Kuruba community: ಬಿಜೆಪಿಯಲ್ಲಿ ಸಂಘ ನಿಷ್ಠ ಕುರುಬರನ್ನು ಕಡೆಗಣಿಸಿ, ವಲಸಿಗರಿಗೆ ಮಣೆ ಹಾಕ್ತಿದ್ದಾರಾ ಸಿಎಂ ಬೊಮ್ಮಾಯಿ?
ಇದೆಲ್ಲದರ ನಡುವೆ ಸಿಎಂ ಬೊಮ್ಮಾಯಿ ಕುರುಬ ಸಮುದಾಯದವರೇ ಆಗಿರುವ ಸಚಿವರಾದ ಭೈರತಿ ಬಸವರಾಜ, ಎಂಟಿಬಿ ನಾಗರಾಜ್ ಮತ್ತು ವಿಧಾನ ಪರಿಷತ್ ಸದಸ್ಯ ಆರ್. ಶಂಕರ್ ಗೆ ಹೆಚ್ಚು ಪ್ರಾಧಾನ್ಯತೆ ಕೊಡುತ್ತಿದ್ದಾರೆ ಎಂಬ ಆತಂಕವೂ ಮೂಲ ಕುರುಬ ನಾಯಕರನ್ನು ಕಾಡುತ್ತಿದೆ. ಸಿಎಂ ಸಂಘ ನಿಷ್ಠರಿಗಿಂತ ವಲಸಿಗರಿಗೇ ಹೆಚ್ಚು ಮಣೆ ಹಾಕುತ್ತಿದ್ದಾರೆ ಎಂಬ ಭಾವನೆ ಪಕ್ಷದಲ್ಲಿನ ಮೂಲ ಕುರುಬ ನಾಯಕರಲ್ಲಿ ಮೂಡಲಾರಂಭಿಸಿದೆ.
ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ನೇತೃತ್ವದ ರಾಜ್ಯ ಸಚಿವ ಸಂಪುಟ ವಿಸ್ತರಣೆ (cabinet expansion politics) ಇವತ್ತು ಆಗುತ್ತದೆ, ನಾಳೆ ಆಗುತ್ತದೆ ಎಂಬ ಸ್ಪಷ್ಟತೆಯಿಲ್ಲದ ಚರ್ಚೆಯ ನಡುವೆ ಕುರುಬ ಸಮುದಾಯದ ಬಿಜೆಪಿ ನಾಯಕರ ಮಧ್ಯೆ (BJP kuruba community) ಸಿ ಎಂ ಬೊಮ್ಮಾಯಿ ವಿರುದ್ಧ ಸಣ್ಣದೊಂದು ಅಸಮಾಧಾನ ಟಿಸಿಲೊಡೆಯುತ್ತಿದೆ. ಅಷ್ಟಕ್ಕೂ ಈ ಅಸಮಾಧಾನ ಬೇರು ಬಿಡಲು ಕಾರಣವಾಗಿರುವುದು ಮತ್ತೆ ಅದೇ ಸಂಪುಟ ವಿಸ್ತರಣೆ ವಿಳಂಬ ಮತ್ತು ವಿಧಾನ ಪರಿಷತ್ ಸಭಾಪತಿ ಚುನಾವಣೆ!
ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಸಿಲುಕಿಕೊಂಡು ಸಚಿವ ಸ್ಥಾನ ತ್ಯಜಿಸಿದ ಕೆ.ಎಸ್. ಈಶ್ವರಪ್ಪ ಮರಳಿ ಗೂಟದ ಕಾರು ಹತ್ತಲು ಈಗ ಅಕ್ಷರಶಃ ಪಕ್ಷದೊಳಗೆ ಯುದ್ಧವೇ ಮಾಡಬೇಕಾದ ಪರಿಸ್ಥಿತಿಯಲ್ಲಿದ್ದಾರೆ. ರೆಬೆಲ್ ಆದರೆ ತಾವೆಂತಹ ರೆಬೆಲ್ ನಾಯಕ ಅನ್ನುವುದನ್ನು ಸಚಿವರಾಗಿದ್ದಾಗಲೇ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ವಿರುದ್ಧವೇ ರಾಜ್ಯಪಾಲರ ಅಂಗಳದಲ್ಲಿ ನಿಂತು ಸಾಬೀತುಪಡಿಸಿದ್ದರು. ಹೀಗಿರುವಾಗ ಮತ್ತೆ ತಮ್ಮನ್ನು ಮಂತ್ರಿ ಮಾಡಲು ಈಶ್ವರಪ್ಪ ಅದೆಷ್ಟೇ ಗಂಟಲು ಹರಿದುಕೊಂಡರೂ ಈವರೆಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವರಿಷ್ಠರು ಕರೆದರೆ ಮಾತ್ರ… ಎಂಬ ಹಳೆಯ ರಾಗವನ್ನೇ ಈಶ್ವರಪ್ಪನವರ ಮುಂದೆ ಹಾಡುತ್ತಿದ್ದಾರೆ.
ಇನ್ನೊಂದೆಡೆ ವಿಧಾನ ಪರಿಷತ್ ಹಂಗಾಮಿ ಸಭಾಪತಿಯಾಗಿರುವ ರಘುನಾಥ್ ರಾವ್ ಮಲಕಾಪೂರೆ ಅವರನ್ನು ಬೆಳಗಾವಿಯಲ್ಲಿ ನಡೆಯುವ ವಿಧಾನ ಮಂಡಲ ಅಧಿವೇಶನದ ವೇಳೆ ಕೆಳಗಿಳಿಸಿ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಮತ್ತೆ ಪಟ್ಟಾಭಿಷೇಕ ಮಾಡುವ ಸಿದ್ಧತೆ ನಡೆದಿದೆ. ಮುಂಗಾರು ಅಧಿವೇಶನದಲ್ಲೇ ಇದು ನಡೆಯಬೇಕಾಗಿತ್ತಾದರೂ ಸಂಘ ಪರಿವಾರವು ಸಂಘ ನಿಷ್ಠರ ಬೆನ್ನಿಗೆ ನಿಂತ ಪರಿಣಾಮ ಅದು ಚಳಿಗಾಲದ ಅಧಿವೇಶನಕ್ಕೆ ಮುಂದೂಡಲ್ಪಟ್ಟಿದೆ. (ವರದಿ: ಕಿರಣ್ ಹನಿಯಡ್ಕ)
ಈ ಮಧ್ಯೆ ಈಗಾಗಲೇ ಕೆ.ಎಸ್. ಈಶ್ವರಪ್ಪ ಅವರನ್ನು ಸಚಿವ ಸ್ಥಾನದಿಂದ ದೂರವಿಟ್ಟಿದ್ದಲ್ಲದೇ, ಬಸವರಾಜ ಹೊರಟ್ಟಿ ಅವರಿಗೆ ಅವಕಾಶ ಮಾಡಿಕೊಡುವುದಕ್ಕಾಗಿ ಕುರುಬ ಸಮುದಾಯದ ಮಲಕಾಪೂರೆ ಅವರನ್ನೂ ಕೆಳಗಿಳಿಸಲಾಗುತ್ತಿದೆ ಎಂಬ ಚರ್ಚೆ ಪಕ್ಷದಲ್ಲಿ ಬೇರು ಬಿಡಲಾರಂಭಿಸಿದೆ. ಮತ್ತೊಂದೆಡೆ ಸಚಿವ ಸ್ಥಾನ ವಿಸ್ತರಣೆ ವೇಳೆ ಈಶ್ವರಪ್ಪ ಅವರಿಗೆ ಅವಕಾಶ ಮರೀಚಿಕೆಯಾಗಿ ಅದೇ ಕುರುಬ ಸಮುದಾಯದ ವಲಸಿಗ ಆರ್. ಶಂಕರ್ ಗೆ ಮಣೆ ಹಾಕಿಬಿಡಬಹುದು ಎಂಬ ಅನುಮಾನವೂ ಬಿಜೆಪಿಯಲ್ಲಿರುವ ಮೂಲ ಕುರುಬ ನಾಯಕರನ್ನು ಕಾಡಲಾರಂಭಿಸಿದೆ. ಸಭಾಪತಿ ಸ್ಥಾನ ತ್ಯಾಗ ಮಾಡುವ ರಘುನಾಥ್ ರಾವ್ ಮಲಕಾಪೂರೆ ಅವರಿಗೆ ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡು ಕಲ್ಯಾಣ ಕರ್ನಾಟಕ ಭಾಗದ ಕೋಟಾ ಸರಿದೂಗಿಸಿಕೊಳ್ಳಬಹುದು ಎಂಬ ನಿರೀಕ್ಷೆ ಇದೆಯಾದರೂ, ಸಿಎಂ ಕೇಳಿದಾಗಲೆಲ್ಲಾ ವರಿಷ್ಠರು ಕರೆದರೆ ಮಾತ್ರ… ಎನ್ನುತ್ತಿರುವುದನ್ನು ನೋಡಿ ಅದನ್ನೂ ಗಟ್ಟಿಯಾಗಿ ನಂಬಿಕೊಳ್ಳುವಂತಿಲ್ಲ.
ಇದೆಲ್ಲದರ ನಡುವೆ ಸಿಎಂ ಬೊಮ್ಮಾಯಿ ಕುರುಬ ಸಮುದಾಯದವರೇ ಆಗಿರುವ ಸಚಿವರಾದ ಭೈರತಿ ಬಸವರಾಜ, ಎಂಟಿಬಿ ನಾಗರಾಜ್ ಮತ್ತು ವಿಧಾನ ಪರಿಷತ್ ಸದಸ್ಯ ಆರ್. ಶಂಕರ್ ಗೆ ಹೆಚ್ಚು ಪ್ರಾಧಾನ್ಯತೆ ಕೊಡುತ್ತಿದ್ದಾರೆ ಎಂಬ ಆತಂಕವೂ ಮೂಲ ಕುರುಬ ನಾಯಕರನ್ನು ಕಾಡುತ್ತಿದೆ. ಸಿಎಂ ಸಂಘ ನಿಷ್ಠರಿಗಿಂತ ವಲಸಿಗರಿಗೇ ಹೆಚ್ಚು ಮಣೆ ಹಾಕುತ್ತಿದ್ದಾರೆ ಎಂಬ ಭಾವನೆ ಪಕ್ಷದಲ್ಲಿನ ಮೂಲ ಕುರುಬ ನಾಯಕರಲ್ಲಿ ಮೂಡಲಾರಂಭಿಸಿದೆ.