ಬಿಜೆಪಿ ಶಾಸಕ ದಡೇಸಗೂರುಗೆ ಟಿಕೆಟ್ ನೀಡದಂತೆ ಒತ್ತಡ ಹೇರಲು ನಿರ್ಧಾರ
ಕನಕಗಿರಿ ಕ್ಷೇತ್ರದ ಬಿಜೆಪಿ ಶಾಸಕ ಬಸವರಾಜ ದಡೆಸಗೂರು ಮೇಲೆ ಪಕ್ಷದ ಮುಖಂಡರ ಮುನಿಸುಗೊಂಡಿದ್ದು, ಮುಂದಿನ ಚುನಾವಣೆಯಲ್ಲಿ ಅವರಿಗೆ ಟಿಕೆಟ್ ನೀಡದಂತೆ ಒತ್ತಡ ಹೇರಲು ಸಭೆಯಲ್ಲಿ ನಿರ್ಧರಿಸಿದ್ದಾರೆ.
ಕೊಪ್ಪಳ: ಪಿಎಸ್ಐ ನೇಮಕಾತಿ ಹಗರಣದಲ್ಲಿ ಆಡಿಯೋ ವೈರಲ್ ಸೇರಿದಂತೆ ಇನ್ನಿತರ ವಿಚಾರಗಳಿಂದ ಕನಕಗಿರಿ ಕ್ಷೇತ್ರದ ಬಿಜೆಪಿ ಶಾಸಕ ಬಸವರಾಜ ದಡೆಸಗೂರು ಮೇಲೆ ಪಕ್ಷದ ಮುಖಂಡರು ಮುನಿಸುಗೊಂಡಿದ್ದು, ಅವರಿಗೆ ಮುಂದಿನ ಚುನಾವಣೆಯಲ್ಲಿ ಟಿಕೆಟ್ ನೀಡದಂತೆ ಪಕ್ಷದ ನಾಯಕರಲ್ಲಿ ಒತ್ತಡ ಹೇರಲು ನಿನ್ನೆ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಕೊಪ್ಪಳ ಜಿಲ್ಲೆ ಕಾರಟಗಿಯಲ್ಲಿ ಸಭೆ ಸೇರಿದ ಪಕ್ಷದ ಮುಖಂಡರು, ಶಾಸಕರ ದುರ್ವರ್ತನೆ, ಪಿಎಸ್ಐ ಹಗರಣದ ಆಡಿಯೋ ಕೇಸ್, ಮಹಿಳಾ ಅಧಿಕಾರಿ ಜೊತೆಗಿನ ಗಲಾಟೆ ಬಗ್ಗೆ ಸಭೆಯಲ್ಲಿ ಚರ್ಚಿಸಿದ್ದಾರೆ. ಶಾಸಕರ ಈ ಎಲ್ಲಾ ನಡತೆಗಳು ಪಕ್ಷದ ವರ್ಚಸ್ಸಿಗೆ ಧಕ್ಕೆ ಉಂಟುಮಾಡಿದೆ. ಹೀಗಾಗಿ ದಡೇಸಗೂರುಗೆ ಟಿಕೆಟ್ ನಿಡದಂತೆ ಹಾಗೂ ಹೊಸ ಮುಖವನ್ನು ಕಣಕ್ಕಿಳಿಸುವಂತೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಮತ್ತು ಪಕ್ಷದ ವರಿಷ್ಠರಲ್ಲಿ ಮನವಿ ಮಾಡಲು ನಿರ್ಧರಿಸಲಾಗಿದೆ.
ಬಿಜೆಪಿ ಶಾಸಕ ದಡೇಸಗೂರು ವಿರುದ್ದವೇ ಪಕ್ಷದ ಮುಖಂಡರ ಸಭೆ ನಡೆಸಿದ್ದು, ಇದರ ನೇತೃತ್ವವನ್ನು ಶಾಸಕರ ಜೊತೆಗಿದ್ದವರೇ ವಹಿಸಿರುವುದು ಅಚ್ಚರಿಯ ಸಂಗತಿಯಾಗಿದೆ. ಸಭೆಯಲ್ಲಿ ಶಾಸಕರಿಂದ ಪಕ್ಷಕ್ಕೆ ಆದ ಧಕ್ಕೆ ಬಗ್ಗೆ ಗಂಭೀರವಾಗಿ ಚರ್ಚೆ ನಡೆಸಿದ್ದಾರೆ. ಶಾಸಕರ ದುರ್ವರ್ತನೆ, ಪಿಎಸ್ಐ ಹಗರಣದಲ್ಲಿ ಲೀಕ್ ಆದ ಆಡಿಯೋ, ಮಹಿಳಾ ಅಧಿಕಾರಿ ಜೊತೆ ಗಲಾಟೆ ಸೇರಿದಂತೆ ಇತರೆ ವಿಷಯಗಳನ್ನು ಪರಸ್ಪರ ಚರ್ಚಿಸಿದ್ದಾರೆ. ಅದರಂತೆ ಕೊನೆಯಲ್ಲಿ ದಡೇಸಗೂರು ಅವರಿಗೆ ಮುಂದಿನ ಚುನಾವಣಾ ಟಿಕೆಟ್ ನೀಡದಂತೆ ಪಕ್ಷದ ವರಿಷ್ಠರಿಗೆ ಒತ್ತಡ ಹೇರಲು ನಿರ್ಧರಿಸಲಾಗಿದೆ. ಅಲ್ಲದೆ ಕ್ಷೇತ್ರದಲ್ಲಿ ಹೊಸ ಮುಖವನ್ನು ಕಣಕ್ಕಿಳಿಸುವಂತೆ ಬಿಜೆಪಿ ರಾಜ್ಯಾದ್ಯಕ್ಷ ಹಾಗೂ ಆರ್ಎಸ್ಎಸ್ ನಾಯಕರಲ್ಲಿ ಮನವಿ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ.
ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:57 am, Sat, 22 October 22