಂಕೋರ್ಟ್ ಆದೇಶವನ್ನು ಸಿಬಿಐ ಸೇರಿದಂತೆ ಉಳಿದ ತನಿಖಾ ಸಂಸ್ಥೆಗಳು ಪಾಲಿಸುತ್ತಿವೆ. 2018ರಲ್ಲಿ ಎಸಿಬಿ ಮತ್ತು ಬಿಎಂಟಿಎಫ್ ಗಳು ಸುಪ್ರೀಂಕೋರ್ಟ್ ಆದೇಶವನ್ನು ಕಡ್ಡಾಯವಾಗಿ ಪಾಲಿಸುವಂತೆ ಹೈಕೋರ್ಟ್ ನಿರ್ದೇಶಿಸಿದೆ. ಅದರಂತೆ ಎಸಿಬಿ ಕೂಡ ನಿಯಮ ಪಾಲಿಸುತ್ತ ಬಂದಿತ್ತು.
2022ರ ಆಗಸ್ಟ್ 11ರಂದು ಹೈಕೋರ್ಟ್ ಎಸಿಬಿಯನ್ನು ರದ್ದುಗೊಳಿಸಿ ಲೋಕಾಯುಕ್ತದ ಅಧಿಕಾರವನ್ನು ಮರುಸ್ಥಾಪಿಸಿದೆ. ಆದರೆ, ಎಫ್‌ಐಆರ್ ದಾಖಲಾದ 24 ಗಂಟೆಗಳಲ್ಲಿ ಅದನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು ಎಂಬ ಸುಪ್ರೀಂಕೋರ್ಟ್ ಆದೇಶವನ್ನು ಲೋಕಾಯುಕ್ತ ಪೊಲೀಸರು ಪಾಲನೆ ಮಾಡುತ್ತಿಲ್ಲ.
ಎಫ್ಐಆರ್ ನ್ನು ವೆಬ್ ಸೈಟ್ ನಲ್ಲಿ ಪ್ರಕಟಿಸದೇ ಇರುವುದರಿಂದ ದೂರುದಾರರು, ಕಕ್ಷಿದಾರರು ಮತ್ತು ವಕೀಲರಿಗೆ ತೊಂದರೆಯಾಗುತ್ತಿದೆ. ಈ ಕುರಿತಂತೆ ತಾವು 2022ರ ಸೆಪ್ಟೆಂಬರ್ 16ರಂದು ಮನವಿ ನೀಡಿದ್ದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ.
ಆದ್ದರಿಂದ ಲೋಕಾಯುಕ್ತದಲ್ಲಿ ದಾಖಲಾಗುವ ಎಫ್ಐಆರ್ ಗಳನ್ನು ಸುಪ್ರೀಂಕೋರ್ಟ್ ಆದೇಶದಂತೆ 24 ಗಂಟೆಯಲ್ಲಿ ವೆಬ್ ಸೈಟ್ ನಲ್ಲಿ ಪ್ರಕಟಿಸಲು ನಿರ್ದೇಶಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ ಎಂದು lawtime.in ಜಾಲತಾಣ ವರದಿ ಮಾಡಿದೆ.