ಬೆಂಗಳೂರು: ರಾಜ್ಯದಲ್ಲಿ ಹಿಜಾಬ್, ಹಲಾಲ್, ಆಜಾನ್, ಮಂದಿರ ವರ್ಸಸ್ ಮಸೀದಿ ಇತ್ಯಾದಿ ಧರ್ಮ ದಂಗಲ್ ಬಳಿಕ ಇದೀಗ ಹೊಸ ವಿವಾದ ಭುಗಿಲೆದ್ದಿದೆ. ಅದೇ ಈದ್ಗಾ ಮೈದಾನ ಕಾಂಟ್ರವರ್ಸಿ. ಬೆಂಗಳೂರಿನ ಚಾಮರಾಜಪೇಟೆಯ ಈದ್ಗಾ ಮೈದಾನ ಯಾರಿಗೆ ಸೇರಿದ್ದು ಅನ್ನೋ ಚರ್ಚೆ ಜ್ವಾಲಾಮುಖಿಯಾಗಿ ಸ್ಫೋಟಿಸಿದೆ. ಕೇವಲ ಮುಸ್ಲಿಂ ಸಮುದಾಯಕ್ಕೆ ಮಾತ್ರ ಸೀಮಿತವಾಗಿದೆ ಅಂದುಕೊಂಡಿರೋ ಈ ಮೈದಾನದಲ್ಲಿ, ಹಿಂದೂಗಳ ಕಾರ್ಯಕ್ರಮಗಳಿಗೂ ಅವಕಾಶ ನೀಡಬೇಕು ಅನ್ನೋ ರಣಕಹಳೆ ಮೊಳಗಿದೆ.
ತಾರಕಕ್ಕೇರಿದ ಚಾಮರಾಜಪೇಟೆ ಈದ್ಗಾ ಮೈದಾನ ಮಲ್ಲಯುದ್ಧ
ಬೆಂಗಳೂರಿನಲ್ಲಿ ಈದ್ಗಾ ಮೈದಾನ ವಿವಾದ ತಾರಕ್ಕಕೇರಿದೆ. ಅಸಲಿಗೆ ಇಲ್ಲಿರೋದು ಈದ್ಗಾ ಮೈದಾನ ಅಲ್ಲ, ಬಿಬಿಎಂಪಿ ಆಟದ ಮೈದಾನ ಅಂತ ಹಿಂದೂ ಮುಖಂಡರು ವಾದ ಮಂಡಿಸ್ತಿದ್ದಾರೆ. ಹಿಂದೂ ಮುಖಂಡರ ಈ ಕೂಗು ಜೋರಾಗ್ತಿದ್ದಂತೆ, ನಿನ್ನೆ ಈದ್ಗಾ ಮೈದಾನಕ್ಕೆ ಎಂಟ್ರಿ ಕೊಟ್ಟಿದ್ದ ವಂದೇಮಾತರಂ ಸಂಘಟನೆ ಕಾರ್ಯಕರ್ತರು, ಮೈದಾನದಲ್ಲಿ ಸಮಾವೇಶಕ್ಕೆ ಅವಕಾಶ ಕೊಡಿ ಅಂತಾ ಪಟ್ಟು ಹಿಡಿದಿದ್ರು. ಈ ವೇಳೆ ಪೊಲೀಸರು ಜೊತೆ ವಾಗ್ವದ ನಡೆದು ಹೈಡ್ರಾಮವೇ ಸೃಷ್ಟಿಯಾಯ್ತು. ಇದನ್ನೂ ಓದಿ: ಪ್ರವಾದಿ ಬಗ್ಗೆ ಹೇಳಿಕೆ ವಿವಾದ: ಒಐಸಿ ಟೀಕೆ ಅನಗತ್ಯ ಮತ್ತು ಸಂಕುಚಿತ ಮನಸ್ಸಿನದ್ದು ಎಂದ ಭಾರತ
ಶುರುವಾಯ್ತು ಈದ್ಗಾ ಮೂಲ ದಾಖಲಾತಿ ಹುಡುಕೋ ಕೆಲಸ
ಅಷ್ಟಕ್ಕೂ ವಿವಾದಕ್ಕೆ ಕಾರಣವಾಗಿರೋ ಈದ್ಗಾ ಮೈದಾನ ಮುಸ್ಲಿಂ ಸಮುದಾಯಕ್ಕೆ ಮಾತ್ರ ಸೇರಿದ್ದಾ? ಇಲ್ಲಿ ಹಿಂದೂಗಳ ಯಾವುದೇ ಕಾರ್ಯಕ್ರಮಗಳು ನಡೆಯಬಾರದ ಅನ್ನೋ ಪ್ರಶ್ನೆಯನ್ನ ಹಿಂದೂಪರ ಸಂಘಟನೆಗಳು ಮುಂದಿಟ್ಟಿವೆ. ಇದಕ್ಕಾಗಿ ಬಿಬಿಎಂಪಿ ಈದ್ಗಾ ಸತ್ಯಶೋಧನೆಗೆ ಮುಂದಾಗಿದೆ. ಅಲ್ಲದೇ ಈದ್ಗಾ ಮೂಲ ದಾಖಲಾತಿ ಹುಡುಕೋ ಕೆಲಸ ಆರಂಭಿಸಿದೆ. ಮೈಸೂರು ಸರ್ಕಾರದವಿದ್ದ ಕಾಲದಿಂದಲೂ ಈದ್ಗಾ ಕೇವಲ ಆಟದ ಮೈದಾನ ಎಂದಷ್ಟೇ ದಾಖಲಾತಿಯಲ್ಲಿದೆ. ಇದಕ್ಕಾಗಿ ಬಿಬಿಎಂಪಿ ಮೂಲ ದಾಖಲೆಗಳನ್ನ ಸಿದ್ಧಪಡಿಸೋ ಕೆಲಸವನ್ನ ಆರಂಭಿಸಿದೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
ಈದ್ಗಾ ಕೇವಲ ಆಟದ ಮೈದಾನ! ಬಿಬಿಎಂಪಿ ಆಸ್ತಿ!
ಈದ್ಗಾ ಮೈದಾನ ಪಕ್ಕಾ ಬಿಬಿಎಂಪಿಗೆ ಸೇರಿದ ಆಸ್ತಿ, ಅಲ್ಲದೇ ಇದು ಆಟದ ಮೈದಾನ ಮಾತ್ರ ಎಂದು ಬಿಬಿಎಂಪಿ ಇದೀಗ ಸ್ಪಷ್ಟಪಡಿಸಿದೆ. ಮೈದಾನದಲ್ಲಿ ವರ್ಷಕ್ಕೆ 2 ಬಾರಿ ಪ್ರಾರ್ಥನೆ ಮಾಡ್ತಾರೆ. ಮೈದಾನವನ್ನ ಯಾರು ಬೇಕಾದರೂ ಉಪಯೋಗಿಸಬಹುದು ಎಂದು ಬಿಬಿಎಂಪಿ ವಲಯ ಜಂಟಿ ಆಯುಕ್ತ ಶ್ರೀನಿವಾಸ್ ತಿಳಿಸಿದ್ದಾರೆ. ಇನ್ನೂ ಮೈದಾನದಲ್ಲಿ ಗಣೇಶೋತ್ಸವ, ನವರಾತ್ರಿ ಉತ್ಸವ, ಯೋಗಾ ದಿನಾಚರಣೆಯಂತಹ ಯಾವುದೇ ವಿಶೇಷ ಕಾರ್ಯಕ್ರಮಗಳನ್ನ ಆಯೋಜಿಸಬೇಕು ಅಂದ್ರೆ ಆ ಬಗ್ಗೆ ಇಲ್ಲೀವರೆಗೂ ಯಾವುದೇ ಮನವಿಗಳು ಬಂದಿಲ್ಲ. ಒಂದು ವೇಳೆ ಬಂದ್ರೆ ಆ ಬಗ್ಗೆ ಪರಿಶೀಲಿಸ್ತೀವಿ ಎಂದಿದ್ದಾರೆ.
ಆದ್ರೆ ಹಿಂದೂ ಪರ ಹೋರಾಟಗಾರರು ಇಷ್ಟಕ್ಕೆ ಸುಮ್ಮನಾಗಿಲ್ಲ. ಯಾಕಂದ್ರೆ, ಬಿಬಿಎಂಪಿ ಗ್ರೀನ್ ಸಿಗ್ನಲ್ ಕೊಟ್ರೂ, ಪೊಲೀಸ್ ಇಲಾಖೆ ಮಾತ್ರ ಯಾವುದಕ್ಕೂ ಅನುಮತಿ ನೀಡುತ್ತಿಲ್ಲ. ಬದಲಾಗಿ ಯಾವುದೇ ಇತರೆ ಚಟುವಟಿಕೆಗೆ ಅನುಮತಿ ನೀಡಬಾರದೆಂದು ಬಿಬಿಎಂಪಿಗೆ ಪೊಲೀಸ್ ಇಲಾಖೆ ಪತ್ರ ಬರೆದಿದೆ. ಇದು ಹಿಂದೂ ಸಂಘಟನೆಗಳನ್ನ ಮತ್ತಷ್ಟು ಕೆರಳಿಸಿದೆ. ಹೀಗಾಗಿ ನಾಳೆಯೇ ಮುಖ್ಯಮಂತ್ರಿಗಳನ್ನ ಭೇಟಿಯಾಗಿ ಈ ಕುರಿತು ಮನವಿ ಪತ್ರ ಸಲ್ಲಿಸಲಿದ್ದಾರೆ. ಇದನ್ನೂ ಓದಿ: ಆರ್ಡರ್ ಮಾಡಿದ್ದು ತಮಿಳು ಭಾಷೆಯಲ್ಲಿ, ಸಿಕ್ಕಿತು ಉಚಿತ ಊಟ! ಎಲ್ಲಿ ಗೊತ್ತಾ?
ಸ್ವಾತಂತ್ರ್ಯೋತ್ಸವದಂದು ಈದ್ಗಾದಲ್ಲಿ ಹಾರುತ್ತಾ ತ್ರಿವರ್ಣ ಧ್ವಜ?
ಈ ಮಧ್ಯೆ ಈದ್ಗಾ ಮೈದಾನದಲ್ಲಿ ಹಿಂದೂ ಆಚರೆಗಳಿಗೂ ಅವಕಾಶ ನೀಡಬೇಕೆಂದು ಕೋರಿ ಕನ್ನಡ ಸಂಘಟನೆಗಳು ನಾಳೆ ಮುಖ್ಯಮಂತ್ರಿಗಳನ್ನ ಭೇಟಿಯಾಗಲಿವೆ. ಇದು ಕೇವಲ ಬಿಬಿಎಂಪಿ ಮೈದಾನ, ಇಷ್ಟಾದ್ರೂ ಕೇವಲ ಒಂದು ಸಮುದಾಯಕ್ಕೆ ಮಾತ್ರ ಇಲ್ಲಿ ಆಚರಣೆ ಅವಕಾಶವೇಕೆ ಎಂದು ಮನವಿ ಸಲ್ಲಿಸಲಿದ್ದಾರೆ. ಅಲ್ಲದೇ ಈದ್ಗಾದಲ್ಲಿ ರಾಷ್ಟ್ರಧ್ವಜ ಹಾರಿಸಲು ಹಾಗೆ, ಗಣೇಶೋತ್ಸವ, ನವರಾತ್ರಿ ಉತ್ಸವ ಆಚರಿಸಲು ಅವಕಾಶ ಕೋರಲಿವೆ. ಈ ಕುರಿತು ಸಿಎಂ ಸೂಕ್ತ ನಿರ್ಧಾರ ಕೈಗೊಳ್ಳಲು ಒಂದು ತಿಂಗಳ ಡೆಡ್ ಲೈನ್ ನೀಡೋದಾಗಿ ಹಿಂದೂ ಸಂಘಟನೆಗಳು ಎಚ್ಚರಿಸಿವೆ.