ಬೆಂಗಳೂರು ರಸ್ತೆ ಗುಂಡಿ ಮುಚ್ಚಲು ನೀಡಿದ್ದ ಡೆಡ್ಲೈನ್ ಅಂತ್ಯ! ಅಂಕಿ ಅಂಶ ಬಿಚ್ಚಿಡದ ಜಿಬಿಎ
Bengaluru potholes; ಬೆಂಗಳೂರಿನ ರಸ್ತೆ ಗುಂಡಿಗಳನ್ನು ಮುಚ್ಚಲು ನೀಡಿದ್ದ ಗಡುವು ಮುಕ್ತಾಯಗೊಂಡಿದೆ. ಆದರೆ, ಬೆಂಗಳೂರಿನ ರಸ್ತೆಗಳಲ್ಲಿ ಗುಂಡಿಗಳು ಹಾಗೆಯೇ ಉಳಿದುಕೊಂಡಿವೆ. ಜಿಬಿಎ ಐದು ತಂಡಗಳನ್ನು ರಚಿಸಿ 18,000 ಗುಂಡಿಗಳನ್ನು ಮುಚ್ಚಿರುವುದಾಗಿ ಹೇಳಿದ್ದರೂ, ವಾಸ್ತವದಲ್ಲಿ ಪರಿಹಾರ ಕಲ್ಪಿಸಿಲ್ಲ. ವಯಸ್ಸಾದವರು, ಗರ್ಭಿಣಿಯರು ಮತ್ತು ಮಕ್ಕಳೊಂದಿಗೆ ಪ್ರಯಾಣಿಸುವುದು ಅಪಾಯಕಾರಿಯಾಗಿದೆ. ಜಿಬಿಎ ಸರಿಯಾದ ಅಂಕಿಅಂಶಗಳನ್ನು ಬಹಿರಂಗಪಡಿಸುತ್ತಿಲ್ಲ.
ಬೆಂಗಳೂರು, ನವೆಂಬರ್ 10: ‘ಟಿವಿ9’ ವಾಹಿನಿಯು ಬೆಂಗಳೂರಿನ ರಸ್ತೆ ಗುಂಡಿಗಳ ಕುರಿತು ನಿರಂತರ ಅಭಿಯಾನ ನಡೆಸಿತ್ತು. ನಂತರ ಎಚ್ಚೆತ್ತುಕೊಂಡಿದ್ದ ಸರ್ಕಾರವು ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಂಡಿರುವುದಾಗಿ ತಿಳಿಸಿತ್ತು. ಜೊತೆಗೆ, ಐದು ತಂಡಗಳನ್ನು ರಚಿಸಿ ಇಲ್ಲಿಯವರೆಗೆ 18,000 ರಸ್ತೆ ಗುಂಡಿಗಳನ್ನು ಮುಚ್ಚಿರುವುದಾಗಿ ಜಿಬಿಎ ಹೇಳಿಕೊಂಡಿತ್ತು. ಅಲ್ಲದೆ, ಇನ್ನು ಮೂರು ದಿನಗಳಲ್ಲಿ ಎಲ್ಲಾ ಗುಂಡಿಗಳನ್ನು ಮುಚ್ಚುವುದಾಗಿ ಭರವಸೆ ನೀಡಿತ್ತು. ಆದರೆ, ವಾಸ್ತವ ಇದಕ್ಕೆ ವಿರುದ್ಧವಾಗಿದೆ. ಹಲವೆಡೆ ಕೇವಲ ಟಾರ್ ಹಾಕಿ ಗುಂಡಿಗಳನ್ನು ತಾತ್ಕಾಲಿಕವಾಗಿ ಮುಚ್ಚುವ ಪ್ರಯತ್ನ ನಡೆದಿದೆ. ನೀಡಿದ ಗಡುವು ಅಂತ್ಯಗೊಂಡಿದ್ದರೂ, ಅನೇಕ ರಸ್ತೆ ಗುಂಡಿಗಳು ಇನ್ನೂ ಹಾಗೆಯೇ ಉಳಿದುಕೊಂಡಿವೆ. ಜಿಬಿಎ ಹೇಳಿದಂತೆ 18,000 ಗುಂಡಿಗಳನ್ನು ಮುಚ್ಚುವುದು ಇಷ್ಟು ಕಡಿಮೆ ಅವಧಿಯಲ್ಲಿ ಸಾಧ್ಯವೇ ಎಂಬ ಪ್ರಶ್ನೆ ಮೂಡಿದೆ. ಬೆಂಗಳೂರಿನ ಜನರು, ವಿಶೇಷವಾಗಿ ವಯಸ್ಸಾದವರು, ಗರ್ಭಿಣಿಯರು ಮತ್ತು ಮಕ್ಕಳೊಂದಿಗೆ ಪ್ರಯಾಣಿಸುವವರು ಪ್ರತಿ ರಸ್ತೆಯಲ್ಲೂ ಗುಂಡಿಗಳ ಬಗ್ಗೆ ಆತಂಕಪಡುವಂತಾಗಿದೆ. ಜಿಬಿಎ ರಸ್ತೆ ಗುಂಡಿಗಳ ಕುರಿತಾದ ನಿಖರ ಅಂಕಿಅಂಶಗಳನ್ನು ಬಹಿರಂಗಪಡಿಸದೇ ಇರುವುದು ಅನುಮಾನಗಳಿಗೆ ಕಾರಣವಾಗಿದೆ.

