ಬಿಜೆಪಿ ಬೆಂಬಲಿಸಲು ಶಾಸಕರಿಗೆ ಆಮಿಷ ಆರೋಪ: ಸಚಿವ ಅಶ್ವತ್ಥ ನಾರಾಯಣ, ಇತರ ಶಾಸಕರ ಸಮನ್ಸ್ ಆದೇಶ ರದ್ದು

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jan 04, 2022 | 3:16 PM

ಬಿಜೆಪಿ ಬೆಂಬಲಿಸಲು ಶಾಸಕರಿಗೆ ಆಮಿಷವೊಡ್ಡಲಾಗುತ್ತಿದೆ ಎಂಬ ಆರೋಪಗಳೂ ಕೇಳಿಬಂದಿದ್ದವು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕೆಲ ಸಚಿವರು ಮತ್ತು ಶಾಸಕರ ವಿರುದ್ಧ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಾಗಿತ್ತು.

ಬಿಜೆಪಿ ಬೆಂಬಲಿಸಲು ಶಾಸಕರಿಗೆ ಆಮಿಷ ಆರೋಪ: ಸಚಿವ ಅಶ್ವತ್ಥ ನಾರಾಯಣ, ಇತರ ಶಾಸಕರ ಸಮನ್ಸ್ ಆದೇಶ ರದ್ದು
ಹೈಕೋರ್ಟ್
Follow us on

ಬೆಂಗಳೂರು: ಬಿಜೆಪಿ ನಾಯಕ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಮೊದಲು ನಡೆಯುತ್ತಿದ್ದ ಕ್ಷಿಪ್ರ ರಾಜಕೀಯ ಬೆಳವಣಿಗೆಗಳಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಉರುಳಿಸಲು ಬಿಜೆಪಿ ನಡೆಸಿತ್ತು ಎನ್ನಲಾದ ಪ್ರಯತ್ನಗಳ ಬಗ್ಗೆ ಹಲವು ಊಹಾಪೋಹಗಳು ಚಾಲ್ತಿಗೆ ಬಂದಿದ್ದವು. ಬಿಜೆಪಿ ಬೆಂಬಲಿಸಲು ಶಾಸಕರಿಗೆ ಆಮಿಷವೊಡ್ಡಲಾಗುತ್ತಿದೆ ಎಂಬ ಆರೋಪಗಳೂ ಕೇಳಿಬಂದಿದ್ದವು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕೆಲ ಸಚಿವರು ಮತ್ತು ಶಾಸಕರ ವಿರುದ್ಧ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಾಗಿತ್ತು.

ದೂರಿಗೆ ಸಂಬಂಧಿಸಿದಂತೆ ವಿಶೇಷ ಕೋರ್ಟ್​ ನೀಡಿದ್ದ ಸಮನ್ಸ್ ಆದೇಶವನ್ನು ಹೈಕೋರ್ಟ್​ ರದ್ದುಪಡಿಸಿದೆ. ಸಚಿವ ಸಿ.ಎನ್.ಅಶ್ವತ್ಥ ನಾರಾಯಣ, ಶಾಸಕರಾದ ಶ್ರೀನಿವಾಸಗೌಡ, ಎಸ್.ಆರ್.ವಿಶ್ವನಾಥ್, ಸಿ.ಪಿ.ಯೋಗೇಶ್ವರ್ ಅವರಿಗೆ ಈ ಬೆಳವಣಿಗೆಯು ತುಸು ನೆಮ್ಮದಿ ನೀಡಿದೆ. ಪ್ರಕರಣವನ್ನು ಹೈಕೋರ್ಟ್ ಮತ್ತು ವಿಶೇಷ ಕೋರ್ಟ್​ಗೆ ಮರಳಿಸಿದೆ. ಖಾಸಗಿ ದೂರು ಪರಿಗಣಿಸುವಾಗ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪೂರ್ವಾನುಮತಿಗೆ ಸಂಬಂಧಿಸಿದ ನಿಯಮಗಳನ್ನು ಪಾಲಿಸಬೇಕು ಎಂದು ವಿಚಾರಣಾ ನ್ಯಾಯಾಲಯಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.

ಬಿಜೆಪಿ ಪಕ್ಷಾಂತರ ಮಾಡಲು ಶಾಸಕರಿಗೆ ಆಮಿಷವೊಡ್ಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಟಿ.ಜೆ.ಅಬ್ರಹಾಂ ವಿಶೇಷ ಕೋರ್ಟ್​ನಲ್ಲಿ ಖಾಸಗಿ ದೂರು ದಾಖಲಿಸಿದ್ದರು. ದೂರು ದಾಖಲಾದ ನಂತರ ವಿಶೇಷ ಕೋರ್ಟ್ ಸಮನ್ಸ್ ಜಾರಿಗೆ ಆದೇಶಿಸಿತ್ತು.

ತಂದೆಯ ಸುಪರ್ದಿಗೆ ಮಗುವನ್ನು ಕೊಡಲು ಸಲ್ಲಿಸಿದ್ದ ಅರ್ಜಿ ವಜಾ
ವಿಚ್ಛೇದನ ಪಡೆದ ನಂತರದಲ್ಲಿ ಮಗು ಯಾರ ಬಳಿ ಇರಬೇಕು ಎಂಬ ಬಗ್ಗೆ ಸಾಮಾನ್ಯವಾಗಿ ದಂಪತಿಗಳ ನಡುವೆ ವಾಗ್ವಾದ ಇರುತ್ತದೆ. ಇಂತಹದ್ದೇ ಪ್ರಕರಣವೊಂದನ್ನು ಹೊತ್ತ ದಂಪತಿ ಹೈಕೋರ್ಟ್ (Karnataka High court) ಮೆಟ್ಟಿಲೇರಿತ್ತು. ಅದರಲ್ಲೂ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಚ್ಛೇದನ ಪಡೆದ ಪತಿ ಬೇರೊಂದು ಮದುವೆಯಾಗಿದ್ದು, ಈಗ ತನ್ನ ಮೊದಲ ಹೆಂಡತಿಯ ಮಗುವನ್ನು ತನ್ನ ಸುಪರ್ದಿಗೆ ಒಪ್ಪಿಸಲು ಕೋರಿ ಕರ್ನಾಟಕ ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ ಹೈಕೋರ್ಟ್ ಇದನ್ನು ತಿರಸ್ಕರಿಸಿದೆ. ಹೆತ್ತ ತಾಯಿ ಸಹಜವಾಗಿ ಮಗುವಿನ ಪಾಲನೆಯ ಎಲ್ಲಾ ಅಧಿಕಾರವನ್ನು ಹೊಂದಿರುತ್ತಾಳೆ. ಅದರಲ್ಲೂ ಮಗು ಇನ್ನೂ ಅಪ್ರಾಪ್ತ ವಯಸ್ಸಿನದ್ದಾಗಿದ್ದರೆ ಹೆತ್ತ ತಾಯಿಯೇ ಮಗುವಿನ ಪಾಲನೆಯ ಸಂಪೂರ್ಣ ಹಕ್ಕು ಹೊಂದಿರುತ್ತಾಳೆ. ಮಲತಾಯಿಗೆ ಮಗುವಿನ ಜವಬ್ದಾರಿ ಕೊಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.

ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರನ್ನೊಳಗೊಂಡ ಏಕಸದಸ್ಯ ನ್ಯಾಯಪೀಠವು ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ. ಜೊತೆಗೆ ತಂದೆಗೆ 50,000 ರೂಪಾಯಿ ದಂಡ ವಿಧಿಸಿದ್ದು, 9 ತಿಂಗಳ ಒಳಗೆ ಈ ಹಣವನ್ನು ನೀಡಬೇಕು ಎಂದು ಆದೇಶಿಸಿದೆ. ಒಂದು ವೇಳೆ ತಪ್ಪಿದಲ್ಲಿ ಮಗನ ಭೇಟಿಗೆ ಕಲ್ಪಿಸಲಾಗಿರುವ ಅವಕಾಶವನ್ನು ಅಮಾನತು ಮಾಡಲಾಗುವುದು ಎಂದು ಕರ್ನಾಟಕ ಹೈಕೋರ್ಟ್ ಎಚ್ಚರಿಸಿದೆ.

ಆರ್ಥಿಕ ದೃಷ್ಟಿಕೋನದಿಂದ ನೋಡುವುದಾದರೆ ನನ್ನ ಮೊದಲ ಪತ್ನಿಗಿಂತ ನಾನು ಸ್ಥಿತಿವಂತನಾಗಿದ್ದೇನೆ. ಮಗುವಿಗೆ ಅತ್ಯುತ್ತಮ ಶಿಕ್ಷಣ, ಪಾಲನೆ ಮತ್ತು ಒಂದೊಳ್ಳೆ ಜೀವನ ನೀಡಲು ನನಗೆ ಸಾಧ್ಯವಿದೆ. ಹೀಗಾಗಿ ಮಗುವನ್ನು ನನ್ನ ಸುಪರ್ದಿಗೆ ವಹಿಸಬೇಕು ಎಂದು ತಂದೆ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಹೈಕೋರ್ಟ್​ ಈ ಅರ್ಜಿಯನ್ನು ಸದ್ಯ ವಜಾ ಮಾಡಿದೆ.

ಇದನ್ನೂ ಓದಿ: ದೇಶದಲ್ಲಿ 200 ಕೊರೊನಾ ಸೋಂಕಿತರಲ್ಲಿ ಒಬ್ಬರಿಗೆ ಆಕ್ಸಿಜನ್​ ಅಗತ್ಯ, ಶೇ.90ರಷ್ಟು ಬೆಡ್​ಗಳ ಲಭ್ಯತೆ; ಇದು ಖಾಸಗಿ ಆಸ್ಪತ್ರೆಗಳ ದತ್ತಾಂಶದ ವರದಿ
ಇದನ್ನೂ ಓದಿ: ಬೆಂಗಳೂರು ಸರಣಿ ಬಾಂಬ್ ಸ್ಫೋಟ ಪ್ರಕರಣ: ಸಾಕ್ಷಿಗಳಿಗೆ ಬೆದರಿಕೆ ಹಾಕಿದ್ದವರ ಕೇಸ್ ರದ್ದತಿಗೆ ಹೈಕೋರ್ಟ್ ನಕಾರ

Published On - 3:14 pm, Tue, 4 January 22