
ಬೆಂಗಳೂರು, ನವೆಂಬರ್ 10: ಬೆಂಗಳೂರಿನ (Bengaluru) ನಾಯಂಡಹಳ್ಳಿ ಜಂಕ್ಷನ್ನಿಂದ ಬನಶಂಕರಿ ಕಡೆಗೆ ಸಂಪರ್ಕ ಕಲ್ಪಿಸುವ ಹೊಸಕೆರೆಹಳ್ಳಿ ಫ್ಲೈ ಓವರ್ (Hosakerehalli PES Flyover) ಕಾಮಗಾರಿ ಕೊನೆಗೂ ಮುಗಿಯುವ ಹಂತಕ್ಕೆ ಬಂದಿದೆ. ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ರಾಜರಾಜೇಶ್ವರಿ ನಗರ ಕ್ಷೇತ್ರ ವ್ಯಾಪ್ತಿಯ ಹೊರ ವರ್ತುಲ ರಸ್ತೆಯ ಪಿಇಎಸ್ ಕಾಲೇಜು ಬಳಿಯ ಹೊಸಕೆರೆಹಳ್ಳಿ ಜಂಕ್ಷನ್‌ನಲ್ಲಿ 500 ಮೀಟರ್ ಮೇಲ್ಸೇತುವೆ ಕಾಮಗಾರಿಗೆ ಹಲವು ವಿಘ್ನಗಳು ಎದುರಾಗಿ ವಿಳಂಬ ಆಗಿತ್ತು. ಶೇಕಡಾ 90 ರಷ್ಟು ಕಾಮಗಾರಿ ಮುಗಿದಿದ್ದು, ಮುಂದಿನ ವಾರ ವಾಹನಗಳ ಪ್ರಾಯೋಗಿಕ ಸಂಚಾರಕ್ಕೆ ಅನುವು ಮಾಡಿಕೊಡುವ ಸಾಧ್ಯತೆ ಇದೆ. ಬಳಿಕ ಅಧಿಕೃತವಾಗಿ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ.
ಹೊಸಕೆರೆಹಳ್ಳಿ ಫ್ಲೈ ಓಪನ್ ಕಾಮಗಾರಿ ಮುಗಿಯಿತು ಎಂಬ ಒಳ್ಳೆ ಸುದ್ದಿ ಒಂದೆಡೆಯಾದರೆ, ಸಮೀಪದಲ್ಲೇ ಇರುವ ಆರ್ಆರ್ ನಗರ ಪ್ರವೇಶ ದ್ವಾರ ಬಳಿಯ ಫ್ಲೈಓವರ್ ಕಾಮಗಾರಿ ಕಳೆದ 2 ವರ್ಷಗಳಿಂದಲೂ ಅತಂತ್ರ ಸ್ಥಿತಿಯಲ್ಲೇ ಇದೆ. ಮೈಸೂರು ರಸ್ತೆಯೊಂದಿಗೆ ಸಂಪರ್ಕಿಸಲು 2022 ರಲ್ಲಿ ಪ್ರಾರಂಭಿಸಲಾದ 71 ಕೋಟಿ ರೂ.ಗಳ 300 ಮೀಟರ್ ಉದ್ದದ ಯೋಜನೆಯು ಹಳ್ಳ ಹಿಡಿದಿದೆ. ಮೈಸೂರು ರಸ್ತೆ RR ನಗರ ಆರ್ಚ್ ಬಳಿ ಸಂಚಾರ ದಟ್ಟಣೆ ಕಡಿಮೆ ಮಾಡುವ ಉದ್ದೇಶಕ್ಕೂ ಧಕ್ಕೆ ಉಂಟಾಗಿದೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಹಿತಾಸಕ್ತಿ ಕೊರತೆಯೇ ಇದಕ್ಕೆ ಕಾರಣ ಅಂತ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ: ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳ ಬಿಂದಾಸ್ ಲೈಫ್: ಹಳೇ ವಿಡಿಯೋವೆಂದ ಜೈಲಾಧಿಕಾರಿಗಳು! ಹೊಸದೆನ್ನಲು ಇಲ್ಲಿವೆ ಸಾಕ್ಷ್ಯ
ಒಟ್ಟಾರೆಯಾಗಿ, ಬೆಂಗಳೂರು ಮಹಾನಗರ ಇತ್ತೀಚೆಗೆ ಟ್ರಾಫಿಕ್ ಜಾಮ್ ವಿಚಾರಕ್ಕೆ ಕುಖ್ಯಾತಿಗೆ ಗುರಿಯಾಗಿದೆ. ಹೀಗಾಗಿ ಫ್ಲೈ ಓವರ್ ಗಳು ಟ್ರಾಫಿಕ್ ನಿವಾರಣೆಗೆ ಅನಿವಾರ್ಯವಾಗಿದೆ. ಹೊಸಕೆರೆಹಳ್ಳಿ ಶೀಘ್ರವೇ ವಾಹನ ಸವಾರರ ಬಳಕೆಗೆ ಅನುವು ಮಾಡಿಕೊಡಬೇಕು ಎಂಬ ಆಗ್ರಹ ಒಂದೆಡೆಯಾದರೆ, RR ನಗರ ಫ್ಲೈ ಓವರ್ ಕಾಮಗಾರಿ ಬಗ್ಗೆಯೂ ಗಮನ ಹರಿಸಿ ಎಂಬುದು ಜನರ ಒತ್ತಾಯವಾಗಿದೆ.
ವರದಿ: ಲಕ್ಷ್ಮಿ ನರಸಿಂಹ, ಟಿವಿ9 ಬೆಂಗಳೂರು
Published On - 8:03 am, Mon, 10 November 25