AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಿಡಿ ಹೊತ್ತಿಸಿದ ‘100 ರೂಪಾಯಿ’ ದೇಣಿಗೆ ಸುತ್ತೋಲೆ: ಸಿಎಂ, ಶಿಕ್ಷಣ ಸಚಿವರಿಗೆ ಸಂಬಂಧವಿಲ್ಲ ಎಂದ ನಾಗೇಶ್

ಇದು ಶಿಕ್ಷಣ ಇಲಾಖೆ ಆಯುಕ್ತರು ಸುತ್ತೋಲೆ ಹೊರಡಿಸಿದ್ದು, ಶಿಕ್ಷಣ ಸಚಿವರು, ಸಿಎಂಗೂ ಸಂಬಂಧ ಇಲ್ಲ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್​ ಸ್ಪಷ್ಟನೆ ನೀಡಿದರು.

ಕಿಡಿ ಹೊತ್ತಿಸಿದ ‘100 ರೂಪಾಯಿ’ ದೇಣಿಗೆ ಸುತ್ತೋಲೆ: ಸಿಎಂ, ಶಿಕ್ಷಣ ಸಚಿವರಿಗೆ ಸಂಬಂಧವಿಲ್ಲ ಎಂದ ನಾಗೇಶ್
ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್​
TV9 Web
| Edited By: |

Updated on:Oct 22, 2022 | 4:41 PM

Share

ಮೈಸೂರು: ಇದು ಶಿಕ್ಷಣ ಇಲಾಖೆ (Education Department) ಆಯುಕ್ತರು ಸುತ್ತೋಲೆ ಹೊರಡಿಸಿದ್ದು, ಶಿಕ್ಷಣ ಸಚಿವರು, ಸಿಎಂಗೂ ಸಂಬಂಧ ಇಲ್ಲ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್​ ಸ್ಪಷ್ಟನೆ ನೀಡಿದರು. ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಬಗ್ಗೆ ಕೆಲವರು ಸರಿಯಾಗಿ ಓದಿಕೊಳ್ಳದೇ ಪ್ರತಿಕ್ರಿಯೆ ನೀಡಿದ್ದಾರೆ. ಎಸ್​ಡಿಎಂಸಿಗಳ ಸಲಹೆ ಮೇರೆಗೆ ಸುತ್ತೋಲೆ ಹೊರಡಿಸಲಾಗಿದೆ. ಎಲ್ಲ ಸುತ್ತೋಲೆಗಳನ್ನ ಸರ್ಕಾರದ ಗಮನಕ್ಕೆ ತಂದು ಹೊರಡಿಸಬೇಕಿಲ್ಲ. ಹಣ ಸಂಗ್ರಹಿಸಲು ಆರ್​ಟಿಇ ಕಾಯ್ದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. RTE ಒಳ್ಳೆಯ ಕಾಯ್ದೆ, ಅದನ್ನು ಜಾರಿಗೆ ತಂದಿದ್ದು ಸಿದ್ದರಾಮಯ್ಯ. ಪೋಷಕರು ಕಡ್ಡಾಯವಾಗಿ ಹಣ ಕೊಡಬೇಕು ಎಂದು ಹೇಳಿಲ್ಲ. ಅವರಾಗಿಯೇ ತಿಂಗಳಿಗೆ 100 ರೂ. ಕೊಟ್ಟರೆ ರಶೀದಿ ಕೊಡಬೇಕು. ಇದರಲ್ಲೂ ಸಿದ್ದರಾಮಯ್ಯ ರಾಜಕೀಯ ಮಾಡುವುದು ಸರಿಯಲ್ಲ. ಹಣ ದುರುಪಯೋಗವಾದರೆ ಸುತ್ತೋಲೆ ಹಿಂಪಡೆಯಲಾಗುವುದು ಎಂದು ಸಚಿವ ಬಿ.ಸಿ.ನಾಗೇಶ್ ಹೇಳಿದರು.

ಭಿಕ್ಷೆ ಬೇಡುವಂತಹ ಪರಿಸ್ಥಿತಿ ಸರ್ಕಾರಕ್ಕೆ ಯಾಕೆ ಬಂದಿದೆ: ಯೋಗಾನಂದ

ಇನ್ನು ಈ ವಿಚಾರಾಗಿ ಬೆಂಗಳೂರಿನಲ್ಲಿ ಪೋಷಕರ ಸಂಘಟನೆಯ ಆರ್​​ಟಿಇ ಬಿ.ಎಲ್.ಯೋಗಾನಂದ ಮಾತನಾಡಿದ್ದು, ವಿದ್ಯಾರ್ಥಿಗಳ ಶಿಕ್ಷಣವನ್ನು ಕಸಿದುಕೊಳ್ಳಲು ಹೊರಟಿದ್ದಾರೆ. ಮಕ್ಕಳ ಶಿಕ್ಷಣ ಕಸಿದುಕೊಳ್ಳಲು ಯತ್ನಿಸುತ್ತಿರುವ ಅನುಮಾನ ವ್ಯಕ್ತವಾಗಿದೆ. ಮಕ್ಕಳನ್ನು ಶಾಲೆಯಿಂದ ದೂರವಿಡುವ ಹುನ್ನಾರ ನಡೀತಿದೆ. 50 ಲಕ್ಷ ಮಕ್ಕಳು ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದಾರೆ. ಸೌಲಭ್ಯ ನೀಡುವ ಬದಲು ಹಣ ಕೇಳಲು ಹೊರಟಿದ್ದಾರೆ. ಆಯುಕ್ತರು ಈ ಆದೇಶವನ್ನು ವಾಪಸ್ ಪಡೆಯಬೇಕು. ಇಲ್ಲದಿದರೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು. ಭಿಕ್ಷೆ ಬೇಡುವಂತಹ ಪರಿಸ್ಥಿತಿ ಸರ್ಕಾರಕ್ಕೆ ಯಾಕೆ ಬಂದಿದೆ ಎಂದು ಪ್ರಶ್ನಿಸಿದರು.

ಸುತ್ತೋಲೆಯಲ್ಲಿ ಏನಿದೆ?

ಸಾರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಅಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಯು ಶಾಲೆಯ ಅಭಿವೃದ್ಧಿಗಾಗಿ ದಾನ, ದೇಣಿಗೆಗಳನ್ನು ಸ್ವೀಕರಿಸುವ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆ  ಮಹತ್ವದ ಸುತ್ತೋಲೆ ಹೊರಡಿಸಿದೆ. ಸರ್ಕಾರಿ ಶಾಲೆಗಳ ಶೌಚಾಲಯ, ವಿದ್ಯುತ್ ಬಿಲ್, ಕಡಿಯುವ ನೀರು ನಿರ್ವಹಣೆಗೆ ಮಾಸಿಕ ವಿದ್ಯಾರ್ಥಿಗಳ ಪೋಷಕರಿಂದ 100 ರೂಪಾಯಿ ದೇಣಿಗೆ ರೂಪದಲ್ಲಿ ಪಡೆಯಲು ಎಸ್​ಡಿಎಮ್​ಸಿಗಳಿಗೆ ಅವಕಾಶ ನೀಡಲಾಗಿದೆ. ಸರ್ಕಾರಿ ಶಾಲೆಗಳಲ್ಲಿ ಮೂಲ ಸೌಕರ್ಯ ಕಲ್ಪಸಲು ಪ್ರತಿ ವರ್ಷ ಸರ್ಕಾರ ಬಜೆಟ್​ನಲ್ಲಿ ಅನುದಾನ ಬಿಡುಗಡೆ ಮಾಡುತ್ತದೆ.

ಆದರೆ, ಕೆಲವೊಮ್ಮೆ ಅಗತ್ಯತೆಗೆ ಹೆಚ್ಚುವರಿ ಹಣಕಾಸಿನ ನೆರವು ಬೇಕಾಗುವುದರಿಂದ, ಪ್ರತಿ ವಿದ್ಯಾರ್ಥಿಗಳ ಪೋಷಕರಿಂದ ದಾನ ದೇಣಿಗೆ, ಕೊಡುಗೆ ರೂಪದಲ್ಲಿ ಮಾಸಿಕ 100 ರೂಪಾಯಿ ಹಣವನ್ನು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಖಾತೆಗೆ ಸಂದಾಯ ಮಾಡಿಕೊಂಡು ಶಾಲಾಭಿವೃದ್ಧಿ ಹಾಗೂ ಶೈಕ್ಷಣಿಕ ಅಭಿವೃದ್ಧಿಗೆ ಬಳಸಬಹುದು ಎಂದು ಶಿಕ್ಷಣ ಇಲಾಖೆ ಸುತ್ತೋಲೆಯಲ್ಲಿ ತಿಳಿಸಿದೆ.

ವ್ಯಾಪಕ ಆಕ್ರೋಶ:

ಶಿಕ್ಷಣ ಇಲಾಖೆಯ ಸುತ್ತೋಲೆಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದು, ಶಿಕ್ಷಣ ಇಲಾಖೆ ನಡೆಗೆ ಪೋಷಕರು ಹಾಗೂ ಖಾಸಗಿ ಶಾಲಾ ಸಂಘಟನೆಗಳಿಂದಲೂ ವಿರೋಧ ಕೇಳಿಬರುತ್ತಿದೆ. ಶಾಲೆಗಳ ಖಾಸಗಿರಣದ ಹುನ್ನಾರ ಎಂದು ಪೋಷಕರು ಕಿಡಿಕಾರಿದ್ದಾರೆ. ಮಕ್ಕಳ ಮೂಲಭೂತ ಶಿಕ್ಷಣ ಹಕ್ಕನ್ನು ಶಿಕ್ಷಣ ಇಲಾಖೆ ಕಿತ್ತುಕೊಳ್ಳಲು ಮುಂದಾಗಿದ್ದು, ಮಕ್ಕಳನ್ನ ಶಾಲೆಯಿಂದ ಹೊರ ಹಾಕುವ ಹುನ್ನಾರ ಇದು ಎಂದಿದ್ದಾರೆ. ಕರ್ನಾಟಕದ್ಯಾಂತ ಮುಂದಿನ ದಿನಗಳಲ್ಲಿ ಪೋಷಕರಿಂದ ಹೋರಾಟ ಮಾಡುತ್ತೇವೆ ಎಂದು ಪೋಷಕರ ಸಂಘಟನೆಯಿಂದ ಆಕ್ರೋಶ ವ್ಯಕ್ತಪಡಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:29 pm, Sat, 22 October 22