ಪೇಸಿಎಂ ಅಭಿಯಾನ: ಕಾಂಗ್ರೆಸ್ ಮುಖಂಡರ ವಿರುದ್ಧದ FIR ರದ್ದುಗೊಳಿಸಿದ ಹೈಕೋರ್ಟ್

ಪೇಸಿಎಂ ಪೋಸ್ಟರ್ ಅಂಟಿಸಿದ್ದ ಕಾಂಗ್ರೆಸ್​ ಕಾರ್ಯಕರ್ತರ ವಿರುದ್ಧ ದಾಖಲಿಸಲಾಗಿದ್ದ ಪ್ರಕರಣವನ್ನು ಕೋರ್ಟ್ ರದ್ದುಗೊಳಿಸಿದೆ. ಈ ಮೂಲಕ ಬಿಜೆಪಿಗೆ ಮುಖಭಂಗವಾದಂತಾಗಿದೆ

ಪೇಸಿಎಂ ಅಭಿಯಾನ: ಕಾಂಗ್ರೆಸ್ ಮುಖಂಡರ ವಿರುದ್ಧದ FIR ರದ್ದುಗೊಳಿಸಿದ ಹೈಕೋರ್ಟ್
ಕರ್ನಾಟಕ ಉಚ್ಚ ನ್ಯಾಯಾಲಯ
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on:Oct 22, 2022 | 4:58 PM

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಆಡಳಿತರೂಢ ಬಿಜೆಪಿಗೆ ತೀವ್ರ ಮುಜುಗರ ಉಂಟುಮಾಡಿದ ಪೇಸಿಎಂ ಪೋಸ್ಟರ್ ಅಭಿಯಾನ (PayCM Campaign) ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್​ ಕಾರ್ಯಕರ್ತರ ವಿರುದ್ಧ ದಾಖಲಿಸಲಾಗಿದ್ದ ಪ್ರಕರಣವನ್ನು ಹೈಕೋರ್ಟ್ ರದ್ದು ಮಾಡಿದೆ.

ಪೇ ಸಿಎಂ ಅಭಿಯಾನಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ನೆಲಮಂಗಲ ವಿಧಾನಸಭೆ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ, ವಕೀಲ ಜೆ.ಎಸ್.ನಾರಾಯಣ ಗೌಡ ಹಾಗೂ ಕಾನೂನು ಘಟಕದ ಮುಖ್ಯಸ್ಥ ವಕೀಲ ವಿ. ರಾಮಕೃಷ್ಣ ವಿರುದ್ಧ ಪೊಲೀಸರು ಎಫ್​ಐಆರ್ ದಾಖಲಿಸಿದ್ದರು.

ಈ ಪ್ರಕರಣವನ್ನು ರದ್ದು ಕೋರಿ ಜೆ.ಎಸ್.ನಾರಾಯಣ ಗೌಡ ಹಾಗೂ ಕಾನೂನು ಘಟಕದ ಮುಖ್ಯಸ್ಥ ವಕೀಲ ವಿ. ರಾಮಕೃಷ್ಣ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಗಳನ್ನು ಆಲಿಸಿದ ಕರ್ನಾಟಕ ಹೈಕೋರ್ಟ್ ನ್ಯಾ. ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ, ಪ್ರಕರಣವನ್ನು ರದ್ದು ಮಾಡಿ ಆದೇಶ ಮಾಡಿದೆ.

ಜತೆಗೆ, ಈ ಆದೇಶದಲ್ಲಿ ಕೋರ್ಟ್ ವ್ಯಕ್ತಪಡಿಸಿರುವ ಅಭಿಪ್ರಾಯ ಅರ್ಜಿದಾರರ ವಿರುದ್ದದ ಪ್ರಕರಣಕ್ಕೆ ಮಾತ್ರ ಸೀಮಿತವಾಗಿದ್ದು, ಇದೇ ಪ್ರಕರಣದ ಇತರ ಯಾವುದೇ ಆರೋಪಿಗಳ ವಿರುದ್ಧದ ತನಿಖೆಯ ಮೇಲೆ ಈ ಆದೇಶ ಪರಿಣಾಮ ಬೀರುವುದಿಲ್ಲವೆಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಅರ್ಜಿದಾರರು ಮೊಬೈಲ್ ಮೂಲಕ ಪೋಸ್ಟರ್ ಅಥವಾ ಭಿತ್ತಿಪತ್ರಗಳನ್ನು ಅಂಟಿಸುವಂತೆ ಇತರರಿಗೆ ಸೂಚಿಸಿದ್ದಾರೆಂದ ಮಾತ್ರಕ್ಕೆ ಅವರು ಸಾರ್ವಜನಿಕ ಆಸ್ತಿ ಹಾನಿ ನಿಯಂತ್ರಣ ಕಾಯಿದೆ ಮತ್ತು ಕರ್ನಾಟಕ ಸಾರ್ವಜನಿಕ ಸ್ಥಳ ವಿರೂಪ ಕಾಯಿದೆಯ ನಿಯಮಗಳ ಪ್ರಕಾರ ಅಪರಾಧಿಗಳಾಗುವುದಿಲ್ಲ. ಕಾಯ್ದೆ ಅಡಿ ಅಪರಾಧವಾಗುವಂತಹ ಯಾವುದೇ ಕೃತ್ಯವನ್ನು ಅರ್ಜಿದಾರರು ಎಸಗಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಅರ್ಜಿದಾರರ ವಿರುದ್ದ ನೆಲಮಂಗಲ ಟೌನ್ ಪೊಲೀಸರು ದಾಖಲಿಸಿದ್ದ ಎಫ್‌ಐಆರ್ ಮತ್ತು ಅದಕ್ಕೆ ಸಂಬಂಧಿಸಿದ ನೆಲಮಂಗಲ 2ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿಯಲ್ಲಿನ ವಿಚಾರಣಾ ಪ್ರಕ್ರಿಯೆ ರದ್ದುಪಡಿಸಲಾಗುತ್ತಿದೆ ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ.

ಪ್ರಕರಣದ ಹಿನ್ನೆಲೆ

ಹಲವು ಭ್ರಷ್ಟಾಚಾರ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪೇಸಿಎಂ ಎನ್ನುವ ಅಭಿಯಾನವನ್ನು ಆರಂಭಿಸಿತ್ತು. ಇದು ರಾಜ್ಯ ರಾಜಕಾರಣದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಮತ್ತೆ ವಾಗ್ಯುದ್ದಕ್ಕೆ ಕಾರಣವಾಗಿತ್ತು. ಅದರಂತೆ ನೆಲಮಂಗಲದಲ್ಲೂ ಪೇಸಿಎಂ ಪೋಸ್ಟರ್ ಅಲ್ಲಲ್ಲಿ ಅಂಟಿಸಲಾಗಿತ್ತು. ಈ ಬಗ್ಗೆ ನೆಲಮಂಗಲ ಟೌನ್ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಕೆ.ಆರ್. ನಾರಾಯಣ್ ರಾವ್, ಈ ರೀತಿಯ ಪೋಸ್ಟರ್‌ಗಳನ್ನು ಅಂಟಿಸುವ ಮೂಲಕ ಸಾರ್ವಜನಿಕ ಸ್ಥಳಗಳ ಸೌಂದರ್ಯ ಹಾಳು ಮಾಡಿದ್ದಾರೆಂದು ಆರೋಪಿಸಿ ದೂರು ನೀಡಿದ್ದರು. ಈ ದೂರು ಆಧರಿಸಿ ಅರ್ಜಿದಾರರೂ ಸೇರಿ ಐವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು.

Published On - 4:58 pm, Sat, 22 October 22